ಬೆಂಗಳೂರಿನಲ್ಲಿ ನೆಲೆಸಿರುವ ಟಿಬೇಟಿಯನ್ ಪ್ರಜೆಯೊಬ್ಬರು ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕನ್ನಡ ಮಾತಡಲ್ಲ, ಬೆಂಗಳೂರಿನಲ್ಲಿ ಇದ್ದ ಮಾತ್ರಕ್ಕೆ ಕನ್ನಡ ಮಾತನಾಡಬೇಕು ಎಂಬ ರೂಲ್ಸ್ ಇಲ್ಲ, ಹಿಂದಿ ರಾಷ್ಟ್ರಭಾಷೆ ಹಿಂದಿ ಕಲಿರಿ ನಾವು ಕನ್ನಡ ಕಲಿಯಲ್ಲ ಎಂದು ಬೆಂಗಳೂರಿನಲ್ಲಿ ಉದ್ಯೋಗದ ಕಾರಣಕ್ಕೆ ನೆಲೆಸಿರುವ ಅನೇಕ ಉತ್ತರ ಭಾರತೀಯರು ದುರಂಕಾರ ತೋರುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬರು ವಿದೇಶಿ ಪ್ರಜೆ ಕನ್ನಡ ಮಾತನಾಡುವ ರೀತಿ ಕೇಳಿದರೆ, ಎಂತಹವರಿಗೂ ಅಚ್ಚರಿ ಉಂಟು ಮಾಡುತ್ತದೆ. ಕನ್ನಡ ಗೊತ್ತಿಲ್ಲ ಎಂದು ದುರಂಹಾರ ಮಾಡುವ ಉತ್ತರ ಭಾರತೀಯರು ಇವರನ್ನು ನೋಡಿ ಕಲಿಯೋದು ತುಂಬಾ ಇದೆ.

ಹೌದು ಟಿಬೇಟಿಯನ್ ಪ್ರಜೆಯೊಬ್ಬರು ಬೆಂಗಳೂರಿನಲ್ಲಿ ಬೆಂಗಳೂರಿಗರಿಗಿಂತಲೂ ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದು, ಅವರು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. @PrishaSargam ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಕಾವೇರಿ ನೀರು ಕುಡಿದ ನಂತರ ನೀವು ಸ್ವಯಂಚಾಲಿತವಾಗಿ ಕನ್ನಡ ಮಾತನಾಡುತ್ತೀರಿ ಎಂಬುವ ಇವರ ಈ ಹೇಳಿಕೆ ನಮ್ಮ ಸಹ ಉತ್ತರ ಭಾರತೀಯರಿಗೆ ಸೂಟ್ ಆಗಲ್ಲ ಎಂದು ಅವರು ಬರೆದುಕೊಂಡು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಟಿಬೇಟಿಯನ್ ಪ್ರಜೆಯೊಬ್ಬರು, ತಮ್ಮ ಮಾತೃ ಭಾಷೆಗಿಂತ ಹೆಚ್ಚು ಕನ್ನಡ ಭಾಷೆಯನ್ನು ತುಂಬಾ ಚೆನ್ನಾಗಿ ಮಾತನಾಡುವ ಸಾಕಷ್ಟು ಟಿಬೇಟಿಯನ್ ಜನರ ಬಗ್ಗೆ ನನಗೆ ಗೊತ್ತು. ನಾನು ಕನ್ನಡದಲ್ಲಿ ಮಾತನಾಡುವಾಗ ಸ್ಥಳೀಯರು ನನ್ನನ್ನು ತುಂಬಾ ಗೌರವಿಸುತ್ತಾರೆ. ಹೊರಗಿನವರು ತಮ್ಮ ಭಾಷೆಯನ್ನು ಕಲಿಯಲು ಪ್ರಯತ್ನ ಮಾಡ್ತಿದ್ದಾರಲ್ಲ ಎಂದು ಅವರು ಹೆಮ್ಮೆಪಡುತ್ತಾರೆ ಎಂದು ಈ ಟಿಬೇಟಿಯನ್ ವ್ಯಕ್ತಿ ಹೇಳಿದ್ದಾರೆ.

ಕನ್ನಡ ಗೊತ್ತಿಲ್ಲ ಎಂಬ ಸ್ಥಳೀಯರಲ್ಲದವರು ಆಗಾಗ್ಗೆ ನೆಪ ಹೇಳುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗ ನನಗೆ ಕನ್ನಡ ಗೊತ್ತಿಲ್ಲ ಎಂಬುದೇ ಇಲ್ಲ, ಎಲ್ಲವೂ ಹೊರಟೋಗಿದೆ ಕಾವೇರಿ ನೀರು ಕುಡಿದ್ಮೇಲೆ ಬರ್ಲೇಬೇಕು ಕನ್ನಡ ಅಟೋಮೇಟಿಕ್ ಆಗಿ ಎಂದು ಅವರು ಹೇಳಿದ್ದಾರೆ. ಅವರ ಈ ಮಾತು ಅನೇಕರನ್ನು ಆಕರ್ಷಿಸಿದ್ದು, ವೀಡಿಯೋ ಸಾಕಷ್ಟು ವೈರಲ್ ಆಗ್ತಿದೆ. ಅನೇಕರು ಈ ಟಿಬೇಟಿಯನ್ ವ್ಯಕ್ತಿಯ ಕನ್ನಡ ಪ್ರೇಮಕ್ಕೆ ಬಹುಪರಾಕ್ ಎಂದಿದ್ದಾರೆ.

ಒಳ್ಳೆಯ ವಿಷಯ. ಟಿಬೆಟಿಯನ್ನರು ಕನ್ನಡ ಕಲಿಯಬಹುದಾದರೆ, ಕರ್ನಾಟಕದಲ್ಲಿ ವಾಸಿಸುವ ಭಾರತದ ಇತರೆಡೆಯ ಜನರಿಗೆ ಏಕೆ ಸಾಧ್ಯವಿಲ್ಲ? ಇದು ಅವರಿಗೆ ಆಹಾರ, ನೀರು ಮತ್ತು ಆಶ್ರಯ ನೀಡುವ ಭೂಮಿಯ ಮೇಲಿನ ಗೌರವದ ವಿಚಾರ, ಸ್ಥಳೀಯ ಭಾಷೆಯನ್ನು ಮಾತನಾಡುವ ಮೂಲಕ, ನೀವು ನಿಮ್ಮ ಗೌರವವನ್ನು ತೋರಿಸುತ್ತೀರಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ವಾವ್ ಈತ ಮಹಾನ್ ಮನುಷ್ಯ, ಒಂದು ವಾಕ್ಯದಿಂದ ಅರ್ಥಮಾಡಿಕೊಂಡರೆ, ಅದು ಕನ್ನಡಿಗರ ಹೃದಯ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನ್ನ ಕಟ್ಟಡದ ನೇಪಾಳಿ ಕಾವಲುಗಾರ ನಿರರ್ಗಳವಾಗಿ ಕನ್ನಡ ಮಾತನಾಡುತ್ತಾನೆ, ನನಗಿಂತ ಚೆನ್ನಾಗಿ (ನಾನು ತಮಿಳಿಗ). ಬೆಂಗಳೂರಿನಲ್ಲಿರುವ ಹೆಚ್ಚಿನ ನೇಪಾಳಿಗಳು ಕನ್ನಡ ಮಾತನಾಡುತ್ತಾರೆ ಏಕೆಂದರೆ ಅವರ ಉದ್ಯೋಗಗಳು ಕನ್ನಡವನ್ನು ತಿಳಿದುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಮನುಷ್ಯ ಇಷ್ಟವಾದ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ.

Scroll to load tweet…