35 ವರ್ಷದ ಕಾರ್ಪೊರೇಟ್ ಉದ್ಯೋಗಿ ಬಿಸ್ವಜಿತ್ ಮೊಹಂತಿ, ತಮ್ಮ 11 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಜೀವನದ ಅರ್ಥ ಮತ್ತು ವೈಯಕ್ತಿಕ ತೃಪ್ತಿಗಾಗಿ ಅಧಿಕ ಸಂಬಳದ ಕೆಲಸವನ್ನು ತೊರೆದ ಅವರ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಬೆಂಬಲಕ್ಕೆ ಕಾರಣವಾಗಿದೆ.

ಬೆಂಗಳೂರು (ಮೇ.6): ಇಂದು ಹತ್ತಾರು ಲಕ್ಷ ಸಂಬಳವಿದ್ದರೂ ಕಾರ್ಪೊರೇಟ್ ವಲಯದ ಒತ್ತಡಕ್ಕೆ ಸಿಲುಕಿ ಜೀವನದ ಅರ್ಥವನ್ನೇ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ 35 ವರ್ಷದ ಕಾರ್ಪೊರೇಟ್ ಉದ್ಯೋಗಿಯೊಬ್ಬರು ತಮ್ಮ ಜೀವನದ ಉದ್ದೇಶ ಮತ್ತು ಆದ್ಯತೆಗಳ ಬಗ್ಗೆ ಆಳವಾಗಿ ಯೋಚಿಸಿದ ನಂತರ, ಹನ್ನೊಂದು ವರ್ಷಗಳ ಸುದೀರ್ಘ ವೃತ್ತಿಜೀವನದಿಂದ ಹೊರಬರಲು ನಿರ್ಧರಿಸಿದ್ದಾರೆ. ಬಿಸ್ವಜಿತ್ ಮೊಹಂತಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. 35ನೇ ವಯಸ್ಸಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮ ಕೊನೆಯ ದಿನವನ್ನು ಗುರುತಿಸಿರುವ ಬಿಸ್ವಜಿತ್, ಈ ನಿರ್ಧಾರಕ್ಕೆ ಪ್ರೇರೇಪಿಸಿದ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಶಾಲಾ ಶಿಕ್ಷಣ, ಸಾಲ ಮಾಡಿ ಪಡೆದ ಉನ್ನತ ಶಿಕ್ಷಣ ಮತ್ತು 11 ವರ್ಷಗಳ ವೃತ್ತಿಪರ ಅನುಭವ. ಇವೆಲ್ಲವೂ ಕಾರ್ಪೊರೇಟ್ ಹಾದಿಯಿಂದ ಹೊರಬರುವ ನಿರ್ಧಾರಕ್ಕೆ ಮುನ್ನುಡಿಯಾದವು. ಸುಮಾರು ಮೂರು ವರ್ಷಗಳ ಹಿಂದೆಯೇ ತಾವು ನಿವೃತ್ತಿಯವರೆಗೆ ಇದೇ ಕೆಲಸದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ ಎಂಬ ಕಠಿಣ ಸತ್ಯ ಅವರಿಗೆ ಅರಿವಾಯಿತು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅವರು ತಮ್ಮನ್ನು ತಾವು ಎರಡು ಪ್ರಶ್ನೆಗಳನ್ನು ಕೇಳಿಕೊಂಡಿದ್ದರು:

ಆರ್ಥಿಕ ಭದ್ರತೆ ಈಗಾಗಲೇ ಖಚಿತವಾಗಿದ್ದರೆ, ನಾನು ಇದೇ ಕೆಲಸವನ್ನು ಮುಂದುವರಿಸುತ್ತಿದ್ದೇನೆಯೇ? ನಾನು ಮಾಡುತ್ತಿರುವ ಕೆಲಸವು ನೈಜ ಜಗತ್ತಿನಲ್ಲಿ ಏನಾದರೂ ಅರ್ಥಪೂರ್ಣ ಪ್ರಭಾವ ಬೀರಲಿದೆಯೇ? ಒಂದು ವೇಳೆ ನನ್ನ ಈ ಹುದ್ದೆ ಇಲ್ಲದಿದ್ದರೆ ಜಗತ್ತು ಅದನ್ನು ಮಿಸ್ ಮಾಡಿಕೊಳ್ಳುತ್ತದೆಯೇ? ಎನ್ನುವುದು.

"ನನ್ನ ಫೈನಲ್ ಮೇಲ್, ಅಂದರೆ ಗುಡ್‌ಬೈ ಮೇಲ್ ನನ್ನ ಡ್ರಾಫ್ಟ್‌ನಲ್ಲಿ ಸಿದ್ಧವಾಗಿದೆ. ಮುಂದಿನ ಒಂದೆರಡು ಗಂಟೆಗಳಲ್ಲಿ ನಾನು ಅದನ್ನು ಕಳುಹಿಸಲಿದ್ದೇನೆ ಮತ್ತು ಈ ಕಾರ್ಪೊರೇಟ್ ಪ್ರಪಂಚದಿಂದ ಹೊರಬರಲಿದ್ದೇನೆ. ಸಮಯ ಮತ್ತು ಶಕ್ತಿ ಇಲ್ಲದಿದ್ದರೆ, ಬ್ಯಾಂಕ್ ಬ್ಯಾಲೆನ್ಸ್ ಕೇವಲ ಅನುಕೂಲವನ್ನು ನೀಡುತ್ತದೆಯೇ ಹೊರತು ಸಂತೋಷವನ್ನಲ್ಲ. ಅದು ರಾತ್ರಿ ನೆಮ್ಮದಿಯ ನಿದ್ರೆ ನೀಡುವುದಿಲ್ಲ ಎಂಬ ಕಹಿ ಸತ್ಯ ನನಗೆ ಅರಿವಾಯಿತು," ಎಂದು ಬಿಸ್ವಜಿತ್ ವಿಡಿಯೋದಲ್ಲಿ ಹೇಳಿದ್ದಾರೆ.

ನೆಟ್ಟಿಗರ ಬೆಂಬಲ ಮತ್ತು ಚರ್ಚೆ

ಬಿಸ್ವಜಿತ್ ಅವರ ಈ ಧೈರ್ಯದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾಂಪ್ರದಾಯಿಕ ವೃತ್ತಿಜೀವನದ ಹಾದಿಗಿಂತ ವೈಯಕ್ತಿಕ ತೃಪ್ತಿಗೆ ಆದ್ಯತೆ ನೀಡಿದ್ದಕ್ಕಾಗಿ ಹಲವರು ಅವರನ್ನು ಶ್ಲಾಘಿಸಿದ್ದಾರೆ. "ಕಾರ್ಪೊರೇಟ್ ಕೆಲಸ ಒಂದು ದೊಡ್ಡ ಬಲೆ! ಕೆಲಸವು ನಿಮ್ಮನ್ನು ಎಂದಿಗೂ ಶ್ರೀಮಂತರನ್ನಾಗಿ ಮಾಡುವುದಿಲ್ಲ, ಬದಲಾಗಿ ನಿಮ್ಮ ಶ್ರಮದಿಂದ 10 ಪಟ್ಟು ಹೆಚ್ಚು ಸಂಪಾದಿಸುವವರ ಕೆಳಗೆ ನಿಮ್ಮನ್ನು ಇರಿಸುತ್ತದೆ. ಈ ಅರಿವು ಯುವ ಪೀಳಿಗೆಗೆ ಬರಬೇಕು," ಎಂದು ಒಬ್ಬ ಯೂಸರ್‌ ಕಾಮೆಂಟ್ ಮಾಡಿದ್ದಾರೆ.

"35ನೇ ವಯಸ್ಸಿಗೆ ಕಾರ್ಪೊರೇಟ್ ಜೀವನ ಬೇಸರ ತರಿಸುವುದು ಸಹಜ. ಸಾಲದ ಹೊರೆಯಿಲ್ಲದಿದ್ದರೆ ರೋಬೋಟ್‌ಗಳಂತೆ ಕೆಲಸ ಮಾಡುವುದು ಕಷ್ಟ. ನೆಮ್ಮದಿಯ ಜೀವನಕ್ಕೆ ನಮಗೆ ಅಷ್ಟೊಂದು ಹಣದ ಅಗತ್ಯವಿಲ್ಲ," ಎಂದು ಬೆಂಬಲಿಸಿದ್ದಾರೆ. "35ನೇ ವಯಸ್ಸಿನಲ್ಲಿ ಇಂತಹ ಅರಿವು ನನಗೂ ಉಂಟಾಗಿತ್ತು. ಈಗ ನನಗೆ 39 ವರ್ಷ, ಸವಾಲುಗಳಿದ್ದರೂ ಸಾಕಷ್ಟು ಕಲಿಯುತ್ತಿದ್ದೇನೆ. ಜನರೊಂದಿಗೆ ವ್ಯವಹರಿಸುವ ಕಲೆ ಕೆಲಸಕ್ಕಿಂತ ಮುಖ್ಯ," ಎಂದು ಹಾರೈಸಿದ್ದಾರೆ.

ಬರ್ನ್-ಔಟ್ (Burn-out) ಸಮಸ್ಯೆಯಿಂದ ಬಳಲುತ್ತಿದ್ದರೂ 9 ರಿಂದ 5ರ ಕೆಲಸದ ಬಲೆಯಿಂದ ಹೊರಬರಲು ಸಾಧ್ಯವಾಗದ ಸಾವಿರಾರು ಜನರಿಗೆ ಬಿಸ್ವಜಿತ್ ಅವರ ಈ ನಿರ್ಧಾರ ಸ್ಫೂರ್ತಿಯಾಗಿದೆ. ಮುಂದೆ ಅನಿಶ್ಚಿತತೆ ಇದ್ದರೂ, ಕಾರ್ಪೊರೇಟ್ ವ್ಯವಸ್ಥೆಯಿಂದ ಹೊರಬಂದಿರುವುದು ಅವರಿಗೆ ಮನಸ್ಸಿನ ಶಾಂತಿಯನ್ನು ನೀಡಿದೆ.