ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿದಿದ್ದು, ತಮ್ಮ ಕಾವೇರಿ ನಿವಾಸದಲ್ಲೇ ಇದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಹಲವು ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವಾಗಲೇ ಸಿದ್ದರಾಮಯ್ಯನವರ ಈ ನಡೆ, ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತದ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ಆ.03): ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದ್ದು, ನೂತನ ಸಚಿವರ ಪದಗ್ರಹಣ ಕಾರ್ಯಕ್ರಮದಿಂದ (Swearing-in Ceremony) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದೂರ ಉಳಿದಿದ್ದಾರೆ.
ಕಾವೇರಿ ನಿವಾಸದಲ್ಲೇ ಉಳಿದ ಮಾಜಿ ಸಿಎಂ!
ರಾಜಭವನದಲ್ಲಿ (Raj Bhavan) ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದ್ದರೂ, ಅದರಲ್ಲಿ ಭಾಗವಹಿಸದಿರಲು ಮಾಜಿ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲೇ (Kaveri Residence) ಉಳಿದುಕೊಂಡಿದ್ದಾರೆ. ಮಧ್ಯಾಹ್ನವೇ ತಮ್ಮ ಆಪ್ತರ ಬಳಿ, 'ನಾನು ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗುವುದಿಲ್ಲ' ಎಂದು ಸಿದ್ದರಾಮಯ್ಯ ತಿಳಿಸಿದ್ದರು ಎಂದು ತಿಳಿದುಬಂದಿದೆ.
ರಾಜಕೀಯ ವಲಯದಲ್ಲಿ ಕುತೂಹಲ!
ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಹಲವು ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವ ಮಧ್ಯೆಯೇ, ಸಿದ್ದರಾಮಯ್ಯ ಅವರ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನೂತನ ಸಚಿವರ ಪದಗ್ರಹಣಕ್ಕೆ ಮಾಜಿ ಸಿಎಂ ಗೈರಾಗಿರುವುದು ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದ ಒಳಗಿನ ಆಂತರಿಕ ಅಸಮಾಧಾನವನ್ನು ಎತ್ತಿ ತೋರಿಸುತ್ತಿದೆಯೇ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿವೆ.
ನೂತನ ಸಚಿವರ ಪದಗ್ರಹಣಕ್ಕೆ ಸಿಎಂ, ಡಿಸಿಎಂ ಸಾಥ್
ಲೋಕಭವನದ ಆವರಣದಲ್ಲಿ ಸೋಮವಾರ ಸಂಜೆ ನಡೆದ ನೂತನ 19 ಸಚಿವರ ಪದಗ್ರಹಣ ಸಮಾರಂಭವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಪ್ರಮಾಣವಚನ ಬೋಧಿಸುವ ಮೂಲಕ ನಡೆಸಿಕೊಟ್ಟರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹಾಜರಿದ್ದರು.
10ಕ್ಕೂ ಹೆಚ್ಚು ಶಾಸಕರಿಂದ ಅಸಮಾಧಾನ, ನಾಲ್ವರಿಂದ ರಾಜೀನಾಮೆ ಪ್ರಹಸನ
ರಾಜ್ಯದಲ್ಲಿ ಸಂಪುಟ ವಿಸ್ತರಣೆ ವೇಳೆ ತಮಗೂ ಮಂತ್ರಿಗಿರಿ ಸ್ಥಾನ ಸಿಗುತ್ತದೆಂದು ಕಾದು ಕುಳಿತಿದ್ದ ಹಾಗೂ ಹೈಕಮಾಂಡ್‌ನಿಂದ ರವಾನೆಯಾದ ಮೊದಲ ಪಟ್ಟಿಯಲ್ಲಿ ಹೆಸರಿದ್ದು, ಅಂತಿಮ ಪಟ್ಟಿಯಲ್ಲಿ ಹೆಸರು ಕೈಬಿಡಲಾದ ಶಾಸಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಶಾಸಕರು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗರು ದೊಡ್ಡ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಉಳಿದಂತೆ ಈಗಾಗಲೇ ಯಶವಂತರಾಯ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಳದಂತೆ ಬೇಳೂರು ಗೋಪಾಲಕೃಷ್ಣ ಹಾಗೂ ಶಾಸಕ ಸಂಗಮೇಶ್ ಅವರು ನಾಳೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.


