ಪಕ್ಷಾಂತರ ಎನ್ನುವುದು ಅಧಿಕಾರದಾಹಿಯ ನಡೆ. ಇದನ್ನು ನಾನೆಂದೂ ಒಪ್ಪುವುದಿಲ್ಲ. ಹಾಗೆಯೇ ಬಿಜೆಪಿಯಲ್ಲಿ ಕೂಡ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ. ಆದರೆ, ಬಿಜೆಪಿ ಈ ದೇಶಕ್ಕಾಗಿ, ರಾಷ್ಟ್ರಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದೆ. ರಾಜಕಾರಣ ಮಾಡುವ ಬಿಜೆಪಿ ಅನಿವಾರ್ಯವಾಗಿ ಕೆಲವೊಮ್ಮೆ ಬೇರೆ ಪಕ್ಷದವರು ಬಂದಾಗ ಒಪ್ಪಿ ಅಪ್ಪಿಕೊಂಡಿದ್ದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಶಿವಮೊಗ್ಗ (ಏ.23) : ಪಕ್ಷಾಂತರ ಎನ್ನುವುದು ಅಧಿಕಾರದಾಹಿಯ ನಡೆ. ಇದನ್ನು ನಾನೆಂದೂ ಒಪ್ಪುವುದಿಲ್ಲ. ಹಾಗೆಯೇ ಬಿಜೆಪಿಯಲ್ಲಿ ಕೂಡ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ. ಆದರೆ, ಬಿಜೆಪಿ ಈ ದೇಶಕ್ಕಾಗಿ, ರಾಷ್ಟ್ರಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದೆ. ರಾಜಕಾರಣ ಮಾಡುವ ಬಿಜೆಪಿ ಅನಿವಾರ್ಯವಾಗಿ ಕೆಲವೊಮ್ಮೆ ಬೇರೆ ಪಕ್ಷದವರು ಬಂದಾಗ ಒಪ್ಪಿ ಅಪ್ಪಿಕೊಂಡಿದ್ದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ(KS Eshwarappa) ಹೇಳಿದರು.

ಪ್ರೆಸ್‌ ಟ್ರಸ್ಟ್‌ ಪತ್ರಿಕಾ ಭವನದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿ, ಅಧಿಕಾರ ಪಡೆಯುವ ನಿಟ್ಟಿನಲ್ಲಿ ಬೇರೆ ಪಕ್ಷದ ಶಾಸಕರು ಅಲ್ಲಿ ಅನುಭವಿಸಿದ ಅತೃಪ್ತಿಯಿಂದ ನಮ್ಮ ಪಕ್ಷದ ಕಡೆ ಬಂದಾಗ ಕರೆದುಕೊಂಡಿದ್ದೇವೆ. ಅವರನ್ನು ಪುನಃ ಚುನಾವಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ರಾಹುಲ್‌ ಗಾಂಧಿಯೊಂದಿಗೆ ಜೈಲಿಗೆ ಹೋಗಲು ಸಿದ್ಧ: ಕಾಂಗ್ರೆಸ್ ಮುಖಂಡ

ಆದರೆ, ಬಿಜೆಪಿಯಲ್ಲಿ ಎಂದೂ ಭ್ರಷ್ಟಾಚಾರವಿಲ್ಲ. ಜಾತೀಯತೆ ಎಂಬುದು ಇಲ್ಲ. ಭ್ರಷ್ಟಾಚಾರ ಇದೆ ಎನ್ನುವುದು ಕೇವಲ ಕಾಂಗ್ರೆಸ್‌ ಪಕ್ಷ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಅವರನ್ನು ಬಳಸಿಕೊಂಡು ಮಾಡಿದ ಹುನ್ನಾರವಾಗಿದೆ. ಇದುವರೆಗೆ ಮಾಧ್ಯಮದ ಮೂಲಕವಾದರೂ ಸಾಕ್ಷ್ಯ ಒದಗಿಸಿ ಎಂದರೆ ಇದುವರೆಗೂ ಅದನ್ನು ಮಾಡಿಲ್ಲ ಎಂದರು.

ವಾಸ್ತವವಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರು. ಹಗರಣವಿದ್ದು, ನಿವೃತ್ತ ನ್ಯಾಯಾಧೀಶರು ನೀಡಿದ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಇನ್ನು ಡಿ.ಕೆ. ಶಿವಕುಮಾರ್‌ ಈಗಾಗಲೇ ತಿಹಾರ್‌ ಜೈಲುವಾಸ ಅನುಭವಿಸಿದ್ದು, ಜಾಮೀನು ಮೇಲೆ ಓಡಾಡುತ್ತಿದ್ದಾರೆ. ಇವರಿಬ್ಬರನ್ನೂ ಜೈಲಿಗೆ ಕಳುಹಿಸಿಯೇ ತೀರುತ್ತೇವೆ. ಕಬ್ಬಿಣವನ್ನು ಕೆಂಪಗೆ ಕಾಯಿಸಿಯೇ ಬಡಿಯುತ್ತಾರೆ. ಹಾಗೇ ಇವರಿಬ್ಬರ ಪಾಪದ ಕೊಡ ಇನ್ನಷ್ಟುತುಂಬಲಿ ಎಂದು ಕಾಯುತ್ತಿದ್ದೇವೆ. ಒಂದಲ್ಲ ಒಂದು ದಿನ ಜೈಲಿಗೆ ಕಳುಹಿಸುವುದು ಗ್ಯಾರಂಟಿ ಎಂದರು.

ಕೂಲಿ ಕಾರ್ಮಿಕ ತಾಯಿಯ ಮಗ:

ಸಾಮಾನ್ಯ ಕೂಲಿ ಕಾರ್ಮಿಕನ ಮಗನಾಗಿದ್ದ ನನ್ನನ್ನು ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದ ಬಿಜೆಪಿ(Karnataka BJP) ನನಗೆ ತಾಯಿ ಸ್ವರೂಪ. ಆರಂಭದಿಂದಲೂ ಈವರೆಗೆ ಪಕ್ಷದ ಹಿರಿಯರ ಸೂಚನೆಯನ್ನು ಚಾಚು ತಪ್ಪದೇ ಪಾಲನೆ ಮಾಡಿಕೊಂಡು ಬಂದಿದ್ದೇನೆ. ಮೊನ್ನೆಯೂ ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆಯಂತೆ ಚುನಾವಣೆ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದೆ. ಆನಂತರವೂ ನಾನು ಪಕ್ಷದಲ್ಲಿ ನಡೆದುಕೊಂಡ ರೀತಿಯನ್ನು ಮೆಚ್ಚಿ ವಿಶ್ವನಾಯಕ ನರೇಂದ್ರ ಮೋದಿ ಅವರು ನನಗೆ ಕರೆ ಮಾಡಿದಾಗ ನನ್ನ ರಾಜಕೀಯ ಜೀವನ ಸಾರ್ಥಕವಾಯಿತು ಎಂದೆನಿಸಿತು ಎಂದು ಶಾಸಕ ಕೆæ.ಎಸ್‌.ಈಶ್ವರಪ್ಪ ಶ್ಲಾಘಿಸಿದರು.

ಸಾಮಾನ್ಯ ಕಾರ್ಯಕರ್ತರಾಗಿದ್ದ ನನ್ನನ್ನು 1989ರಲ್ಲಿ ಪಕ್ಷದ ಹಿರಿಯರು ವಿಧಾನಸಭಾ ಚುನಾವಣೆ ಸ್ಪರ್ಧೆಗೆ ನಿಲ್ಲಿಸಿದರು. ಚುನಾವಣೆಯ ಯಾವ ಅನುಭವವೂ ಇಲ್ಲದ ನಾನು ಹಿರಿಯರ ಮಾತಿಗೆ ಕಟಿಬಿದ್ದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಆಗ ನನ್ನ ಎದುರಾಳಿ ಪ್ರಭಾವಿ ನಾಯಕರಾಗಿದ್ದರು. ನಾನು ಗೆಲ್ತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ, ಹಿರಿಯರ ಸೂಚನೆಯನ್ನು ಪರಿಪಾಲನೆ ಮಾಡಿದೆ. ಅದರ ಫಲವಾಗಿ ಚುನಾವಣೆಯಲ್ಲಿ ಗೆದ್ದೆ. ಅಲ್ಲಿಂದ ಈವರೆಗೆ 7 ಬಾರಿ ಸ್ಪರ್ಧೆ ಮಾಡಿ 5 ಬಾರಿ ಗೆದ್ದಿದ್ದೇನೆ. 2 ಬಾರಿ ಸೋತಿದ್ದೇನೆ. ಆರಂಭದಲ್ಲಿ ಪಕ್ಷದಿಂದ ಸ್ಪರ್ಧೆ ಮಾಡಲು ಯಾವ ಅಭ್ಯರ್ಥಿಗಳು ಮುಂದೆ ಬರುತ್ತಿರಲಿಲ್ಲ. ಈಗ ರಾಜ್ಯದಲ್ಲಿ ಮಾತ್ರ ಅಲ್ಲ ದೇಶದಲ್ಲೆ ಪಕ್ಷ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರೆ ಅದಕ್ಕೆ ಸಂಘಟನೆ ಕಾರಣ ಎಂದರು.

ಅನ್ಯಾಯ ಮಾಡಿಲ್ಲ:

‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬಂತೆ ಬಿಜೆಪಿ ಹೈಕಮಾಂಡ್‌ ನಡೆದುಕೊಂಡು ಈಶ್ವರಪ್ಪ ಅವರಿಗೆ ಪಕ್ಷ ಅನ್ಯಾಯ ಮಾಡಿದೆ ಎಂಬ ಸಾಮಾನ್ಯ ಕಾರ್ಯಕರ್ತರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ಇಲ್ಲ. ಪಕ್ಷದ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಕಾರಣಕ್ಕೆ ತೆಗೆದುಕೊಳ್ಳುತ್ತದೆ. ಅದೆಲ್ಲ ಏನೇ ಆಗಿದ್ದರೂ ನಾನು ಎಲ್ಲ ಕಾಲಕ್ಕೂ ಪಕ್ಷದ ಸಿಪಾಯಿ. ಪಕ್ಷ ಹೇಳಿದಂತೆ ಕೇಳಿಕೊಂಡು ಬಂದವನು. ಇದೇ ಕಾರಣಕ್ಕಾಗಿ ವಿಶ್ವನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ನನಗೆ ಕರೆ ಮಾಡಿದ್ದಾರೆ. ಇದು ದೇಶಾದ್ಯಂತ ಸುದ್ದಿಯಾಗಿದ್ದು, ಇದಕ್ಕೆ ದೊಡ್ಡ ಹಿರಿಮೆ ನನಗೆ ಬೇರೆ ಏನು ಬೇಕಿದೆ ಎಂದರು.

ನಾನು ನನ್ನ ಮಗನಿಗೆ ಟಿಕೆಟ್‌ ಕೇಳಿಲ್ಲ. ಆದರೆ ಕೇಂದ್ರ ನಾಯಕರು ನಿಮ್ಮ ಸೊಸೆಗೆ ಟಿಕೆಟ್‌ ಕೊಡುವುದಾಗಿ ಹೇಳಿದರು. ಆದರೆ ನಾನೇ ಬೇಡವೆಂದೆ. ಕೊನೆಗೆ ನನ್ನ ಸೊಸೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದಳು. ಒಂದೇ ಕುಟುಂಬವೇ ಎಲ್ಲ ಕಾಲಕ್ಕೂ ಅಧಿಕಾರ ಹೊಂದುವುದು ಸರಿಯಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಜಾತಿ ಆಧಾರದ ಮೇಲೆ ಎಂದೂ ಚುನಾವಣೆ ನಡೆಯುವುದಿಲ್ಲ. ಅದೇ ರೀತಿ ದ್ವೇಷದ ರಾಜಕಾರಣವೂ ಇಲ್ಲ. ಚುನಾವಣೆ ಬಳಿಕ ನಾವೆಲ್ಲ ಒಟ್ಟಾಗಿಯೇ ಇರುವ ವಾತಾವರಣ. ಭವಿಷ್ಯದಲ್ಲಿ ಬೇರೆ ಅವಕಾಶ ಕೊಡುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಏನು ಆದೇಶ ನೀಡುತ್ತದೆಯೋ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದರು.

ಸಂವಾದದಲ್ಲಿ ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌, ಕಾರ್ಯದರ್ಶಿ ನಾಗರಾಜ್‌ ನೇರಿಗೆ ಇದ್ದರು.

ಬಿಜೆಪಿಯಲ್ಲಿ ಜಾತಿ ಹೆಸರಿನಲ್ಲಿ ಸ್ಥಾನಮಾನ ನೀಡಿಲ್ಲ

ಬಿಜೆಪಿಯಲ್ಲಿ ಜಾತಿಯಿಂದ ಯಾರಿಗೂ ಸ್ಥಾನಮಾನ ಸಿಕ್ಕಿಲ್ಲ. ಸ್ಥಾನಮಾನ ಸಿಕ್ಕಾಗ ಜಾತಿ ಮುನ್ನೆಲೆಗೆ ಬಂದಿದೆ ಅಷ್ಟೇ. ಬಿ.ಎಸ್‌.ಯಡಿಯೂರಪ್ಪ ಅವರು ಕೂಡ ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ನಾನು ಕೂಡ ರಾಯಣ್ಣ ಬ್ರಿಗೇಡ್‌ ಹುಟ್ಟು ಹಾಕಿದ್ದು ರಾಜಕೀಯ ಕಾರಣಕ್ಕಾಗಿ ಅಲ್ಲ, ಹಿಂದುಳಿದವರ ಅಭಿವೃದ್ಧಿಗೆ ಅಷ್ಟೇ. ಎಲ್ಲ ಪಕ್ಷದವರೂ ಬ್ರಿಗೇಡ್‌ನಲ್ಲಿ ಇದ್ದರು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ನಾನೆಂದು ಮುಸ್ಲಿಂ ವಿರೋಧಿ ಅಲ್ಲ. ರಾಷ್ಟ್ರ ಭಕ್ತ ಮುಸ್ಲಿಮರನ್ನೂ ಕೂಡ ನಾವು ಒಪ್ಪುತ್ತೇವೆ. ರಾಷ್ಟ್ರ ವಿರೋಧಿ ಮುಸ್ಲಿಮರ ಬಗ್ಗೆ ನಮ್ಮ ಸಿಟ್ಟು ಅಷ್ಟೇ. ಶಿವಮೊಗ್ಗದಲ್ಲಿ ನನ್ನನ್ನು ಪ್ರೀತಿಸುವ ಮುಸ್ಲಿಂ ಸಮುದಾಯವಿದೆ. ನಾನು ರಾಜಕೀಯ ನಿವೃತ್ತಿ ಹೊಂದಿದಾಗ ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಮನೆಗೆ ಬಂದು ಅಣ್ಣನ ಪ್ರೀತಿ ತೋರಿಸಿ ಕಣ್ಣೀರು ಹಾಕಿದ್ದಾರೆ. ಇವರನ್ನೆಲ್ಲ ನಾನು ಹೇಗೆ ಕೆಟ್ಟಮುಸ್ಲಿಮರೆಂದು ಹೇಳಬೇಕಾಗುತ್ತದೆ. ಯಾರು ಹಿಂದು ಕಾರ್ಯಕತರನ್ನು ಹತ್ಯೆ ಮಾಡುತ್ತಾ ಗೂಂಡಾಗಿರಿ ಮಾಡುವ ಮುಸ್ಲಿಂ ಗೂಂಡಾಗಳ ವಿರೋಧಿ ನಾನು ಎಂದರು.

ಕೋರ್ಟ್‌ ತೀರ್ಪನ್ನೆ ನಂಬದವರು ಮೋದಿ ಕರೆ ನಂಬುತ್ತಾರಾ?

ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಘೋಷಣೆ ನಂತರ ನಾನು ನಡೆದುಕೊಂಡ ರೀತಿ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದರೆ, ಅದಕ್ಕೂ ಕಾಂಗ್ರೆಸ್‌ನವರೂ ಟೀಕೆ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ನಂಬಿಕೆ ಎನ್ನುವುದೇ ಇಲ್ಲ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh patil suicide case)ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದ ಕೂಡಲೇ ನಾನು ರಾಜಿನಾಮೆ ಕೊಟ್ಟು ಬಂದೆ. ನಂತರ ತನಿಖೆ ಮಾಡಿದ ನ್ಯಾಯಲಯ ನನಗೆ ಪ್ರಕರಣದಿಂದ ಕ್ಷೀನ್‌ಚೀಟ್‌ ನೀಡಿದೆ. ಕಾಂಗ್ರೆಸ್‌ನವರಿಗೆ ಕಾನೂನು, ಕೋರ್ಟ್ ಬಗ್ಗೆ ನಂಬಿಕೆ ಇಲ್ಲ ಇದ್ದರೆ ನಾನೇ ಮಾಡಲಿ ಎಂದು ಕೆ.ಎಸ್‌.ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದೇ ರಾಹುಲ್‌ಗಾಂಧಿ(Rahul gandhi) ವಿರುದ್ಧ ಮಾನನಷ್ಟಮೊಕದ್ದಮೆಯಲ್ಲಿ ನ್ಯಾಯಾಲಯ ನೀಡಿದ ಶಿಕ್ಷೆಯ ಬಗ್ಗೆಯೂ ಕಾಂಗ್ರೆಸ್‌ ನೀಡುವ ಪ್ರತಿಕ್ರಿಯೆ ಹೇಗಿದೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದರು.

ಈಶ್ವರಪ್ಪಗೆ ಮೋದಿ ಕರೆ ನಾಚಿಕೆಗೇಡು: ರಣದೀಪ್‌ ಸಿಂಗ್‌ ಸುರ್ಜೇವಾಲಾ

ಬಿಜೆಪಿ ಕೋಟಿ ಸದಸ್ಯರಲ್ಲಿ ಕಾಂತೇಶ್‌ ಕೂಡ ಒಬ್ಬ

ಪುತ್ರ ಕಾಂತೇಶ್‌ ಟಿಕೆಟ್‌ ಕೊಡಲಿಲ್ಲ ಎಂದು ನಾನು ಬೇಜಾರಾಗಿಲ್ಲ, ಕೊಡಿ ಎಂದೂ ನಾನು ಕೇಳಿಲ್ಲ. ಪಕ್ಷದಲ್ಲಿರುವ ಕೋಟಿ ಸದಸ್ಯರಲ್ಲಿ ಕಾಂತೇಶ್‌ ಕೂಡ ಒಬ್ಬ. ಪಕ್ಷದ ಸಂಘಟನೆ ಮಾಡಲು ಸ್ಥಾನಮಾನ ಬೇಕಾಗಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿಯೂ ಪಕ್ಷದ ಸಂಘಟನೆ ಮಾಡಬಹುದು. ಎಲ್ಲ ಸದಸ್ಯರಿಗೂ ಅವಕಾಶ ಕೊಡಲು ಹೇಗೆ ಸಾಧ್ಯ? ಅವರವರ ಸರದಿ ಬಂದಾಗ ಎಲ್ಲವೂ ಸಿಗುತ್ತದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.