ಮೋದಿ ಸರ್ಕಾರದಲ್ಲಿ ಸಚಿವನಾಗಿರುವ ಚಿರಾಗ್ ಪಾಸ್ವಾನ್ ನಿರ್ಧಾರ ಇದೀಗ ಎನ್‌ಡಿಎ ಮೈತ್ರಿಯಲ್ಲೇ ತಳಮಳ ಸೃಷ್ಟಿಸಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲಿ ತಮ್ಮ ಎಲ್‌ಜೆಪಿ ಪಕ್ಷ ಸ್ಪರ್ಧಿಸಲು ಮುಂದಾಗಿದೆ.

ನವದೆಹಲಿ (ನ.06) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದಲ್ಲಿ ತಳಮಳ ಶುರುವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸೇರಿದಂತೆ ಮಿತ್ರ ಪಕ್ಷಗಳು ತಯಾರಿ ನಡೆಸುತ್ತಿದೆ. ಇದರ ನಡುವೆ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಪಕ್ಷದ ನಡೆ ಇದೀಗ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಯಲ್ಲೇ ಆತಂಕ ಸೃಷ್ಟಿಸಿದೆ. ಮೋದಿ ಸರ್ಕಾರದಲ್ಲಿ ಸಚಿವನಾಗಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಹ್ಯಾಟ್ರಿಕ್ ಗೆಲುವಿಗಾಗಿ ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಮೋದಿಯ ವಾರಣಸಿ ಸೇರಿದಂತೆ ಕೆಲ ಪ್ರಮುಖ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಗೆಲುವು ಕಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಾರ್ಟಿ ಯುಪಿ ವಿಧಾನಸಭೆಯ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಬಿಜೆಪಿಗೆ ಸವಾಲಾದ ಮಿತ್ರ ಚಿರಾಗ್ ಪಾಸ್ವಾನ್

ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿರುವ ಚಿರಾಗ್ ಪಾಸ್ವಾನ್ ಇದೀಗ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಲ್‌ಜೆಪಿ ಪಾರ್ಟಿ ಎನ್‌ಡಿಎ ಜೊತೆ ಸೀಟು ಹಂಚಿಕೆ ಕುರಿತು ಚರ್ಚಿಸಲಿದೆ. ಬಿಜೆಪಿ ತಮ್ಮ ಪಕ್ಷಕ್ಕೆ ಸಾಕಷ್ಟು ಸೀಟುಗಳನ್ನು ನೀಡದಿದ್ದರೆ, ಎಲ್ಲಾ 403 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಚಿರಾಗ್ ಪಾಸ್ವಾನ್ ತಮ್ಮ ಎಲ್‌ಜೆಪಿ ಪಾರ್ಟಿ ವಿಸ್ತರಿಸಲು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಜೊತೆಗಿನ ಮೈತ್ರಿ ಮಾತುಕತೆ ಪ್ರಮುಖವಾಗಿ ಸೀಟು ಹಂಚಿಕೆಯಲ್ಲಿ ಒಮ್ಮತ ಅಭಿಪ್ರಾಯ ಮೂಡದಿದ್ದರೆ ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಚಿರಾಗ್ ಪಾಸ್ವಾನ್ ನಡೆಯಿಂದ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಯಲ್ಲಿ ಕೋಲಾಹಲ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ಇನ್ನಿಲ್ಲದ ಕಸರತ್ತು ಮಾಡಬೇಕಿದೆ. ಇತ್ತೀಚೆಗಿನ ಚುನಾವಣೆ ಹಾಗೂ ಬೆಳವಣಿಗೆಯಿಂದ ಬಿಜೆಪಿ ಹೊಸ ರಣತಂತ್ರ ರೂಪಿಸಬೇಕಿದೆ. ಇದರ ನಡುವೆ ಚಿರಾಗ್ ಪಾಸ್ವಾನ್ ಹೇಳಿಕೆ ಬಿಜೆಪಿಯಲ್ಲಿ ನಡುಕ ಸೃಷ್ಟಿಸಿದೆ.

ಸ್ಪಷ್ಟನೆ ನೀಡಿದ ಚಿರಾಗ್ ಪಾಸ್ವಾನ್

ಚಿರಾಗ್ ಪಾಸ್ವಾನ್ ಹೇಳಿಕೆ ಎನ್‌ಡಿಎ ಮೈತ್ರಿಯಲ್ಲಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತ ಉತ್ತಮವಾಗಿದೆ. ಎಲ್ಲಾ ಸಮುದಾಯ, ಎಲ್ಲಾ ಜನರಿಗೆ ಸೌಲಭ್ಯಗಳನ್ನು ಸಿಗುವಂತೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ನಮ್ಮ ನಾಯಕರು ಎಂದು ಲಖನೌ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.