ಭ್ರಷ್ಟಾಚಾರ ಆರೋಪದ ಮೇಲೆ ಸಚಿವ ಸ್ಥಾನ ಕಳೆದುಕೊಂಡಿರುವ, ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್‌ ಸಾವಿಗೆ ಕಾರಣರಾದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಪ್ರಶಂಸಿಸುವ ಮೂಲಕ 40 ಪರ್ಸೆಂಟ್‌ ಕಮಿಷನ್‌ಗೆ ಅಂಕಿತ ಹಾಕಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟೀಕಿಸಿದ್ದಾರೆ.  

ಬೆಂಗಳೂರು (ಏ.22): ಭ್ರಷ್ಟಾಚಾರ ಆರೋಪದ ಮೇಲೆ ಸಚಿವ ಸ್ಥಾನ ಕಳೆದುಕೊಂಡಿರುವ, ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್‌ ಸಾವಿಗೆ ಕಾರಣರಾದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಪ್ರಶಂಸಿಸುವ ಮೂಲಕ 40 ಪರ್ಸೆಂಟ್‌ ಕಮಿಷನ್‌ಗೆ ಅಂಕಿತ ಹಾಕಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟೀಕಿಸಿದ್ದಾರೆ. ಸಂತೋಷ್‌ ಪಾಟೀಲ್‌ ತನ್ನ ಸಾವಿಗೆ ಕೆ.ಎಸ್‌. ಈಶ್ವರಪ್ಪ ಅವರೇ ಕಾರಣ ಎಂದು ವಾಟ್ಸಾಪ್‌ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಒಂದು ಸಾವಿನ ಪ್ರಕರಣದ ಆರೋಪಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿ ಪ್ರಶಂಸಿಸುತ್ತಾರೆ ಎಂದರೆ ಏನರ್ಥ ಎಂದು ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಕಚೇರಿಯಿಂದ ದೇಶಕ್ಕೆ ಅವಮಾನ ಆಗಿದೆ. ರಾಜಕೀಯ ಲಾಭಕ್ಕೆ ಮೋದಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದು ಸಾಬೀತಾಗಿದೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲ ಎಂದು ಮೋದಿ ಹೇಳಿದಂತಾಗಿದೆ’ ಎಂದು ಟೀಕಿಸಿದರು.

ರಾಜಕೀಯದಿಂದ ನನ್ನನ್ನು ದೂರ ಮಾಡಲು ಬಿಜೆಪಿ ಷಡ್ಯಂತ್ರ: ಡಿ.ಕೆ.ಶಿವಕುಮಾರ್‌

ಸಂತೋಷ್‌ ಪಾಟೀಲ್‌ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮೋದಿ ಸಂತಾಪ ಸೂಚಿಸಿಲ್ಲ. ಈಶ್ವರಪ್ಪ ಬಿಜೆಪಿ ನಾಯಕರಾಗಿರಬಹುದು. ಆದರೆ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದಲೇ ಅವರಿಗೆ ಟಿಕೆಟ್‌ ನೀಡಿಲ್ಲ. ಅಂತಹವರೊಂದಿಗೆ ಮಾತನಾಡಿರುವ ನರೇಂದ್ರ ಮೋದಿ ನಡೆ ನಾಚಿಕೆ ಮೂಡಿಸುತ್ತಿದೆ. ಫೈಟರ್‌ ರವಿಗೆ ತಲೆ ಬಾಗಿ ನಮಸ್ಕರಿಸಿದ ಮೋದಿಯಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. 40 ಪರ್ಸೆಂಟ್‌ ಕಮಿಷನ್‌ಗೆ ಬೆಂಬಲ ಇರುವುದರಿಂದಲೇ ಗುತ್ತಿಗೆದಾರರ ಸಂಘದ ದೂರಿಗೆ ಪ್ರತಿಕ್ರಿಯೆ ನೀಡಿಲ್ಲ. 

ಏ.30ಕ್ಕೆ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ: 2 ಲಕ್ಷ ಜನ ಭಾಗಿ

ಲಿಂಗಾಯತ ಸ್ವಾಮೀಜಿಗಳು ಭ್ರಷ್ಟಾಚಾರ ಆರೋಪ ಮಾಡಿದರು. ರುಪ್ಸಾ ಸೇರಿದಂತೆ ಹಲವಾರು ಸಂಸ್ಥೆಗಳು ಆರೋಪ ಮಾಡಿದರೂ ಪ್ರತಿಕ್ರಿಯಿಸಿಲ್ಲ. ನೆಹರೂ ಓಲೆಕಾರ್‌ ಅವರು ಮುಖ್ಯಮಂತ್ರಿ ಬೊಮ್ಮಾಯಿ 40 ಪರ್ಸೆಂಟ್‌ ಭ್ರಷ್ಟಾಚಾರದ ಏಜೆಂಟ್‌ ಎಂದು ಹೇಳಿದ್ದಾರೆ. ಬೊಮ್ಮಾಯಿ ಸ್ವಚ್ಛವಾಗಿದ್ದರೆ ಇಷ್ಟು ಹೊತ್ತಿಗೆ ಮಾನನಷ್ಟಮೊಕದ್ದಮೆ ಹಾಕುತ್ತಿದ್ದರು. ಅವರ ಮೌನ ಆರೋಪವನ್ನು ಒಪ್ಪಿಕೊಂಡಂತಾಗಿದೆ. ಹೀಗಾಗಿ ಈ ಪುಣ್ಯ ಭೂಮಿಯಿಂದ ಆದಷ್ಟುಬೇಗ ಭ್ರಷ್ಟಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.