ಓಪನ್‌ಎಐನ ಟ್ರಾಪಿಟ್ ಬನ್ಸಾಲ್ ಮೆಟಾದ ಸೂಪರ್ ಇಂಟೆಲಿಜೆನ್ಸ್ ಘಟಕಕ್ಕೆ ಸೇರಿದ್ದಾರೆ. ₹854 ಕೋಟಿ ಬೋನಸ್ ಪಡೆದಿರಬಹುದು ಎಂಬ ವರದಿಗಳಿವೆ. ChatGPT ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬನ್ಸಾಲ್, ಈಗ ಮೆಟಾದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಭಾರತೀಯ ಮೂಲದ ಸಂಶೋಧಕ ಟ್ರಾಪಿಟ್ ಬನ್ಸಾಲ್ ಅವರು ಅಮೆರಿಕದ ಓಪನ್‌ಎಐಗೆ ವಿದಾಯ ಹೇಳಿ, ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾದ ಹೊಸ ಸೂಪರ್ ಇಂಟೆಲಿಜೆನ್ಸ್ ಘಟಕಕ್ಕೆ (Superintelligence Unit) ಸೇರಿದ್ದಾರೆ. ಮೆಟಾ, ಉನ್ನತ ಹುದ್ದೆ ಸೇರಿದ ಪರಿಣಿತ ಬನ್ಸಾಲ್‌ಗೆ 100 ಮಿಲಿಯನ್ ಡಾಲರ್ (ಸುಮಾರು ₹854.60 ಕೋಟಿ) ವೇತನ ನೀಡಿರಬಹುದು ಎಂದು ವರದಿ ಹೇಳಿದೆ. ಭಾರತೀಯ ಮೂಲದ ಪ್ರಸಿದ್ಧ ಎಐ ಸಂಶೋಧಕ ಟ್ರಾಪಿಟ್ ಬನ್ಸಾಲ್, ಮೆಟಾದ ಹೊಸ ಸೂಪರ್ ಇಂಟೆಲಿಜೆನ್ಸ್ ಘಟಕಕ್ಕೆ ಸೇರಲು ಓಪನ್‌ಎಐನ್ನು ತೊರೆದಿರುವ ವಿಷಯವನ್ನು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ತಾವು ಬರೆದ ಪೋಸ್ಟ್‌ನಲ್ಲಿ ದೃಢಪಡಿಸಿದರು. ಅವರು, “ಮೆಟಾಗೆ ಸೇರಲು ತುಂಬಾ ಉತ್ಸಾಹವಾಗಿದೆ! ಸೂಪರ್ ಇಂಟೆಲಿಜೆನ್ಸ್ ಈಗ ದೃಷ್ಟಿಯಲ್ಲಿ ಇದೆ,” ಎಂದು ಬರೆದಿದ್ದಾರೆ.

ಟ್ರಾಪಿಟ್ ಬನ್ಸಾಲ್ ಅವರು ಅಮೆರಿಕದ ಓಪನ್‌ಎಐ ಕಂಪನಿಯಲ್ಲಿ ಪ್ರಮುಖ ಎಐ ಸಂಶೋಧಕರಾಗಿದ್ದು, ChatGPT ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ, ಹಲವು ಎಐ ಸಂಶೋಧನೆಗಳಲ್ಲಿ ತಮ್ಮ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರಂತಹ ಪ್ರತಿಭಾವಂತರನ್ನು ಮೆಟಾ ತನ್ನ ಕಂಪನಿಗೆ ಆಕರ್ಷಿಸಲು ಈ ಬೃಹತ್ ಬೋನಸ್ ಪ್ಯಾಕೇಜು ಘೋಷಿಸಿದ್ದಾಗಿ ವರದಿಗಳು ತಿಳಿಸುತ್ತಿವೆ.

ಮೆಟಾದಿಂದ 100 ಮಿಲಿಯನ್ ಡಾಲರ್ ಸೇರ್ಪಡೆ ಬೋನಸ್ ಆಫರ್ ನೀಡಲಾಗಿದೆ ಎಂಬುದನ್ನು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರ ಕಾಮೆಂಟ್‌ಗಳು ದೃಢಪಡಿಸುತ್ತಿವೆ. ಮೆಟಾದ ಉನ್ನತ ಮಟ್ಟದ ನೇಮಕಾತಿಗಳಲ್ಲಿ ಟ್ರಾಪಿಟ್ ಬನ್ಸಾಲ್ ಕೂಡ ಪ್ರಮುಖವಾಗಿ ಸ್ಥಾನ ಪಡೆದಿದ್ದಾರೆ. ಈ ಬೋನಸ್‌ನಲ್ಲಿ ಅವರಿಗೆ ಕೂಡ ಪ್ರಮುಖ ಹಂಚಿಕೆ ಸಿಗಲಿದೆ ಎನ್ನಲಾಗಿದೆ.

ಟ್ರಾಪಿಟ್ ಬನ್ಸಾಲ್ ಯಾರು?

ಟ್ರಾಪಿಟ್ ಬನ್ಸಾಲ್ ಎಂಬವರು ಗಣಿತ, ಅಂಕಿಅಂಶಗಳು ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ದೃಢವಾದ ಹಿನ್ನೆಲೆ ಹೊಂದಿರುವ ಎಐ ಸಂಶೋಧಕರು. ಅವರ ಪ್ರಮುಖ ಸಂಶೋಧನಾ ಕ್ಷೇತ್ರಗಳು ನೈಸರ್ಗಿಕ ಭಾಷಾ ಸಂಸ್ಕರಣೆ (NLP), ಆಳ ಕಲಿಕೆ (Deep Learning) ಮತ್ತು ಮೆಟಾ-ಕಲಿಕೆ (Meta-Learning)ಗಳನ್ನೊಳಗೊಂಡಿವೆ.

ಅವರು ಐಐಟಿ ಕಾನ್ಪುರದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ವಿಜ್ಞಾನ ಪದವಿ ಪಡೆದಿದ್ದು, ಮ್ಯಾಸಚೂಸೆಟ್ಸ್ ಅಮ್ಹರ್ಸ್ಟ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿ ಅವಧಿಯಲ್ಲಿ ಅವರು ಬೆಂಗಳೂರು ಐಐಎಸ್‌ಸಿ, ಫೇಸ್‌ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್‌ಗಳಲ್ಲಿ ಸಂಶೋಧನಾ ಇಂಟರ್ನ್‌ಶಿಪ್ ಹುದ್ದೆಗಳನ್ನು ವಹಿಸಿದ್ದರು.  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದು, ಬೇಸಿಯನ್ ಮಾಡೆಲಿಂಗ್ ಮತ್ತು ಇನ್‌ಫರೆನ್ಸ್ ವಿಧಾನಗಳ ಮೇಲೆ ಗಮನಹರಿಸಿದ್ದರು. ಈ ಎಲ್ಲಾ ಅನುಭವಗಳ ನಂತರ ಅವರು 2022ರಲ್ಲಿ ಓಪನ್‌ಎಐಗೆ ಸೇರಿದ್ದರು.

2017ರಲ್ಲಿ ಅವರು ಓಪನ್‌ಎಐನಲ್ಲಿ ನಾಲ್ಕು ತಿಂಗಳ ಇಂಟರ್ನ್‌ಶಿಪ್ ನಡೆಸಿದ ನಂತರ, 2022 ಜನವರಿಯಲ್ಲಿ ತಾಂತ್ರಿಕ ಸಿಬ್ಬಂದಿ ಸದಸ್ಯರಾಗಿ ಪೂರ್ಣಕಾಲಿಕವಾಗಿ ಸೇರ್ಪಡೆಗೊಂಡರು. ಓಪನ್‌ಎಐನಲ್ಲಿ ಅವರು ಸಂಸ್ಥಾಪಕ ಇಲ್ಯಾ ಸಟ್ಸ್‌ಕೆವರ್ ಅವರೊಂದಿಗೆ ಬಲವರ್ಧನೆ ಕಲಿಕೆ (Reinforcement Learning) ಮತ್ತು ತಾರ್ಕಿಕ ಆಧಾರಿತ ಗಡಿನಾಡು ಸಂಶೋಧನೆಯಲ್ಲೂ ಕಾರ್ಯನಿರ್ವಹಿಸಿದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು “01” ಎಂಬ ಹೊಸ ಮಾದರಿಯನ್ನು ಸಹ-ರಚಿಸಿದ್ದಾರೆ. ಆದರೆ, ಅದರ ಬಗ್ಗೆ ಹೆಚ್ಚಿನ ವಿವರಗಳು ಸಾರ್ವಜನಿಕವಾಗಿಲ್ಲ.

ಇತ್ತೀಚೆಗೆ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, ಮೆಟಾ ಉನ್ನತ ಎಐ ಸಂಶೋಧಕರನ್ನು ತನ್ನ ಕಂಪನಿಗೆ ಸೆಳೆಯುವ ಉದ್ದೇಶದಿಂದ 100 ಮಿಲಿಯನ್ ಡಾಲರ್ ಪ್ಯಾಕೇಜ್‌ಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮೆಟಾ ಸಿಟಿಓ ಆಂಡ್ರ್ಯೂ ಬೋಸ್‌ವರ್ತ್, ಆ ಆರೋಪಗಳನ್ನು “ಅಪ್ರಾಮಾಣಿಕ”ವೆಂದು ಕರೆದಿದ್ದು, ಆಲ್ಟ್‌ಮನ್ ಹೇಳಿಕೆಗಳನ್ನು ಉತ್ಪ್ರೇಕ್ಷೆಯನ್ನಾಗಿ ನಿರಾಖರಿಸಿದ್ದಾರೆ. ಎಲ್ಲಾ ನೇಮಕಾತಿಗಳಿಗೆ ಇಂತಹ ಸಂಭಾವನೆ ನೀಡಲಾಗುವುದಿಲ್ಲ ಎಂದು ಬೋಸ್‌ವರ್ತ್ ಸ್ಪಷ್ಟಪಡಿಸಿದ್ದಾರೆ.