ಜರ್ಮನಿಯಿಂದ ಬಂದು ಭಾರತದ ಬಗ್ಗೆ ಕಾಳಜಿ ತೋರುವ ಯೂಟ್ಯೂಬರ್ ಧ್ರುವ್ ರಾಠಿ, ಪ್ರಧಾನಿ ಮೋದಿ ವಿರುದ್ಧ ವಿಡಿಯೋಗಳನ್ನು ಮಾಡಿ ಭಾರಿ ಆದಾಯ ಗಳಿಸಿದ್ದಾರೆ. ಇವರ ಕೇವಲ ಮೂರು ವಿಡಿಯೋಗಳು 217 ಮಿಲಿಯನ್ ವೀಕ್ಷಣೆ ಕಂಡಿದ್ದು, ಯೂಟ್ಯೂಬ್‌ನಿಂದ 2 ಕೋಟಿಗೂ ಅಧಿಕ ಹಣ ಹರಿದುಬಂದಿದೆ. ಮೋದಿ ವಿರೋಧವೇ ಇವರಿಗೆ ದೊಡ್ಡ ಆದಾಯದ ಮೂಲವಾಗಿದೆ.
ಯುಟ್ಯೂಬರ್ ಧ್ರುವ್ ರಾಠಿ ಈಗ ಬಹುತೇಕ ಎಲ್ಲರಿಗೂ ಪರಿಚಯದವರಾಗಿದ್ದಾರೆ. ಮೊದಲಿಗೆ ಕೇಂದ್ರ ಸರ್ಕಾರದ ವಿರುದ್ಧ ಶಿಕ್ಷಣ ಸುಧಾರಣೆ ಹೆಸರಿನಲ್ಲಿ ಜಿರಳೆಗಳು ಪ್ರತಿಭಟನೆ ನಡೆಸುತ್ತಿದ್ದಾಗ, ಅದರ ನೇತೃತ್ವ ವಹಿಸಿದ್ದವರು ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ. ಇವರು ಅಮೆರಿಕದಿಂದ ಭಾರತದ ಉದ್ಧಾರ ಮಾಡಲು ಐಷಾರಾಮಿ ಫ್ಲ್ಯಾಟ್ನಲ್ಲಿ ಭಾರತಕ್ಕೆ ಪದೇಪದೇ ಬರುತ್ತಿದ್ದರೆ, ಇವರಂತೆಯೇ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿ ಭಾರತವನ್ನು ಉದ್ಧಾರ ಮಾಡಲು ಜರ್ಮನಿಯಿಂದ ಬೇಕಾದಾಗೆಲ್ಲಾ ಒಂದಷ್ಟು ಮಂದಿಯನ್ನು ಕಟ್ಟಿಕೊಂಡು ಇದೇ ರೀತಿ ವಿಮಾನದ ಐಷಾರಾಮಿ ಕ್ಲಾಸ್ನಲ್ಲಿ ಬಂದು, ಇಲ್ಲಿಯ ಐಷಾರಾಮಿ ಬಂಗಲೆಯಲ್ಲಿ ಉಳಿದುಕೊಂಡು, ತಮ್ಮವರಿಗೆಲ್ಲಾ ಭರ್ಜರಿ ಪಾರ್ಟಿ ಕೊಡಿಸುತ್ತಾ, ಭಾರತದ ಪರ ಕಾಳಜಿ ತೋರುತ್ತಿರುವವರಲ್ಲಿ ಇನ್ನೊಬ್ಬರು ಜರ್ಮನಿಯ ಯುಟ್ಯೂಬರ್ ಧ್ರುವ್ ರಾಠಿ.
ಶಿಕ್ಷಣದ ಸುಧಾರಣೆ ಮರೆತು SIR ನತ್ತ
ಶಿಕ್ಷಣದ ಸುಧಾರಣೆಯ ಹೆಸರಿನಲ್ಲಿ ಜೆನ್ ಝೀಗಳನ್ನು ಒಟ್ಟುಗೂಡಿಸಿದ್ದ ಇವರೆಲ್ಲಾ ಸದ್ಯ ಶಿಕ್ಷಣದ ಸುಧಾರಣೆ ಮರೆತು ಇದೀಗ SIR ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎನ್ನಿ. ಇರಲಿ ಬಿಡಿ. ಈಗ ಹೇಳ್ತಿರೋ ವಿಷ್ಯ ಅದಲ್ಲ. ಇದೇ ಧ್ರುವ್ ರಾಠಿಯವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರ್ಜರಿ ಲಾಟರಿ ಸಿಕ್ಕಿದೆ. ಇದಕ್ಕೆ ಕಾರಣ, ಬಿಜೆಪಿ, ಭಾರತದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ ಅವರನ್ನು ತಮ್ಮ ಡಿಕ್ಷನರಿಯಲ್ಲಿ ಇರುವ ಎಲ್ಲಾಶಬ್ದಗಳನ್ನು ಉಪಯೋಗಿಸಿ, ದಿನನಿತ್ಯವೂ ಇವರದ್ದೇ ಜಪದಲ್ಲಿ ಮುಳುಗಿರುವ ಧ್ರುವ್ ರಾಠಿ ಅವರಿಗೆ ಇದೀಗ ಇದೇಕಾರಣದಿಂದ 2 ಕೋಟಿಗೂ ಮಿಕ್ಕಿದ ಲಾಟರಿ ಹೊಡೆದಿದೆ.
217 ಕೋಟಿ ವೀಕ್ಷಣೆ
ಹೌದು. ನರೇಂದ್ರ ಮೋದಿ ಅವರ ವಿರುದ್ಧ ಇವರು ಮಾಡಿರುವ ಯುಟ್ಯೂಬ್ಗಳು ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಂಡಿವೆ. ಕೇವಲ ಮೂರೇ ಮೂರು ವಿಡಿಯೋ 217 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಕೇವಲ ಈ ಮೂರು ವಿಡಿಯೋದಿಂದ 2 ಕೋಟಿಗೂ ಅಧಿಕ ಹಣ ಯುಟ್ಯೂಬ್ನಿಂದ ಹರಿದು ಬಂದಿದೆ ಎನ್ನಲಾಗಿದೆ. ಅಷ್ಟಕ್ಕೂ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬರುವವರೆಗೂ ಧ್ರುವ್ ಯಾರೆಂದೇ ಜನರಿಗೆ ಗೊತ್ತಿರಲಿಲ್ಲ. ಮೋದಿ ಅವರ ಮೊದಲ ಅವಧಿಯಲ್ಲಿಯೂ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ.
ಮೋದಿ ಅವರು ಎರಡನೆಯ ಬಾರಿ ಅಧಿಕಾರದ ಗದ್ದುಗೆ ಹಿಡಿದಾಗ ಇವರ ಗೋಳು ಆರಂಭವಾಯಿತು. ಆ ಬಳಿಕ 3ನೇ ಅವಧಿಗೂ ಆಯ್ಕೆಯಾದಾಗ, ಧ್ರುವ್ ರಾಠಿ ಅವರಿಗೆ ಲಾಟರಿ ಹೊಡೆಯಿತು. ಒಂದರ ಮೇಲೊಂದು ವಿಡಿಯೋ ಮೋದಿ ವಿರುದ್ದ ಶುರು ಮಾಡಿದರು. ಇವರ ಅಭಿಮಾನಿಗಳೂ ಇದನ್ನು ನೋಡ್ತಾರೆ, ವಿರೋಧಿಗಳೂ ನೋಡ್ತಾರೆ ಎನ್ನುವುದು ತಿಳಿದೇ ವಿಡಿಯೋ ಮಾಡಿದ್ದು, ಅದೀಗ ಅವರಿಗೆ ಆದಾಯದ ಮೂಲವಾಗಿದೆ!






