'ಭಾರತದ ತೂಗು ಸೇತುವೆ ಮನುಷ್ಯ' ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ನಿಧನರಾಗಿದ್ದಾರೆ. ಅವರು ದೇಶಾದ್ಯಂತ 160ಕ್ಕೂ ಹೆಚ್ಚು ಕಡಿಮೆ ವೆಚ್ಚದ ತೂಗು ಸೇತುವೆಗಳನ್ನು ನಿರ್ಮಿಸಿ, ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ಕಾರಣರಾಗಿದ್ದರು. ಅವರ ನಿಸ್ವಾರ್ಥ ಸೇವೆ ಮತ್ತು ತಾಂತ್ರಿಕ ಕೊಡುಗೆಯಿಂದಾಗಿ ನೂರಾರು ಹಳ್ಳಿಗಳು ಮುಖ್ಯವಾಹಿನಿಗೆ ಬಂದವು.

ದಕ್ಷಿಣ ಕನ್ನಡ: ದೇಶಾದ್ಯಂತ 'ತೂಗು ಸೇತುವೆಗಳ ಸರದಾರ' ಹಾಗೂ 'ಭಾರತದ ಸೇತುವೆ ಮನುಷ್ಯ' (Bridge Man of India) ಎಂದೇ ಪ್ರಖ್ಯಾತರಾಗಿದ್ದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಉತ್ತರಾಖಂಡದ ಪವಿತ್ರ ದೇಗುಲಗಳ ಪ್ರವಾಸ ಕೈಗೊಂಡಿದ್ದ ಅವರು, ತೀವ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸುಳ್ಯದ ಖಾಸಗಿ ಆಸ್ಪತ್ರೆಗೆ (ಕೆವಿಜಿ ಆಸ್ಪತ್ರೆ) ದಾಖಲಾಗಿದ್ದ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಉಷಾ ಅವರನ್ನು ಈಗಾಗಲೇ ಕಳೆದುಕೊಂಡಿದ್ದರು. ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನದಿಂದಾಗಿ ಗ್ರಾಮೀಣ ಭಾರತದ ನೂರಾರು ಹಳ್ಳಿಗಳಿಗೆ ಬೆಳಕಾಗಿದ್ದ ಮಹಾನ್ ತಾಂತ್ರಿಕ ಚೇತನವೊಂದು ಮರೆಯಾದಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನನ ಮತ್ತು ವಿದ್ಯಾಭ್ಯಾಸದ ಹಿನ್ನೆಲೆ

ಡಾ. ಗಿರೀಶ್ ಭಾರದ್ವಾಜ್ ಅವರು 1950ರ ಮೇ 2 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದರು. ಹಳ್ಳಿಯ ಪರಿಸರದಲ್ಲೇ ಬೆಳೆದ ಅವರಿಗೆ ಗ್ರಾಮೀಣ ಭಾಗದ ಜನರ ಕಷ್ಟಗಳ ಅರಿವಿತ್ತು. 1973 ರಲ್ಲಿ ಮಂಡ್ಯದ ಪ್ರತಿಷ್ಠಿತ ಪಿ.ಇ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ (PESCE) ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಪದವಿ ಮುಗಿದ ತಕ್ಷಣ ದೊಡ್ಡ ನಗರಗಳತ್ತ ಅಥವಾ ವಿದೇಶಗಳತ್ತ ಮುಖ ಮಾಡದ ಅವರು, ತಮ್ಮ ತಂದೆಯ ಆಶಯದಂತೆ ಹುಟ್ಟೂರಿನಲ್ಲೇ ಉಳಿದುಕೊಂಡರು. ಊರಿನಲ್ಲೇ ಸಣ್ಣದೊಂದು ವರ್ಕ್‌ಶಾಪ್ ಆರಂಭಿಸಿ ಸ್ಥಳೀಯರಿಗೆ ನೆರವಾಗಲು ಆರಂಭಿಸಿದರು.

ಪಯಸ್ವಿನಿ ನದಿಯ ದಂಡೆಯ ಮೇಲೊಂದು ರೋಚಕ ಇತಿಹಾಸ!

ಅದು 1989ರ ಸಮಯ. ಅರಂಬೂರು ಗ್ರಾಮದ ಜನರಿಗೆ ಸುಳ್ಯ ಪಟ್ಟಣದೊಂದಿಗೆ ಸಂಪರ್ಕ ಸಾಧಿಸಲು ಪಯಸ್ವಿನಿ ನದಿಯೇ ದೊಡ್ಡ ಅಡ್ಡಿಯಾಗಿತ್ತು. ಮಳೆಗಾಲದಲ್ಲಂತೂ ಹಳ್ಳಿಯ ಜನ ಸಂಪೂರ್ಣವಾಗಿ ದ್ವೀಪದಂತಾಗುತ್ತಿದ್ದರು. ಅಲ್ಲಿ ಒಂದು ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಗಿರೀಶ್ ಅವರ ಬಳಿ ವಿನಂತಿಸಿಕೊಂಡರು. ಆ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ 'ತೂಗು ಸೇತುವೆ'ಯ ಕಲ್ಪನೆಯೇ ಅತ್ಯಂತ ಹೊಸದಾಗಿತ್ತು ಮತ್ತು ಸವಾಲಿನದ್ದಾಗಿತ್ತು.

ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಗಿರೀಶ್ ಅವರು, 40 ಜನ ಸ್ವಯಂಸೇವಕ ಯುವಕರ ತಂಡವನ್ನು ಕಟ್ಟಿಕೊಂಡು ಕೇವಲ ಕೆಲವೇ ದಿನಗಳಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ಅತ್ಯಂತ ಬಲಿಷ್ಠವಾದ ತಮ್ಮ ಮೊದಲ ತೂಗು ಸೇತುವೆಯನ್ನು ಸಾಕಾರಗೊಳಿಸಿದರು. ಆಶ್ಚರ್ಯದ ಸಂಗತಿಯೆಂದರೆ, ನಿರ್ಮಾಣವಾಗಿ 35ಕ್ಕೂ ಹೆಚ್ಚು ವರ್ಷಗಳು ಕಳೆದರೂ ಆ ಮೊದಲ ಸೇತುವೆ ಇಂದಿಗೂ ಜನರ ಸುರಕ್ಷಿತ ಸಂಪರ್ಕ ಕೊಂಡಿಯಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.

ದೇಶಾದ್ಯಂತ ನೂರಾರು ಸೇತುವೆಗಳ ನಿರ್ಮಾಣ

ಮೊದಲ ಯಶಸ್ಸಿನ ನಂತರ ಗಿರೀಶ್ ಭಾರದ್ವಾಜ್ ಅವರ ಖ್ಯಾತಿ ದೇಶದಾದ್ಯಂತ ಹರಡಿತು. ನದಿ, ಕೊಳ್ಳ, ಹಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದ ನೂರಾರು ದುರ್ಗಮ ಪ್ರದೇಶಗಳಿಗೆ ಇವರು ಆಶಾಕಿರಣವಾದರು. ಕರ್ನಾಟಕ, ಕೇರಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಭದ್ರ ತೂಗು ಸೇತುವೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರು ದೇಶಾದ್ಯಂತ 160ಕ್ಕೂ ಹೆಚ್ಚು ತೂಗು ಸೇತುವೆಗಳ ನಿರ್ಮಾಣ ಮಾಡಿದ್ದಾರೆ.

ಇವರು ನಿರ್ಮಿಸಿದ ಸೇತುವೆಗಳ ಪೈಕಿ 2 ಒಡಿಶಾದಲ್ಲಿ ಹಾಗೂ 3 ಆಂಧ್ರಪ್ರದೇಶದಲ್ಲಿವೆ. ಆಂಧ್ರದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರು ಗಿರೀಶ್ ಇವರ ತಾಂತ್ರಿಕ ನೈಪುಣ್ಯತೆ ಮತ್ತು ಕಲ್ಪನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.

ಹಣಕ್ಕಿಂತ ಜನಸೇವೆಯೇ ಮುಖ್ಯ ಎಂದ ಸಾತ್ವಿಕ ಯೋಗಿ

ಗಿರೀಶ್ ಭಾರದ್ವಾಜ್ ಅವರ ಸೇವೆ ಕೇವಲ ವೃತ್ತಿಪರವಾಗಿರಲಿಲ್ಲ, ಅದೊಂದು ಸಾಮಾಜಿಕ ಕಳಕಳಿಯಾಗಿತ್ತು. ಸೇತುವೆ ನಿರ್ಮಾಣದ ಜಾಗದ ಸರ್ವೇ ಮಾಡುವುದರಿಂದ ಹಿಡಿದು, ವಿನ್ಯಾಸ (ಡಿಸೈನಿಂಗ್) ಮತ್ತು ತಾಂತ್ರಿಕ ಸಲಹೆಗಳಿಗೂ ಅವರು ಯಾವುದೇ ಸಂಭಾವನೆ ಅಥವಾ ಹಣವನ್ನು ಪಡೆಯುತ್ತಿರಲಿಲ್ಲ. ಅನೇಕ ಹಳ್ಳಿಗಳಲ್ಲಿ ಜನರ ಬಳಿ ಹಣವಿಲ್ಲ ಎಂದು ತಿಳಿದಾಗ, ತಾವೇ ಸ್ವಂತ ಹಣವನ್ನು ಹೂಡಿ ಸೇತುವೆ ನಿರ್ಮಿಸಿಕೊಟ್ಟ ಉದಾಹರಣೆಗಳು ಉಂಟು. ಪ್ರತಿಯೊಂದು ಗ್ರಾಮದ ಪ್ರತಿ ವ್ಯಕ್ತಿಯೂ ತೂಗು ಸೇತುವೆಯ ತಂತ್ರಜ್ಞಾನಿಯಾಗಿ ರೂಪುಗೊಳ್ಳಬೇಕು, ಆ ಮೂಲಕ ಗ್ರಾಮಗಳು ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಗಿರೀಶ್ ಅವರ ಆಶಯವಾಗಿತ್ತು.

ಭಾರತೀಯ ಸೇನೆಗೂ ಮಾರ್ಗದರ್ಶಕರಾಗಿದ್ದ ಪ್ರತಿಭೆ

ಅವರ ನೈಪುಣ್ಯತೆ ಎಷ್ಟು ಜನಪ್ರಿಯವಾಗಿತ್ತೆಂದರೆ, ಸ್ವತಃ ಭಾರತೀಯ ಸೇನೆಯೇ ಅವರಿಗೆ ಬುಲಾವ್ ನೀಡಿತ್ತು. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಪೂಂಛ್ ಎಂಬ ದುರ್ಗಮ ಪ್ರದೇಶದಲ್ಲಿ ತೂಗು ಸೇತುವೆ ನಿರ್ಮಿಸಿಕೊಡುವಂತೆ ಸೇನಾಧಿಕಾರಿಗಳು ಇವರಿಗೆ ಪತ್ರ ಬರೆದು ಗೌರವಪೂರ್ವಕವಾಗಿ ವಿನಂತಿಸಿದ್ದರು.

ಹುಡುಕಿ ಬಂದ ಅತ್ಯುನ್ನತ ಗೌರವಗಳು

ಗ್ರಾಮೀಣ ಭಾರತದ ಅಭಿವೃದ್ಧಿಗೆ ಮತ್ತು ಸಂಪರ್ಕ ಕ್ರಾಂತಿಗೆ ಡಾ. ಗಿರೀಶ್ ಭಾರದ್ವಾಜ್ ಅವರು ನೀಡಿದ ಅದ್ವಿತೀಯ ಕೊಡುಗೆಯನ್ನು ಗುರುತಿಸಿದ ಭಾರತ ಸರ್ಕಾರ, 2017ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ 'ಪದ್ಮಶ್ರೀ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದರ ಜೊತೆಗೆ ಹಲವಾರು ಗೌರವಗಳು ಇವರನ್ನು ಅರಸಿ ಬಂದಿದೆ. ಜೊತೆಗೆ ಸುವರ್ಣ ನ್ಯೂಸ್ -ಕನ್ನಡಪ್ರಭ ದಿಂದ ಅಸಮಾನ್ಯ ಕನ್ನಡಿಗ ಎಂದು ಗುರುತಿಸಿ ಗೌರವಿಸಲಾಗಿದೆ.

ತಮ್ಮ ಸರಳತೆ, ನಿರಂತರ ಪರಿಶ್ರಮ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಸಹಸ್ರಾರು ಹಳ್ಳಿಗಳ ಜನರ ಕಣ್ಣೀರು ಒರೆಸಿದ 'ಸೇತುವೆ ಮನುಷ್ಯ'ನ ನಿಧನವು ಇಡೀ ದೇಶದ ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಾಜಸೇವಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.