ಮಹಿಳೆಯೊಬ್ಬಳು ಸಾಲ ತೀರಿಸಿದ ವಿಧಾನ ಎಲ್ಲರ ಗಮನ ಸೆಳೆದಿದೆ. ವೈಯಕ್ತಿಕ ಸಾಲ ಹೆಚ್ಚಾಗ್ತಿರುವ ಈ ಟೈಂನಲ್ಲಿ ಮಹಿಳೆ ಚಾಟ್ ಜಿಪಿಟಿಯಿಂದ ಸಾಲ ತೀರಿಸೋ ಪ್ಲಾನ್ ಪಡೆದು ಸಕ್ಸಸ್ ಆಗಿದ್ದಾಳೆ. 

ಸಂಶೋಧನೆಯಿಂದ ಡೇಟಿಂಗ್ ವರೆಗೆ ಎಲ್ಲ ಕೆಲ್ಸವನ್ನು ಎಐ ಮಾಡ್ತಿದೆ. ಸಣ್ಣ ಸಮಸ್ಯೆ ಬಂದ್ರೂ ಎಐ ಮೊರೆ ಹೋಗುವ ಜನರ ಸಂಖ್ಯೆ ಹೆಚ್ಚಾಗಿದೆ. ಎಐನಿಂದ ಸಾಕಷ್ಟು ನಷ್ಟವಿದ್ರೂ ಅದನ್ನು ಹೇಗೆ ಬಳಸಿಕೊಳ್ಬೇಕು ಎಂಬುದು ಗೊತ್ತಿದ್ರೆ ಅದ್ರಿಂದ ನೀವು ಲಾಭವನ್ನೂ ಪಡೆಯಬಹುದು. ಎಐ ಅನೇಕ ಬಾರಿ ಸೂಕ್ತ ಸಲಹೆಗಳನ್ನು ನಮಗೆ ನೀಡುತ್ತದೆ. ಯಾವುದೋ ನಿರ್ಧಾರ ತೆಗೆದುಕೊಳ್ಳುವಾಗ ನೀವು ಎಐ ಸಹಾಯ ಕೇಳ್ಬಹುದು. ಎಐ ನೀಡಿದ ಸಲಹೆಯನ್ನು ನೀವು ಸಂಪೂರ್ಣ ಪಾಲಿಸಬೇಕಾಗಿಲ್ಲ. ಆದ್ರೆ ನಿಮಗೆ ಅನುಕೂಲವಾಗುವ ಕೆಲ ಪಾಯಿಂಟ್ ಅದ್ರಲ್ಲಿ ಸಿಕ್ಕೇ ಸಿಗುತ್ತೆ. ಈಗ ಅಮೆರಿಕಾದ ಮಹಿಳೆಯೊಬ್ಬಳು ತಾನು ಹೇಗೆ ಎಐ ಬಳಸಿಕೊಂಡು ಸಾಲ ತೀರಿಸಿದ್ದೇನೆ ಎಂಬುದನ್ನು ಹೇಳಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಪ್ಲಾನ್ ವೈರಲ್ ಆಗಿದೆ. ಅಮೆರಿಕದ 35 ವರ್ಷದ ಜೆನ್ನಿಫರ್ ಅಲೆನ್, ತನ್ನ ಆರ್ಥಿಕ ತೊಂದರೆಗಳನ್ನು ವಿಶಿಷ್ಟ ರೀತಿಯಲ್ಲಿ ನಿವಾರಿಸಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ಪರಿಕರ ChatGPT ಸಹಾಯದಿಂದ ಅವರು ತಮ್ಮ 23,000 ಡಾಲರ್ ಅಂದ್ರೆ ಸುಮಾರು 19.69 ಲಕ್ಷ ರೂಪಾಯಿ ಕ್ರೆಡಿಟ್ ಕಾರ್ಡ್ ಸಾಲದಲ್ಲಿ ಅರ್ಧಕ್ಕಿಂತ ಹೆಚ್ಚು ಸಾಲವನ್ನು ತೀರಿಸಿದ್ದಾಳೆ. ಮಾಧ್ಯಮದ ಜೊತೆ ಮಾತನಾಡಿದ ಜೆನ್ನಿಫರ್, ತನ್ನ ಆದಾಯ ಚೆನ್ನಾಗಿಯೇ ಇತ್ತು. ಆದ್ರೆ ಹೇಗೆ ಅದನ್ನು ನಿರ್ವಹಿಸಬೇಕು ಅನ್ನೋದು ನನಗೆ ಗೊತ್ತಿರಲಿಲ್ಲ ಎಂದಿದ್ದಾಳೆ. ಮಗು ಹುಟ್ಟಿದ್ಮೇಲೆ ಜೆನ್ನಿಫರ್ ಖರ್ಚು ಹೆಚ್ಚಾಗಿತ್ತು. ಬಂದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡ್ತಿದ್ದಳು ಜೆನ್ನಿಫರ್. ಐಷಾರಾಮಿ ಜೀವನ ನಡೆಸದೆ ಹೋದ್ರೂ ಹಣ ಎಲ್ಲಿ ಖರ್ಚಾಗ್ತಿದೆ ಎನ್ನುವ ಟ್ರ್ಯಾಕ್ ಇರಲಿಲ್ಲ. ಇದ್ರಿಂದಾಗಿ ಕ್ರೆಡಿಟ್ ಕಾರ್ಡ್ ಸಾಲ ಹೆಚ್ಚಾಗ್ತಾನೆ ಇತ್ತು.

ಜೆನ್ನಿಫರ್, ಚಾಟ್ ಜಿಪಿಟಿಯಲ್ಲಿ ಪರ್ಸನಲ್ ಪೈನಾನ್ಸ್ ಚಾಲೆಂಜ್ ಸ್ವೀಕರಿಸಿದ್ಲು. ಪ್ರತಿ ದಿನ ಚಾಟ್ ಜಿಪಿಟಿ, ಜೆನ್ನಿಫರ್ ಗೆ ಸಣ್ಣ ಆದ್ರೆ ಪರಿಣಾಮಕಾರಿ ಪ್ಲಾನ್ ಹೇಳ್ತಾ ಬಂತು. ಸೈಡ್ ಇನ್ಕಂ ಹೇಗೆ ಗಳಿಸೋದು, ಅನುಪಯುಕ್ತ ಸಬ್ಸ್ಕ್ರೈಬ್ ಹೇಗೆ ಕಟ್ ಮಾಡೋದು, ಬ್ಯಾಂಕ್ ನಲ್ಲಿ ಯಾವುದಾದ್ರೂ ಉಳಿತಾಯ ಬಾಕಿ ಇದ್ಯಾ ಎಂಬುದನ್ನು ಚೆಕ್ ಮಾಡೋದು ಇದ್ರಲ್ಲಿ ಸೇರಿದೆ. ಜೆನ್ನಿಫರ್ ಪ್ರಕಾರ ಒಂದು ದಿನ ಚಾಟ್ ಜಿಪಿಟಿ, ಯಾವ ಬ್ಯಾಂಕಿನಲ್ಲಾದ್ರೂ ಹಣ ಇಟ್ಟು ಮರೆತಿದ್ದೀರಾ ಅಂತ ಕೇಳಿದೆ. ಆಗ ಜೆನ್ನಿಫರ್ ಗೆ ಹಳ ಖಾತೆ ನೆನಪಾಗಿದೆ. ಅದ್ರಲ್ಲಿ ಜೆನ್ನಿಫರ್ ಸುಮಾರು 8.5 ಲಕ್ಷ ರೂಪಾಯಿ ಇಟ್ಟಿದ್ದಳು. ಅಲ್ಲದೆ ಚಾಟ್ ಜಿಪಿಟಿ ಸಲಹೆಯಂತೆ ಪ್ಯಾಂಟ್ರಿ ಊಟದ ವ್ಯವಸ್ಥೆ ಮಾಡಿದ್ಲು. ಇದ್ರಿಂದ 50 ಸಾವಿರದಷ್ಟು ಹಣ ಉಳಿತು ಅಂತ ಜೆನ್ನಿಫರ್ ಹೇಳಿದ್ದಾಳೆ.

ಚಾಟ್ ಜಿಪಿಟಿ ಪ್ರತಿ ದಿನ ನೀಡ್ತಿದ್ದ ಸಲಹೆಯನ್ನು ಪಾಲಿಸಿದ ಜೆನ್ನಿಫರ್ ಒಂದು ತಿಂಗಳಲ್ಲಿ 10.3 ಲಕ್ಷ ಸಾಲ ಮರುಪಾವತಿ ಮಾಡಿದ್ದಾಳೆ. ಇದು ಸುಲಭವಾಗಿರಲಿಲ್ಲ. ಪ್ರತಿ ದಿನ ಚಾಟ್ ಜಿಪಿಟಿಗೆ ಮಾಹಿತಿ ನೀಡಿ, ಮಾಹಿತಿ ಪಡೆದು ಅದನ್ನು ಪಾಲಿಸ್ತಾ ಬಂದಿದ್ದೆ ಎಂದು ಜೆನ್ನಿಫರ್ ಹೇಳಿದ್ದಾಳೆ. ಈಗ ಮತ್ತೆ 30 ದಿನದ ಚಾಲೆಂಜ್ ಶುರು ಮಾಡುವ ಆಲೋಚನೆಯಲ್ಲಿ ಜೆನ್ನಿಫರ್ ಇದ್ದಾಳೆ.

ಸದ್ಯ ಅಮೆರಿಕಾದಲ್ಲಿ ವೈಯಕ್ತಿಕ ಸಾಲ ಹೆಚ್ಚಾಗ್ತಿದೆ. 2025 ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕನ್ ಕುಟುಂಬಗಳ ಸಾಲ 18.2 ಟ್ರಿಲಿಯನ್ ಡಾಲರ್ ತಲುಪಿದೆ. ಸಾಲದೊಂದಿಗೆ ಹೋರಾಡುತ್ತಿರುವವರಿಗೆ ಜೆನ್ನಿಫರ್ ಕಥೆ ಸ್ಫೂರ್ತಿಯಾಗಲಿದೆ. ನೀವೂ ನಿಮ್ಮ ಸಾಲ ತೀರಿಸಲು ಚಾಟ್ ಜಿಪಿಟಿ ಸಹಾಯ ಪಡೆಯಬಹುದು. ಆದ್ರೆ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಎಚ್ಚರವಹಿಸಿ.