ಬಿಜೆಪಿಯ ಹಿರಿಯ ನಾಯಕ, ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ (88) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಆರ್‌ಎಸ್‌ಎಸ್ ಹಿನ್ನೆಲೆಯಿಂದ ಸಚಿವರಾಗುವವರೆಗೆ ಸಾಗಿದ ಅವರ ರಾಜಕೀಯ ಹಾದಿ, ಸಿದ್ಧಾಂತಕ್ಕೆ ಬದ್ಧರಾಗಿ ರಾಜೀನಾಮೆ ನೀಡಿದ ಘಟನೆ ಹಾಗೂ ಅವರ ಸರಳ ವ್ಯಕ್ತಿತ್ವವನ್ನು ಈ ಲೇಖನ ವಿವರಿಸುತ್ತದೆ.
ಬೆಂಗಳೂರು: ಕರ್ನಾಟಕ ರಾಜಕಾರಣದ ಅಪರೂಪದ ಸರಳ, ಸಜ್ಜನ ಮುತ್ಸದ್ದಿ, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ (88) ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಜಿಂದಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಆರ್‌ಎಸ್‌ಎಸ್ ಹಿನ್ನೆಲೆಯಿಂದ ಮಂತ್ರಿಯಾಗುವವರೆಗೆ, ರಾಮಚಂದ್ರೇಗೌಡರ ರಾಜಕೀಯ ಹಾದಿ
ತಮ್ಮ ಜೀವಿತಾವಧಿಯ ಬಹುಪಾಲು ಸಮಯವನ್ನು ಸಂಘಟನೆ ಹಾಗೂ ಜನಸೇವೆಗಾಗಿ ಮುಡುಪಾಗಿಟ್ಟಿದ್ದ ರಾಮಚಂದ್ರೇಗೌಡರು, ರಾಜ್ಯದಲ್ಲಿ ಕಮಲ ಪಾಳೆಯವನ್ನು ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ. 1953 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಸೇರುವ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು. ದಶಕಗಳ ಕಾಲ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದರು. 1970 ರ ದಶಕದಲ್ಲಿ ಸಕ್ರಿಯ ರಾಜಕಾರಣ ಆರಂಭಿಸಿದ ಇವರು, ಅಂದಿನ ಭಾರತೀಯ ಜನಸಂಘದ (ಬಿಜೆಪಿಯ ಪೂರ್ವ ರೂಪ) ವತಿಯಿಂದ ಬೆಂಗಳೂರು ನಗರ ನಿಗಮಕ್ಕೆ (ಬಿಬಿಸಿ) ಪ್ರವೇಶಿಸಿದ ಮೊದಲ ಕಾರ್ಪೊರೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸತತವಾಗಿ 5 ಬಾರಿ ವಿಧಾನ ಪರಿಷತ್ (MLC) ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಂಸದೀಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಹಾಗೂ ನಂತರ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಯಶಸ್ವಿ ಸೇವೆ ಸಲ್ಲಿಸಿದರು. 2010 ರಲ್ಲಿ ವೈದ್ಯಕೀಯ ಕಾಲೇಜುಗಳ ನೇಮಕಾತಿ ವಿವಾದದಲ್ಲಿ ಅವರ ಹೆಸರು ಕೇಳಿಬಂದಾಗ, ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹೈಕೋರ್ಟ್ ಈ ಪ್ರಕರಣದಲ್ಲಿ ಅವರಿಗೆ ಸಂಪೂರ್ಣ "ಕ್ಲೀನ್ ಚೀಟ್" ನೀಡಿ ಮುಕ್ತಗೊಳಿಸಿತ್ತು. 2018 ರಲ್ಲಿ ವಯೋಸಹಜ ಕಾರಣಗಳಿಂದಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದುಕೊಂಡಿದ್ದರು.
ಇಂದು ಸಂಜೆ 5:30ಕ್ಕೆ ಕಾಮಾಕ್ಷಿಪಾಳ್ಯದಲ್ಲಿ ಅಂತ್ಯಕ್ರಿಯೆ
ರಾಮಚಂದ್ರೇಗೌಡರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಇಂದು ಸಂಜೆ ನೆರವೇರಿಸಲಾಗುತ್ತದೆ. ಸಂಜೆ 4:00 ಗಂಟೆಗೆ ಅವರ ಸ್ವಗೃಹದಿಂದ ಅಂತಿಮ ಯಾತ್ರೆ ಹೊರಡಲಿದ್ದು, ಸಂಜೆ 5:30ರ ಸುಮಾರಿಗೆ ಕಾಮಾಕ್ಷಿಪಾಳ್ಯದಲ್ಲಿರುವ ಅವರ ಸ್ವಂತ ಜಾಗದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಂಬನಿ ಮಿಡಿದ ಗಣ್ಯರು: ಅಂತಿಮ ದರ್ಶನ ಪಡೆದ ನಾಯಕರು
ಮಾಜಿ ಸಚಿವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿಯ ಹಿರಿಯ ನಾಯಕರಾದ ಸಿ.ಟಿ. ರವಿ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
"ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಡಿಪಾಯ ಹಾಕಿದ ಸಂಸ್ಥಾಪಕರಲ್ಲಿ ರಾಮಚಂದ್ರೇಗೌಡರು ಪ್ರಮುಖರು. ಆರ್‌ಎಸ್‌ಎಸ್ ಸ್ವಯಂಸೇವಕರಾಗಿ, ಐದು ಬಾರಿ ಎಂಎಲ್‌ಸಿಯಾಗಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಶೂನ್ಯದಿಂದ ಬಿಜೆಪಿ ಪಕ್ಷವನ್ನು ಇವತ್ತಿನ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಅವರ ಪರಿಶ್ರಮ ಅಪಾರವಾದದ್ದು." -ಸಿ.ಟಿ. ರವಿ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಂತಾಪ
ರಾಮಚಂದ್ರೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್:
ಹಿರಿಯ ನಾಯಕರು, ಮಾಜಿ ಸಚಿವರಾದ ಶ್ರೀ ರಾಮಚಂದ್ರಗೌಡರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ರಾಜ್ಯದ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಅವರು ನೀಡಿದ ಕೊಡುಗೆಗಳು ಅಪಾರ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ರಾಮಚಂದ್ರಗೌಡರು ಸಲ್ಲಿಸಿದ ಸೇವೆಯೂ ಸದಾ ನೆನಪಿನಲ್ಲಿ ಉಳಿಯುವಂತದ್ದು. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ರಾಮಚಂದ್ರಗೌಡರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಅಗಲಿಕೆಯಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಬಂಧುಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಂತಾಪ:
"ಮಾಜಿ ಮಂತ್ರಿಗಳು ಹಾಗೂ ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿದ್ದ ಶ್ರೀ ರಾಮಚಂದ್ರ ಗೌಡರ ನಿಧನದ ವಾರ್ತೆ ತಿಳಿದು ಬಹಳ ದುಃಖವಾಯಿತು. ಶ್ರೀಯುತರು ನನ್ನ ಆತ್ಮೀಯರಾಗಿದ್ದರು ಹಾಗೂ ಮೊದಲ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸಂಪುಟ ಸದಸ್ಯರಾಗಿದ್ದರು. ಅವರು ಸ್ನೇಹಶೀಲರು, ಸರಳ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ಶ್ರೀ ರಾಮಚಂದ್ರ ಗೌಡರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರು, ಅಭಿಮಾನಿಗಳು ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ 🙏


