2024-25ರ ಹಣಕಾಸು ವರ್ಷದಲ್ಲಿ ಭಾರತದ ಸೆಮಿಕಂಡಕ್ಟರ್ ಉದ್ಯಮದಲ್ಲಿ ಉದ್ಯೋಗಾವಕಾಶಗಳು ಶೇ.15ರಷ್ಟು ಕುಸಿತ ಕಂಡಿವೆ. ಆದರೆ, VLSI, ಎಂಬೆಡೆಡ್ ಸಿಸ್ಟಮ್‌ಗಳು ಮತ್ತು ಅನಲಾಗ್ ವಿನ್ಯಾಸದಂತಹ ವಿಶೇಷ ಕೌಶಲ್ಯಗಳಿಗೆ ಬೇಡಿಕೆ ಇದೆ.
ಬೆಂಗಳೂರು: 2024-25ರ ಹಣಕಾಸು ವರ್ಷದ ವೇಳೆಗೆ ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮದಲ್ಲಿ ಉದ್ಯೋಗಾವಕಾಶಗಳು ಶೇಕಡಾ 15ರಷ್ಟು ಕುಸಿತ ಕಂಡಿವೆ ಎಂದು ಕೆರಿಯರ್‌ನೆಟ್ ಸಂಸ್ಥೆಯ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ. ಇದು ಉದ್ಯೋಗ ಮಾರುಕಟ್ಟೆಗೆ ಮಹತ್ವದ ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಏನು ಬೆಳವಣಿಗೆ ಸಾಧ್ಯ ಎಂಬುದರ ಕುರಿತು ಹೊಸ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ. 2023ರ ಮೇ ತಿಂಗಳಲ್ಲಿ 3,760 ಉದ್ಯೋಗಾವಕಾಶಗಳು ಲಭ್ಯವಿದ್ದರೆ, 2025ರ ಜನವರಿಯಲ್ಲಿ ಅದು 3,040ಕ್ಕೆ ಇಳಿಕೆ ಕಂಡಿದೆ. ಮಾರ್ಚ್ 2025ರ ವೇಳೆಗೆ 3,181 ಹುದ್ದೆಗಳೊಂದಿಗೆ ಅದು ಸ್ಥಿರತೆ ತಲುಪಿದೆ. ಇದು 50 ಪ್ರಮುಖ ಸೆಮಿಕಂಡಕ್ಟರ್ ವಿನ್ಯಾಸ ಜಿಸಿಸಿ ಸಂಸ್ಥೆಗಳಲ್ಲಿನ ರಚನಾತ್ಮಕ ಮತ್ತು ಕಾರ್ಯಾತ್ಮಕ ಹುದ್ದೆಗಳ ಅಧ್ಯಯನದ ಆಧಾರಿತ ಮಾಹಿತಿಯಾಗಿದೆ.
ವಿಶೇಷ ಕೌಶಲ್ಯಗಳಿಗೆ ನಿರಂತರ ಬೇಡಿಕೆ
ಹುದ್ದೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ, ಕೆಲವೊಂದು ವಿಶೇಷ ಕ್ಷೇತ್ರಗಳಲ್ಲಿ ಬೇಡಿಕೆ ತಗ್ಗಿಲ್ಲ. VLSI (ವೆರಿ ಲಾರ್ಜ್ ಸ್ಕೇಲ್ ಇಂಟಿಗ್ರೇಷನ್), ಎಂಬೆಡೆಡ್ ಸಿಸ್ಟಮ್‌ಗಳು, ಅನಲಾಗ್ ವಿನ್ಯಾಸ ಈ ಕ್ಷೇತ್ರಗಳಲ್ಲಿ ಪರಿಣಿತರಾದ ತಜ್ಞರು ಉದ್ಯಮಕ್ಕೆ ಅತ್ಯಗತ್ಯವಾಗಿದ್ದು, ಮಧ್ಯಮ ಗಾತ್ರದ ಕ್ಯಾಪ್ಟಿವ್ ಘಟಕಗಳು ನೇಮಕಾತಿ ಅಭ್ಯಾಸಗಳಲ್ಲಿ ಹೆಚ್ಚು ನಿಷ್ಠುರ ಮತ್ತು ಸ್ಪಷ್ಟ ಯೋಜನೆಗಳನ್ನು ಅನುಸರಿಸುತ್ತಿವೆ.
ಮೂಲಭೂತ ತಂತ್ರಜ್ಞಾನಗಳಿಗೆ ಹೆಚ್ಚಿನ ಆದ್ಯತೆ
ಉದ್ಯಮದ ಬೆಳವಣಿಗೆಯಲ್ಲಿ ಕೆಲ ಪ್ರಮುಖ ತಂತ್ರಜ್ಞಾನಗಳ ಪಾತ್ರ ಬಹಳ ಮುಖ್ಯವಾಗಿದೆ. AI (ಕೃತಕ ಬುದ್ಧಿಮತ್ತೆ) ಮತ್ತು ML (ಮಷಿನ್ ಲರ್ನಿಂಗ್) ಒಂದಾಗಿ ಚಿಪ್ ವಿನ್ಯಾಸದಲ್ಲಿ ಬಳಸಲಾಗುತ್ತಿದೆ. Electronics Design Automation (EDA) ಪರಿಕರಗಳು, ಸೆಮಿಕಂಡಕ್ಟರ್ ಪ್ರಕ್ರಿಯೆ ಎಂಜಿನಿಯರಿಂಗ್, ಇಳುವರಿ ವಿಶ್ಲೇಷಣೆ, ಡೇಟಾ ಎಂಜಿನಿಯರಿಂಗ್ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ಕೌಶಲ್ಯಗಳ ಅಗತ್ಯ ಹೆಚ್ಚುತ್ತಿದೆ.
ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ ಮತ್ತು ಸರ್ಕಾರದ ಯೋಜನೆಗಳು
ಭಾರತದಲ್ಲಿ ಪ್ರಬಲ ಎಂಜಿನಿಯರಿಂಗ್ ಶಕ್ತಿ ಮತ್ತು ಸರ್ಕಾರದ ಸಹಕಾರ ಈ ಉದ್ಯಮಕ್ಕೆ ಉತ್ಕೃಷ್ಟ ಬೆಂಬಲ ನೀಡುತ್ತಿದೆ. "ಸೆಮಿಕಾನ್ ಇಂಡಿಯಾ" ಯೋಜನೆಯಡಿ ರೂ. 76,000 ಕೋಟಿ ಹೂಡಿಕೆಯಿಂದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಗಂಭೀರ ಯೋಜನೆಗಳು ರೂಪುಗೊಂಡಿವೆ. ಚಿಪ್ಸ್ ಟು ಸ್ಟಾರ್ಟ್ಅಪ್, ಸ್ಮಾರ್ಟ್ ಲ್ಯಾಬ್ಸ್, ಮತ್ತು AICTE ನವೀಕರಿಸಿದ VLSI ಪಠ್ಯಕ್ರಮದಂತಹ ಉಪಕ್ರಮಗಳು ಹೊಸ ತಲೆಮಾರಿಗೆ ತಂತ್ರಜ್ಞಾನದಲ್ಲಿ ಪರಿಣತಿ ನೀಡಲು ಪ್ರೇರಣೆ ಒದಗಿಸುತ್ತಿವೆ.
ದೀರ್ಘಾವಧಿಯಲ್ಲಿ ಬೆಳವಣಿಗೆಗೆ ವೇದಿಕೆ
ಕೆರಿಯರ್‌ನೆಟ್‌ನ ನೀಲಭ್ ಶುಕ್ಲಾ ಅವರು ಈ ಬಗ್ಗೆ ಹೇಳಿಕೆ ನೀಡಿ, "ಇದು ತಾತ್ಕಾಲಿಕ ಕುಸಿತ. ಸೇವಾ ಆಧಾರಿತ ಮಾರುಕಟ್ಟೆಯಿಂದ ಸಂಶೋಧನೆ ಹಾಗೂ ಉತ್ಪನ್ನ ಆಧಾರಿತ ಸೆಮಿಕಂಡಕ್ಟರ್ ಪವರ್‌ಹೌಸ್ ಆಗಿ ಭಾರತ ರೂಪಾಂತರಗೊಳ್ಳುತ್ತಿದೆ. ಮಧ್ಯಮ ಗಾತ್ರದ ಜಿಸಿಸಿಗಳು ಈ ಬದಲಾವಣೆಗೆ ಚಾಲಕ ಶಕ್ತಿಗಳಾಗುತ್ತಿವೆ." ಎಂದಿದ್ದಾರೆ.
Q3-Q4ರಲ್ಲಿನ ಚುರುಕು – ಸಣ್ಣ ಕಂಪನಿಗಳಲ್ಲಿನ ಇಳಿಕೆಗೆ ವಿರುದ್ಧವಾದ ಬೆಳವಣಿಗೆ
2024-25ರ ಮಾರ್ಚ್ ತ್ರೈಮಾಸಿಕದಲ್ಲಿ ಸಣ್ಣ ಸಂಸ್ಥೆಗಳು ಸಾಮಾನ್ಯವಾಗಿ ನಿಶ್ಶಬ್ದ ವಾತಾವರಣವನ್ನು ಅನುಭವಿಸಿದ್ದರೂ, ಮಧ್ಯಮ ಹಾಗೂ ದೊಡ್ಡ ಸಂಸ್ಥೆಗಳು, ಹೆಚ್ಚು ವೃತ್ತಿಪರ ನೇಮಕಾತಿಗಳನ್ನು ಮಾಡಿದ್ದವು. Q3 ಮತ್ತು Q4ನಲ್ಲಿ ಹೆಚ್ಚಿನ ಚಟುವಟಿಕೆಯನ್ನು ತೋರಿಸಿದವು.
ಇತ್ತೀಚಿನ ಇಳಿಕೆಯಿಂದ ಉದ್ಯೋಗ ಹಾದಿಯಲ್ಲಿ ಕಗ್ಗತ್ತಲೆಯಂತಿರುವಂತೆ ಕಾಣಿಸಿದರೂ, ಭಾರತವು ತನ್ನ ತಂತ್ರಜ್ಞಾನ ನೈಪುಣ್ಯತೆಯ, ಆಂತರಿಕ ಉತ್ಪಾದನಾ ಶಕ್ತಿ ಮತ್ತು ಸರ್ಕಾರದ ನವೋದ್ಯಮೀ ಯೋಜನೆಗಳ ಸಹಾಯದಿಂದ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯದತ್ತ ಹೆಜ್ಜೆ ಇಡುತ್ತಿದೆ. ಇಂದಿನ ಮಂದಗತಿಯ ಹಿಂದಿದೆ ನಾಳೆಯ ಬೆಳಕು ಎಂಬತೆ ತಂತ್ರಜ್ಞಾನ, ಸಂಶೋಧನೆ ಮತ್ತು ಪ್ರತಿಭೆಯ ಜೊತೆಯಲಿ ಭಾರತದ ಸೆಮಿಕಂಡಕ್ಟರ್ ಭವಿಷ್ಯ ಉಜ್ವಲವಾಗಿದೆ.
