Asianet Suvarna News Asianet Suvarna News

1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್‌ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು

ಸೆಮಿಕಂಡಕ್ಟರ್‌ ಘಟಕ ಗುಜರಾತ್ ಪಾಲಾಗಲು, ಅಲ್ಲಿನ ಸರ್ಕಾರ 1000 ಎಕರೆ ಭೂಮಿ 99 ವರ್ಷಕ್ಕೆ ಪುಕ್ಕಟೆ ಗುತ್ತಿಗೆ ನೀಡಿದೆ. ಜತೆಗೆ, 20 ವರ್ಷದ ಅವಧಿಗೆ ನೀರು, ವಿದ್ಯುತ್‌ ರಿಯಾಯ್ತಿ ದರದಲ್ಲಿ ಕಂಪನಿಗೆ ಪೂರೈಕೆ ಮಾಡಲು ಒಪ್ಪಿದೆ. ಹಾಗೂ, ಹಣಕಾಸು ಮತ್ತು ಬಂಡವಾಳ ವೆಚ್ಚ ಹೊರತಾದ ಹಣಕಾಸೇತರ ಸಬ್ಸಿಡಿ ನೀಡಿದೆ. 

vedanta picks gujarat for 20 billion dollars india semiconductor foray ash
Author
First Published Sep 13, 2022, 8:01 AM IST

ನವದೆಹಲಿ: ಪಶ್ಚಿಮದಲ್ಲಿ ಮಹಾರಾಷ್ಟ್ರ (Maharashtra), ದಕ್ಷಿಣದಲ್ಲಿ ಕರ್ನಾಟಕ (Karnataka) ಮತ್ತು ತೆಲಂಗಾಣ (Telangana) ರಾಜ್ಯಗಳನ್ನು ಹಿಂದಿಕ್ಕಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ (Gujarat), ಅಂದಾಜು 1.60 ಲಕ್ಷ ಕೋಟಿ ರೂ. ಹೂಡಿಕೆ ಸೆಮಿಕಂಡಕ್ಟರ್‌ (Semiconductor) ಘಟಕವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೊಸ ಘಟಕ ಸ್ಥಾಪಿಸಲು ಗುಜರಾತ್‌ ನೀಡಿದ್ದ ಭಾರಿ ಆಫರ್‌ಗೆ ಸಮ್ಮತಿಸಿರುವ ವೇದಾಂತ ಲಿಮಿಟೆಡ್‌ (Vedanta Ltd.) ಮತ್ತು ತೈವಾನ್‌ನ ಫಾಕ್ಸ್‌ಕಾನ್‌ (Foxconn), ಶೀಘ್ರವೇ ಈ ಕುರಿತು ಅಧಿಕೃತ ಘೋಷಣೆ ಮಾಡಲಿವೆ ಎಂದು ಮೂಲಗಳು ತಿಳಿಸಿವೆ. ಅತ್ಯಂತ ಬೇಡಿಕೆಯಲ್ಲಿರುವ ಮತ್ತು ಬಹುತೇಕ ಚೀನಾ ಮೇಲೆ ಅವಲಂಬನೆಯಾಗಿರುವ ಸೆಮಿಕಂಡಕ್ಟರ್‌ ವಲಯದಲ್ಲಿ ಜಂಟಿ ಪಾಲುದಾರಿಕೆಯಲ್ಲಿ (Joint Venture) ಭಾರಿ ಪ್ರಮಾಣದ ಹೂಡಿಕೆ ಮಾಡಲು ಉದ್ಯಮಿ ಅನಿಲ್‌ ಅಗರ್‌ವಾಲ್‌ ಒಡೆತನದ ವೇದಾಂತ ಲಿಮಿಟೆಡ್‌ ಮತ್ತು ತೈವಾನ್‌ ಮೂಲದ ಫಾಕ್ಸ್‌ಕಾನ್‌ ಮುಂದಾಗಿವೆ. ಈ ಯೋಜನೆಯನ್ನು ಸೆಳೆಯಲು ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಭಾರಿ ಪೈಪೋಟಿ ನಡೆಸಿದ್ದವು.

ಈ ಪೈಪೋಟಿ ಹಿನ್ನೆಲೆಯಲ್ಲಿ ಹೂಡಿಕೆ ಕಂಪನಿ ಕೂಡಾ ಎಲ್ಲಾ ರಾಜ್ಯಗಳಿಂದ ನಾನಾ ರಿಯಾಯಿತಿ ಕೋರಿತ್ತು. ಮುಖ್ಯವಾಗಿ 1000 ಎಕರೆ ಭೂಮಿಯನ್ನು ಯಾವುದೇ ಶುಲ್ಕವಿಲ್ಲದೇ 99 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಬೇಕು. 20 ವರ್ಷಗಳ ಅವಧಿಗೆ ನೀರು ಮತ್ತು ವಿದ್ಯುತ್‌ ಅನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಬೇಡಿಕೆ ಇಟ್ಟಿತ್ತು. ನಾಲ್ಕು ರಾಜ್ಯಗಳ ಪೈಕಿ ಕೆಲವು ಇದಕ್ಕೆ ಸಮ್ಮತಿಸಿದ್ದವು.

ಇದನ್ನು ಓದಿ: Semiconductor Fabrication Unit ಮೈಸೂರಿನಲ್ಲಿ ದೇಶದ ಮೊದಲ ಯೂನಿಟ್, 23 ಕೋ ಬಂಡವಾಳ!

ಆದರೆ ಅಂತಿಮ ಹಂತದ ರೇಸ್‌ನಲ್ಲಿ ಗುಜರಾತ್‌ ಮತ್ತು ಮಹಾರಾಷ್ಟ್ರ ಉಳಿದುಕೊಂಡಿದ್ದು, ಹಣಕಾಸು ಮತ್ತು ಬಂಡವಾಳ ವೆಚ್ಚ ಹೊರತಾದ ಹಣಕಾಸೇತರ ಸಬ್ಸಿಡಿಯ ಭರವಸೆಯನ್ನು ನೀಡಿ ಯೋಜನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಗುಜರಾತ್‌ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸುವ ಭರವಸೆಯನ್ನು ಗುಜರಾತ್‌ ಸರ್ಕಾರ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಹೊಸ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಆರಂಭವಾಗುವುದು ಬಹುತೇಕ ಖಚಿತವಾಗಿದ್ದು, ಇನ್ನೊಂದು ವಾರದಲ್ಲಿ ಈ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

2020ರ ವೇಳೆಗೆ ಕೇವಲ 1.12 ಲಕ್ಷ ಕೋಟಿ ರೂ. ನಷ್ಟಿದ್ದ ಭಾರತದ ಸೆಮಿಕಂಡಕ್ಟರ್‌ ವಲಯ 2026ರ ವೇಳೆಗೆ 5 ಲಕ್ಷ ಕೋಟಿ ರೂ. ಗೆ ತಲುಪುವ ನಿರೀಕ್ಷೆ ಇದೆ. ಹಾಲಿ ವಿಶ್ವದ ಬಹುತೇಕ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ವಲಯವು ಬಹುತೇಕ ಚೀನಾ ಮತ್ತು ತೈವಾನ್‌ ಅನ್ನು ಅಲವಂಬಿಸಿದೆ. ಇತ್ತೀಚೆಗಷ್ಟೇ ಭಾರತ ಕೂಡಾ ಈ ವಲಯವನ್ನು ಪ್ರವೇಶಿಸಿದೆ.

ಇದನ್ನೂ ಓದಿ: ಸೆಮಿಕಾನ್ ಇಂಡಿಯಾ 2022: ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಸೆಮಿಕಂಡಕ್ಟರ್ ಘಟಕ

Follow Us:
Download App:
  • android
  • ios