ರಾಮನಗರದಲ್ಲಿ ಮಾರ್ಚ್ 5 ರಂದು ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ 171ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ.
ರಾಮನಗರ: ಜಿಲ್ಲೆಯ ನಿರುದ್ಯೋಗಿ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಮಾರ್ಚ್ 5ರಂದು ರಾಮನಗರ ನಗರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಮೇಳದ ಯಶಸ್ಸಿಗಾಗಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಉದ್ಯೋಗ ಮೇಳದ ಪೂರ್ವಭಾವಿ ಸಿದ್ಧತಾ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಉದ್ಯೋಗ ಮೇಳವು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವ ಅತ್ಯುತ್ತಮ ವೇದಿಕೆಯಾಗಿದೆ. ಆದ್ದರಿಂದ ಇದರ ಯಶಸ್ಸಿಗಾಗಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಶ್ರಮಿಸಬೇಕು” ಎಂದು ಹೇಳಿದರು.
ವ್ಯಾಪಕ ಪ್ರಚಾರಕ್ಕೆ ಸೂಚನೆ
ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ಆಟೋ, ಧ್ವನಿವರ್ಧಕ, ಪೋಸ್ಟರ್‌ಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರತಿ ಮನೆ ಮನೆಗೂ ಉದ್ಯೋಗ ಮೇಳದ ಮಾಹಿತಿ ತಲುಪುವಂತೆ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಪ್ರಚಾರ ನಡೆಸಿ, ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವಂತೆ ಮನವೊಲಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗಗಳಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಉದ್ಯೋಗ ಮೇಳದ ಮಾಹಿತಿ ಹಾಗೂ ಪೋಸ್ಟರ್‌ಗಳನ್ನು ತಲುಪಿಸಬೇಕೆಂದು ನಿರ್ದೇಶನ ನೀಡಲಾಯಿತು.
ಸೌಲಭ್ಯಗಳ ಸಮಗ್ರ ವ್ಯವಸ್ಥೆ
ಉದ್ಯೋಗ ಮೇಳಕ್ಕೆ ಈಗಾಗಲೇ ಜಿಲ್ಲೆಯಲ್ಲಿ 171 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೇಳದಲ್ಲಿ ಭಾಗವಹಿಸುವ ಕಂಪನಿಗಳ ಅನುಕೂಲಕ್ಕಾಗಿ ಕಾಲೇಜು ಆವರಣ ಹಾಗೂ ಮೈದಾನದಲ್ಲಿ 200 ಮಳಿಗೆಗಳನ್ನು ತೆರೆಯಲಾಗುತ್ತದೆ. ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಅಗತ್ಯ ಸಂಖ್ಯೆಯ ಹೆಲ್ಪ್ ಡೆಸ್ಕ್‌ಗಳು ಕಾರ್ಯನಿರ್ವಹಿಸಲಿವೆ. ಕೆಲಸಕ್ಕೆ ಆಸಕ್ತಿ ಇರುವ ಸಿಬ್ಬಂದಿಯನ್ನೇ ಈ ಡೆಸ್ಕ್‌ಗಳಿಗೆ ನಿಯೋಜಿಸಿ, ಅಭ್ಯರ್ಥಿಗಳಿಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ.
ಬೇಸಿಗೆ ಕಾಲವನ್ನು ಗಮನದಲ್ಲಿಟ್ಟುಕೊಂಡು ಶೌಚಾಲಯ, ಕುಡಿಯುವ ನೀರು, ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ರಾಮನಗರ ನಗರಸಭೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಮೇಳ ನಡೆಯುವ ಆವರಣದಲ್ಲಿ ಸಣ್ಣ ವೇದಿಕೆಯನ್ನು ನಿರ್ಮಿಸಿ, ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪನಿಯ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಸ್ಥಳದಲ್ಲೇ ಎರಡು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ, ಸಂಜೆ ಲೈಟಿಂಗ್, ಆಸನ ಹಾಗೂ ಟೇಬಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಮೇಳದಲ್ಲಿ ಭಾಗವಹಿಸುವ ಕಂಪನಿಗಳು ನೇರ ನೇಮಕಾತಿ ನಡೆಸುವಂತೆ ಮನವಿ ಮಾಡಲಾಗಿದ್ದು, ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕೆಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಮಳಿಗೆಗಳನ್ನು ತೆರೆಯಬೇಕೆಂದು ಕೋರಲಾಯಿತು.
ಅಧಿಕಾರಿಗಳ ಅಭಿಪ್ರಾಯ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜ್ ಗಾಣಕಲ್ ಮಾತನಾಡಿ, ಗ್ರಾಮ ಮಟ್ಟದಿಂದ ಉದ್ಯೋಗಾಕಾಂಕ್ಷಿಗಳನ್ನು ಕರೆತರಲು ಅಗತ್ಯವಿದ್ದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನ್ಮೋಲ್ ಜೈನ್ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 4,707 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಆ ಎಲ್ಲರೂ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖೆಗಳು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ. ರಾಜು ಸಹ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
171 ಕಂಪನಿಗಳ ನೋಂದಣಿ – 20,000ಕ್ಕೂ ಹೆಚ್ಚು ಉದ್ಯೋಗಾವಕಾಶ
ಈ ಉದ್ಯೋಗ ಮೇಳದಲ್ಲಿ ಈಗಾಗಲೇ 171 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಅಂದಾಜು 200ಕ್ಕೂ ಹೆಚ್ಚು ಪ್ರತಿಷ್ಠಿತ ಉದ್ಯೋಗದಾತ ಸಂಸ್ಥೆಗಳು ಭಾಗವಹಿಸಲಿವೆ. ಮೇಳದಲ್ಲಿ ಸುಮಾರು 20,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿರಲಿದ್ದು, ಉತ್ಪಾದನಾ, ಬ್ಯಾಂಕಿಂಗ್, ಮಾರಾಟ, ಮಾಹಿತಿ ತಂತ್ರಜ್ಞಾನ, ಗಾರ್ಮೆಂಟ್ಸ್, ಸೇವಾ ಮತ್ತು ಪ್ರವಾಸೋದ್ಯಮ, ಹಣಕಾಸು ಹಾಗೂ ನಿರ್ವಹಣಾ ಕ್ಷೇತ್ರಗಳೊಂದಿಗೆ ಇತರೆ ಹಲವು ವಲಯಗಳಲ್ಲಿ ಉದ್ಯೋಗಗಳು ದೊರೆಯಲಿವೆ.
ವಿವಿಧ ವಿದ್ಯಾರ್ಹತೆಗಳಿಗೆ ಅನುಗುಣವಾಗಿ ಲಭ್ಯವಿರುವ ಉದ್ಯೋಗಾವಕಾಶಗಳ ವಿವರಗಳು ಹೀಗಿವೆ:
ಎಸ್‌ಎಸ್‌ಎಲ್‌ಸಿ / ಪಿಯುಸಿ (ಉತ್ತೀರ್ಣ/ಅನುತ್ತೀರ್ಣ): 1,221
ಎಸ್‌ಎಸ್‌ಎಲ್‌ಸಿ / ಪಿಯುಸಿ ಉತ್ತೀರ್ಣ: 3,118
ಐಟಿಐ: 3,482
ಡಿಪ್ಲೊಮಾ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್): 503
ಡಿಪ್ಲೊಮಾ (ಸೇಪ್ಟಿ): 16
ಐಟಿಐ ಹಾಗೂ ಡಿಪ್ಲೊಮಾ: 2,793
ಬಿಸಿಎ, ಎಂಸಿಎ, ಬಿಕಾಂ, ಬಿಎಸ್‌ಸಿ, ಎಂಎಸ್‌ಸಿ: 217
ಎಸ್‌ಎಸ್‌ಎಲ್‌ಸಿಯಿಂದ ಪದವಿವರೆಗೆ: 8,200
ಯಾವುದೇ ಪದವಿ ವಿದ್ಯಾರ್ಹತೆ: 7,022
ಬಿಇ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್): 270
ಬಿಇ (ಕೆಮಿಕಲ್): 10
ಬಿ-ಟೆಕ್ / ಎಂಬಿಎ: 1
ಇತರೆ: 2,963
ಡೈರಿ ಟೆಕ್ನಾಲಜಿ: 4
ಡಿಪ್ಲೊಮಾ ಇನ್ ಪ್ರಿಂಟಿಂಗ್: 26
ಎಂಎಸ್‌ಸಿ ಕೆಮಿಸ್ಟ್: 20
ಅಭ್ಯರ್ಥಿಗಳ ನೋಂದಣಿ ಹೇಗೆ?
ಉದ್ಯೋಗ ಮೇಳದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಯಾವುದೇ ವಿದ್ಯಾರ್ಹತೆಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. ಅಭ್ಯರ್ಥಿಗಳು ಗೂಗಲ್ ಫಾರಂ ಲಿಂಕ್ ಮೂಲಕ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡದವರಿಗೂ ಮೇಳದ ದಿನ ನೇರವಾಗಿ ಹಾಜರಾಗಿ ಸಂದರ್ಶನ ನೀಡುವ ಅವಕಾಶವಿದೆ.


