ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಮುಂಬರುವ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಆತ್ಮಚರಿತ್ರೆಯಲ್ಲಿ ರಾಜೀವ್ ಗಾಂಧಿಯವರೊಂದಿಗಿನ ಪ್ರೇಮಕಥೆ ಮತ್ತು ಭಾರತೀಯ ಆಹಾರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನವೆಂಬರ್ 10ರಂದು ಬಿಡುಗಡೆಯಾಗಲಿರುವ ಈ ಪುಸ್ತಕವು ಅವರ ಜೀವನದ ಕಠಿಣ ಅವಧಿಗಳನ್ನು ಸಹ ವಿವರಿಸುತ್ತದೆ.
ದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ಪ್ರೇಮಕಥೆಯ ಹಲವು ಕುತೂಹಲದ ಅಂಶಗಳನ್ನು ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ನಲ್ಲಿ ಹಂಚಿಕೊಂಡಿದ್ದಾರೆ. ಇದೇ 10ರಂದು ಈ ಆತ್ಮಕಥನ ಬಿಡುಗಡೆಯಾಗಲಿದೆ. ಇದಾಗಲೇ ಅವರು, ತಮ್ಮ ಮತ್ತು ರಾಜೀವ್ ಅವರ ಮೊದಲ ನೋಟದಲ್ಲಿಯೇ ನಡೆದ ಪ್ರೇಮ (Love At First Sight) ವಿಷಯವನ್ನು ಹಂಚಿಕೊಂಡಿದ್ದರು. ಇಂಗ್ಲೆಂಡ್ನ ಕೇಂಬ್ರಿಡ್ಜ್ನಲ್ಲಿರುವ ಒಂದು ಸಣ್ಣ ಗ್ರೀಕ್ ರೆಸ್ಟೋರೆಂಟ್ನಲ್ಲಿ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ವಿವರಿಸಿದ್ದಾರೆ.
ಇದೀಗ ಈ ಪುಸ್ತಕದ ಕೆಲವು ಆಯ್ದ ಭಾಗಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇವೆ. ಪ್ರಕಾಶಕ ಹಾರ್ಪರ್ಕಾಲಿನ್ಸ್ ಇಂಡಿಯಾ ಇಂದು ಸೋನಿಯಾ ಗಾಂಧಿಯವರ ಪುಸ್ತಕದ ಆಯ್ದ ಭಾಗಗಳನ್ನು ಹಂಚಿಕೊಂಡಿದೆ. ಅವುಗಳಲ್ಲಿ ಒಂದು ಇಂಟರೆಸ್ಟಿಂಗ್ ವಿಷ್ಯ ಅವರ ಆಹಾರದ ವಿಷಯದ ಬಗ್ಗೆ ಇದೆ. ರಾಜೀವ್ ಗಾಂಧಿ ಅವರೊಂದಿಗೆ ಮೊದಲ ಬಾರಿಗೆ ತಂದೂರಿ ಚಿಕನ್ ತಿನ್ನುವುದರಿಂದ ಹಿಡಿದು ಪ್ರತಿದಿನ ಅರ್ಹರ್ ದಾಲ್ ತಿನ್ನುವವರೆಗೆ ಅವರ ಭಾರತೀಯ ಪಾಕಪದ್ಧತಿಯ ಆಸಕ್ತಿದಾಯಕ ನೆನಪುಗಳನ್ನು ಬಹಿರಂಗಪಡಿಸಿದ್ದಾರೆ.
ಭಾರತೀಯ ಪಾಕಪದ್ಧತಿಯಲ್ಲಿ ಸೋನಿಯಾ ಗಾಂಧಿ ರುಚಿ ನೋಡಿದ ಮೊದಲ ಭಕ್ಷ್ಯಗಳಲ್ಲಿ ತಂದೂರಿ ಚಿಕನ್ ಒಂದು ಎಂದು ಪುಸ್ತಕದಲ್ಲಿ ಸೋನಿಯಾ ಗಾಂಧಿ (Sonia Gandhi) ಹೇಳಿದ್ದಾರೆ. ಆ ಅನುಭವವನ್ನು ನೆನಪಿಸಿಕೊಂಡಿರುವ ಸೋನಿಯಾ, ತಂದೂರಿ ಚಿಕನ್ ಅನ್ನು ಪ್ರಕಾಶಮಾನವಾದ ಕೆಂಪು, ಸ್ವಲ್ಪ ಸುಟ್ಟ ಮತ್ತು ಅದರ ಖಾರವು ಬಾಯಿಯಲ್ಲಿ ಬೆಂಕಿಯಂತೆ ಭಾಸವಾಗುತ್ತಿತ್ತು ಎಂದು ವಿವರಿಸಿದ್ದಾರೆ. ಬಾಯಿ ಸುಟ್ಟು ಹೋದಂತೆ ಅನ್ನಿಸಿತು ಎಂದೂ ಅವರ ಅನುಭವವನ್ನು ಪುಸ್ತಕದಲ್ಲಿ ಬರೆಯಲಾಗಿದೆ. ಆರಂಭದಲ್ಲಿ, ಭಾರತೀಯ ಅಭಿರುಚಿಗಳು ಅವರಿಗೆ ಹೊಸದಾಗಿದ್ದವು, ಆದರೆ ಕ್ರಮೇಣ, ಭಾರತೀಯ ಆಹಾರವು ಅವರ ದೈನಂದಿನ ಜೀವನದ ಭಾಗವಾಯಿತು. ಆರಂಭದಲ್ಲಿ ಇದು ಕಷ್ಟವಾದರೂ, ಸೋನಿಯಾ ಕ್ರಮೇಣ ಥಾಲಿಗಳಲ್ಲಿ ಬಡಿಸುವ ಕುಟುಂಬ ಊಟಕ್ಕೆ ಒಗ್ಗಿಕೊಂಡರು. ಇದರಲ್ಲಿ ಅನ್ನ, ಫುಲ್ಕಾಗಳು, ತರಕಾರಿಗಳು ಮತ್ತು ಕುರಿಮರಿ, ಮೀನು ಅಥವಾ ಕೋಳಿ, ಜೊತೆಗೆ ಅರ್ಹರ್ ದಾಲ್ ಸೇರಿವೆ ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.
ಸೋನಿಯಾ ಗಾಂಧಿಯವರ ಕುಟುಂಬದ ಊಟವು ಅನ್ನ, ಫುಲ್ಕಾ, ತರಕಾರಿಗಳು ಮತ್ತು ಕುರಿಮರಿ, ಮೀನು ಅಥವಾ ಕೋಳಿಯಂತಹ ಭಕ್ಷ್ಯಗಳನ್ನು ಒಳಗೊಂಡಿತ್ತು. ಆದಾಗ್ಯೂ, ಅವರ ತಟ್ಟೆಯಲ್ಲಿ ಪ್ರತಿದಿನವೂ ಉಳಿಯುವ ಒಂದು ವಸ್ತು ಅರ್ಹರ್ ದಾಲ್ ಆಗಿತ್ತು ಎಂದು ವಿವರಿಸಲಾಗಿದೆ.
ನವೆಂಬರ್ 10 ರಂದು ಬಿಡುಗಡೆಯಾಗಲಿರುವ ಪುಸ್ತಕ
ಸೋನಿಯಾ ಗಾಂಧಿಯವರ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಪುಸ್ತಕವು ನವೆಂಬರ್ 10, 2026 ರಂದು ಬಿಡುಗಡೆಯಾಗಲಿದೆ. ಇದು ಅವರ ಬಾಲ್ಯದಿಂದ ರಾಜೀವ್ ಗಾಂಧಿಯವರ ಭೇಟಿಯವರೆಗಿನ ಪ್ರಯಾಣ, ಅವರ ಪ್ರೀತಿ ಮತ್ತು ಮದುವೆ ಹಾಗೂ ಭಾರತದಲ್ಲಿನ ಅವರ ಜೀವನವನ್ನು ವಿವರಿಸುತ್ತದೆ.
ಇಟಾಲಿಯನ್ ಮೂಲದ ಸೋನಿಯಾ ಗಾಂಧಿ 1965 ರಲ್ಲಿ ಇಂಗ್ಲೆಂಡ್ನ ಕೇಂಬ್ರಿಡ್ಜ್ನಲ್ಲಿ ರಾಜೀವ್ ಗಾಂಧಿಯನ್ನು ಭೇಟಿಯಾದರು. ಆ ಸಮಯದಲ್ಲಿ ಅವರಿಗೆ 19 ವರ್ಷ ವಯಸ್ಸಾಗಿತ್ತು. ಇಬ್ಬರೂ ಫೆಬ್ರವರಿ 25, 1968 ರಂದು ವಿವಾಹವಾದರು. ಈ ಪುಸ್ತಕವು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆಯ ಸುತ್ತಲಿನ ಆಳವಾದ ವೈಯಕ್ತಿಕ ದುಃಖ ಸೇರಿದಂತೆ ಅವರ ಜೀವನದ ಕಠಿಣ ಅವಧಿಯನ್ನು ಸಹ ವಿವರಿಸುತ್ತದೆ.
ರಾಹುಲ್ ಗಾಂಧಿ ಸಂತೋಷ
ಸೋನಿಯಾ ಗಾಂಧಿಯವರ ಮಗ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 82 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರು ತಮ್ಮ ತಾಯಿಯ ನಿರ್ಧಾರದಲ್ಲಿ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು. ತನ್ನ ತಾಯಿಯ ಕಥೆ ತನ್ನನ್ನು ಪ್ರೀತಿಸುವ ಲಕ್ಷಾಂತರ ಜನರನ್ನು ತಲುಪುತ್ತದೆ ಎಂದು ರಾಹುಲ್ ಗಾಂಧಿ ಸಂತೋಷಪಟ್ಟಿದ್ದಾರೆ. ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜೀವನ ಚರಿತ್ರೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ ಎಂದು ಅವರು ಹೇಳಿದರು.














