ಬ್ರಿಟನ್‌ನಲ್ಲಿ 13 ವರ್ಷದ ಆಲ್ಫಿ ಪ್ಯಾಟನ್ ತಂದೆಯಾಗಿದ್ದಾನೆ ಎಂಬ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಆದರೆ, ಡಿಎನ್‌ಎ ಪರೀಕ್ಷೆಯ ನಂತರ  ಜೈವಿಕ ತಂದೆಯಲ್ಲ ಎಂಬ ಸತ್ಯ ಬಹಿರಂಗವಾಯಿತು. ಈ ಪ್ರಕರಣವು ಬ್ರಿಟನ್‌ನಲ್ಲಿ  ಲೈಂಗಿಕ ಶಿಕ್ಷಣದ ಅಗತ್ಯತೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿತು.

ಲಂಡನ್ : ಬ್ರಿಟನ್‌ನಲ್ಲಿ ಆಲ್ಫಿ ಪ್ಯಾಟನ್ ಎಂಬ ಬಾಲಕನೊಬ್ಬ 13 ವರ್ಷದ ವಯಸ್ಸಿನಲ್ಲೇ ತಂದೆಯಾಗಿದ್ದಾನೆ ಎಂಬ ಸುದ್ದಿ ಮೊದಲಿಗೆ ವ್ಯಾಪಕವಾಗಿ ಹರಡಿತ್ತು. ಆಲ್ಫಿ ನವಜಾತ ಶಿಶುವನ್ನು ಕೈಯಲ್ಲಿ ಹಿಡಿದಿರುವ ಫೋಟೋಗಳ ಸುದ್ದಿ ಪ್ರಕಟವಾಯ್ತು. ಇದರಿಂದ ಹದಿಹರೆಯದ ಗರ್ಭಧಾರಣೆ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿತು.

Add Asianetnews Kannada as a Preferred SourcegooglePreferred

ಆಲ್ಫಿ ಪ್ಯಾಟನ್ ತನ್ನ ಗೆಳತಿ 15 ವರ್ಷದ ಚಾಂಟೆಲ್ ಸ್ಟೆಡ್‌ಮನ್ ಎಂಬ ಹದಿಹರೆಯದ ಬಾಲಕಿ ಗರ್ಭಿಣಿಯಾಗಿದ್ದು, ಆ ಗರ್ಭಧಾರಣೆಗೆ ಆಲ್ಫಿಯೇ ಕಾರಣ ಎಂದು ಹೇಳಲಾಗಿತ್ತು. ಆದರೆ ನಂತರ ನಡೆದ ತನಿಖೆ ಮತ್ತು ಡಿಎನ್ಎ ಪರೀಕ್ಷೆಗಳ ಬಳಿಕ ಈ ಮಾಹಿತಿ ತಪ್ಪು ಎಂದು ಬಹಿರಂಗವಾಯಿತು. ಆಲ್ಫಿ ಮಗುವಿನ ಜೈವಿಕ ತಂದೆಯಲ್ಲ ಎಂದು ನಂತರ ಸುದ್ದಿಯಾಯ್ತು. ಆದರೆ ಇದು ಎಷ್ಟು ನಿಜ ಎಂಬುದು ವರ್ಷಗಳ ಕಾಲ ಲಂಡನ್‌ನಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿತ್ತು.

ಆರ್ಥಿಕವಾಗಿ ಎಂದರೇನು? ಎಂದು ಕೇಳಿದ್ದ ಆಲ್ಫಿ

ಮಗುವನ್ನು ಆರ್ಥಿಕವಾಗಿ ಹೇಗೆ ಪೋಷಿಸುವಿರಿ ಎಂದು ಕೇಳಿದಾಗ, ಆಲ್ಫಿ “ಆರ್ಥಿಕವಾಗಿ ಎಂದರೇನು?” ಎಂದು ಕೇಳಿರುವ ವಿಡಿಯೊ ಸಾರ್ವಜನಿಕ ಗಮನ ಸೆಳೆದಿತ್ತು. ಈ ದೃಶ್ಯಗಳು ಹದಿಹರೆಯದ ಮಕ್ಕಳ ಮನಸ್ಸಿನ ಅಪ್ರಾಪ್ತತೆ ಮತ್ತು ಜವಾಬ್ದಾರಿಯ ಕೊರತೆಯನ್ನು ಮತ್ತೊಮ್ಮೆ ಸಮಾಜದ ಮುಂದೆ ತಂದು ನಿಲ್ಲಿಸಿತು.

ವರದಿ ಪ್ರಕಾರ, ಚಾಂಟೆಲ್ ಗರ್ಭನಿರೋಧಕ ಮಾತ್ರೆಗಳನ್ನು ಬಳಸುತ್ತಿದ್ದರೂ ಒಂದು ಮಾತ್ರೆಯನ್ನು ತಪ್ಪಿಸಿಕೊಂಡಿದ್ದರಿಂದ ಗರ್ಭಿಣಿ ಆದಳು ಎಂದು ವರದಿ ಆಯ್ತು. ಈ ಬಗ್ಗೆ ಮಾಧ್ಯಗಳು ಕುಟುಂಬ ನಿವಾಸದ ಬಳಿ ಜಮಾಯಿಸಿದರೂ, ಸ್ನೇಹಿತರು ಮತ್ತು ಸಂಬಂಧಿಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹದಿಹರೆಯದ ಬಾಲಕ–ಬಾಲಕಿಯನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.

ಪೊಲೀಸ್ ಇಲಾಖೆ ಮತ್ತು ಮಕ್ಕಳ ಸೇವಾ ಸಂಸ್ಥೆ ಜಂಟಿ ಹೇಳಿಕೆ

ಈ ಪ್ರಕರಣದ ಹಿನ್ನೆಲೆಯಲ್ಲಿ ಈಸ್ಟ್‌ಬೋರ್ನ್‌ನ ಪೊಲೀಸ್ ಇಲಾಖೆ ಮತ್ತು ಮಕ್ಕಳ ಸೇವಾ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿ 13 ವರ್ಷದ ಬಾಲಕನೊಂದಿಗೆ ಸಂಬಂಧ ಹೊಂದಿದ್ದ ಪರಿಣಾಮ 15 ವರ್ಷದ ಬಾಲಕಿ ಗರ್ಭಿಣಿಯಾಗಿರುವ ಬಗ್ಗೆ ನಮಗೆ ಮಾಹಿತಿ ಇದೆ. ಇಬ್ಬರು ಅಪ್ರಾಪ್ತರಿಗೂ ಅಗತ್ಯವಾದ ಬೆಂಬಲ ಮತ್ತು ರಕ್ಷಣೆ ಒದಗಿಸಲಾಗುತ್ತಿದೆ ಎಂದು ಹೇಳಿಕೆ ನೀಡಿತ್ತು.

ಇದರ ನಡುವೆ, ಡಿಎನ್ಎ ಪರೀಕ್ಷೆಗಳ ಬಳಿಕ ಆಲ್ಫಿ ಪ್ಯಾಟನ್ ಮಗುವಿನ ತಂದೆಯಲ್ಲ ಎಂದು ದೃಢಪಟ್ಟಿದೆ. ಚಾಂಟೆಲ್ ವಾಸಿಸುವ ಈಸ್ಟ್‌ಬೋರ್ನ್ ಎಸ್ಟೇಟ್‌ನಲ್ಲೇ ಇರುವ 15 ವರ್ಷದ ಟೈಲರ್ ಬಾರ್ಕರ್ ಎಂಬ ಬಾಲಕನೇ ಮಗುವಿನ ಜೈವಿಕ ತಂದೆ ಎಂದು ವರದಿಯಾಯ್ತು. ಈ ಬೆಳವಣಿಗೆಯ ನಂತರ, ಆಲ್ಫಿ ತಾನು ತಂದೆಯಲ್ಲ ಎಂಬ ಸತ್ಯ ತಿಳಿದು “ತೀವ್ರವಾಗಿ ನೋವು ಅನುಭವಿಸಿದ್ದಾನೆ” ಎಂದು ಆತನ ಕುಟುಂಬ ಹೇಳಿತ್ತು. ಆದರೆ 2009ರಲ್ಲಿ ನಡೆದ ಈ ಪ್ರಕರಣ ಅನೇಕ ವರ್ಷಗಳವರೆಗೆ ಚರ್ಚೆ ಮತ್ತು ಬ್ರಿಟನ್ ನಲ್ಲಿ ಲೈಂಗಿಕ ಶಿಕ್ಷಣದ ಅಗತ್ಯತೆಗೆ ಮುನ್ನಡಿ ಬರೆದಿದ್ದು ಸುಳ್ಳಲ್ಲ. ಯುಕೆ ಸರ್ಕಾರವು ಉಚಿತ ಗರ್ಭನಿರೋಧಕಗಳನ್ನು ವಿತರಿಸುವ ಮತ್ತು ಲೈಂಗಿಕ ಶಿಕ್ಷಣವನ್ನು ವಿಸ್ತರಿಸುವ ಮೂಲಕ ಹದಿಹರೆಯದ ಗರ್ಭಧಾರಣೆಯನ್ನು ನಿಲ್ಲಿಸುವ ಪ್ರಯತ್ನವನ್ನು ಇಂದಿಗೂ ಮಾಡುತ್ತಿದೆ.

ಲೈಂಗಿಕ ಶಿಕ್ಷಣದ ಅರಿವು

ಈ ಪ್ರಕರಣ ಬ್ರಿಟನ್‌ನಲ್ಲಿ ಹದಿಹರೆಯದ ಗರ್ಭಧಾರಣೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿತು. ಯುರೋಪ್‌ನಲ್ಲೇ ಹೆಚ್ಚಿನ ಹದಿಹರೆಯದ ಗರ್ಭಧಾರಣೆಯ ಪ್ರಮಾಣ ಹೊಂದಿರುವ ದೇಶಗಳಲ್ಲಿ ಬ್ರಿಟನ್ ಕೂಡ ಒಂದು ಎಂಬುದು ಸರ್ಕಾರಿ ಅಂಕಿಅಂಶಗಳು ಬಹಿರಂಗ ಪಡಿಸಿವೆ. 2006ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 39,000 ಬಾಲಕಿಯರು ಗರ್ಭಿಣಿಯಾಗಿದ್ದು, ಅವರಲ್ಲಿ 7,000ಕ್ಕೂ ಹೆಚ್ಚು ಮಂದಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು.

2000ರಿಂದ 2005ರ ಅವಧಿಯಲ್ಲಿ ಬ್ರಿಟನ್‌ನಲ್ಲಿ 15–19 ವರ್ಷದ ಪ್ರತಿ 1,000 ಮಹಿಳೆಯರಿಗೆ ಸರಾಸರಿ 27 ಜನನಗಳು ಸಂಭವಿಸಿದ್ದವು. ನಂತರ ನೀಡಿದ ತೀವ್ರ ಮಟ್ಟದ ಲೈಂಗಿಕ ಶಿಕ್ಷಣದ ಹಿನ್ನೆಲೆಯಲ್ಲಿ ಈ ರೀತಿಯ ಘಟನೆಗಳು ತೀವ್ರ ಅಂದರೆ 70% ಕಡಿಮೆ ಆಗಿತ್ತು. ಆದರೆ 2022ರಲ್ಲಿ ಮತ್ತೆ ಸ್ವಲ್ಪ ಏರಿಕೆ ದಾಖಲಿಸಿದೆ. 2025 ರಲ್ಲಿ ಬಿಡುಗಡೆಯಾದ ದತ್ತಾಂಶವು ಹದಿಹರೆಯದ ಗರ್ಭಧಾರಣೆಯ ದರಗಳು 14 ವರ್ಷಗಳಲ್ಲಿ ಮೊದಲ ಬಾರಿಗೆ 2022 ರಲ್ಲಿ ಏರಿಕೆಯಾಗಿದೆ ಎಂದು ತೋರಿಸಿದೆ. ಇದು ಸಾಂಕ್ರಾಮಿಕ ಕೋವಿಡ್ ಬಳಿಕ ಎಂದು ಉಲ್ಲೇಖಿಸಿದೆ. 2022 ರಲ್ಲಿ 1,000 ಕ್ಕೆ 2.2% ಏರಿಕೆ ಕಂಡಿದೆ.

ಇದನ್ನು ಹೋಲಿಸಿದರೆ ಸ್ಪೇನ್‌ನಲ್ಲಿ 10, ಫ್ರಾನ್ಸ್‌ನಲ್ಲಿ 8 ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ಕೇವಲ 5 ಜನನಗಳಷ್ಟೇ ದಾಖಲಾಗಿವೆ. ಆದರೆ ಈ ಪ್ರಮಾಣ ಅಮೆರಿಕದ ಹೋಲಿಕೆಯಲ್ಲಿ ಕಡಿಮೆಯೇ ಆಗಿದ್ದು, ಅಮೆರಿಕದಲ್ಲಿ 15–19 ವರ್ಷದ ಪ್ರತಿ 1,000 ಮಹಿಳೆಯರಿಗೆ 44 ಜನನ ದಾಖಲಾಗಿವೆ. 

ಹದಿಹರೆಯದ ಗರ್ಭಧಾರಣೆ ಖ್ಯಾತಿ ಬ್ರಿಟನ್‌ ಗೆ ತೀವ್ರ ಮುಜುಗರ ಉಂಟುಮಾಡಿತ್ತು. 1999ರಲ್ಲಿ ಆಗಿನ ಪ್ರಧಾನಿ ಟೋನಿ ಬ್ಲೇರ್, “14 ವರ್ಷದವರಾಗಿದ್ದಾಗಲೂ ನೀವು ಮಗುವಿನಂತೆ. ನಾಗರಿಕ ಸಮಾಜದಲ್ಲಿ ಮಕ್ಕಳು ಮಕ್ಕಳನ್ನು ಹೊಂದಬಾರದು ಎಂದು ಹೇಳಿ, ಈ ಸ್ಥಿತಿಯನ್ನು ನಾಚಿಕೆಗೇಡಿನ ಸಂಗತಿಯಾಗಿ ವರ್ಣಿಸಿದ್ದರು. ಆ ನಂತರ ಸರ್ಕಾರ ಜಾಹೀರಾತು ಮತ್ತು ಶೈಕ್ಷಣಿಕ ಅಭಿಯಾನಗಳಿಗೆ ಲಕ್ಷಾಂತರ ಪೌಂಡ್‌ಗಳನ್ನು ವೆಚ್ಚ ಮಾಡಿತ್ತು.

ಯುವಜನರಿಗೆ ಲೈಂಗಿಕ ಆರೋಗ್ಯ ಕುರಿತು ಸಲಹೆ ನೀಡುವ ಯುಕೆ ಸಂಸ್ಥೆ ‘ಬ್ರೂಕ್’ ಪ್ರಕಾರ, 1998ರಿಂದ ಹದಿಹರೆಯದ ಗರ್ಭಧಾರಣೆ ಪ್ರಮಾಣವು ಸುಮಾರು 12 ಶೇಕಡಾ ಇಳಿಕೆಯಾಗಿದೆ. ಆದರೆ ಇನ್ನೂ ಹೆಚ್ಚಿನ ಜಾಗೃತಿ ಮತ್ತು ಶಿಕ್ಷಣ ಅಗತ್ಯವಿದೆ ಎಂದು ಹೇಳಿತು ಯುವತಿಯರ ಮೇಲೆ ಮಾತ್ರ ಗಮನ ಹರಿಸುವ ಬದಲು ಯುವಕರಿಗೂ ಸಮಾನವಾಗಿ ಮಾಹಿತಿ ಮತ್ತು ಬೆಂಬಲ ನೀಡಬೇಕು ಎಂದು ಬ್ರೂಕ್ ಸಂಸ್ಥೆ ಹೇಳಿ ಆ ನಿಟ್ಟಿನಲ್ಲಿ ತೀವ್ರ ಕೆಲಸ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಬ್ರಿಟಿಷ್ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ಮೊದಲಿನಿಂದಲೇ ಪರಿಚಯಿಸಲಾಗಿದೆ. ಇಲ್ಲಿ ಕಿಂಡರ್‌ಗಾರ್ಟನ್‌ವರೆಗಿನ ಕಡಿಮೆ ಶ್ರೇಣಿಗಳ ಮಕ್ಕಳಿಗೂ ಮೂಲಭೂತ ಲೈಂಗಿಕ ಶಿಕ್ಷಣ ನೀಡಲಾಗುತ್ತದೆ.