ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಅಕ್ರಮ ಆರೋಪದ ಮೇಲೆ ಡಿ.ಎನ್. ಜೀವರಾಜ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ನಡೆದ ಮರು ಎಣಿಕೆಯಲ್ಲಿ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯಗಳಿಸಿದ್ದು, ಶಾಸಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಅಕ್ರಮದ ಆರೋಪ ಗಂಭೀರ ತಿರುವು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಂಚೆ ಮತ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿ, ಮತ ಎಣಿಕೆ ಟೇಬಲ್‌ನ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರುದಲ್ಲಿ ಸ್ಟ್ರಾಂಗ್ ರೂಮ್ ಸರಿಯಾಗಿ ಸೀಲ್ ಮಾಡಲಾಗಿರಲಿಲ್ಲ, ಮತಪತ್ರಗಳನ್ನು ಸಂಗ್ರಹಿಸಿದ್ದ ಟ್ರಂಕ್ ತೆರೆಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತ್ತು ಎಂದು ಆರೋಪಿಸಲಾಗಿತ್ತು. ಅಲ್ಲದೆ, ಟ್ರಂಕ್‌ನ ಸೀಲ್ ತೆರೆದಿದ್ದು, ಲಾಕ್ ಕತ್ತರಿಸಲ್ಪಟ್ಟಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮತಗಳ ತಾಂಪರಿಂಗ್ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿತ್ತು.

ಈ ದೂರಿನ ಆಧಾರದಲ್ಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ (A1), ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ (A2) ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ (A3) ಅವರನ್ನು ಆರೋಪಿಗಳಾಗಿ ಹೆಸರು ಮಾಡಲಾಗಿದೆ. ಇವರ ವಿರುದ್ಧ ವಂಚನೆ, ಕ್ರಿಮಿನಲ್ ಅಪರಾಧ ಮತ್ತು ನಕಲಿ ದಾಖಲೆ (ಫೋರ್ಜರಿ) ಸಂಬಂಧಿತ ಕಲಮಗಳಡಿ ಪ್ರಕರಣ ದಾಖಲಾಗಿದೆ.

ಚುನಾವಣಾಧಿಕಾರಿ ಗೌರವ ಕುಮಾರ್ ಶೆಟ್ಟಿಯಿಂದ ಫಲಿತಾಂಶ ಪ್ರಕಟ

ಇದೀಗ, ಈ ಬೆಳವಣಿಗೆಗಳ ನಡುವೆಯೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯೂ ಮಹತ್ವ ಪಡೆದುಕೊಂಡಿದೆ. ಹೈಕೋರ್ಟ್ ನಿರ್ದೇಶನದಂತೆ ಮರು ಎಣಿಕೆ ನಡೆಸಲಾಗಿದ್ದು, ಅಂತಿಮವಾಗಿ ಚುನಾವಣಾಧಿಕಾರಿ ಗೌರವ ಕುಮಾರ್ ಶೆಟ್ಟಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯಗಳಿಸಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅವರ ಗೆಲುವಿನ ದೃಢೀಕರಣವಾಗಿ ಪ್ರಮಾಣ ಪತ್ರವನ್ನು ಇ-ಮೇಲ್ ಮೂಲಕ ರವಾನೆ ಮಾಡಲಾಗಿದ್ದು, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರು ಅಧಿಕೃತವಾಗಿ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ.

ಡಿ.ಎನ್. ಜೀವರಾಜ್ ಇಂದು ಅಧಿಕಾರ ಸ್ವೀಕಾರ

ಈ ಮೂಲಕ ಡಿ.ಎನ್. ಜೀವರಾಜ್ ಅವರು ಇಂದಿನಿಂದ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಅಧಿಕಾರ ಸ್ವೀಕರಿಸಲಿದ್ದು, ಕಳೆದ ಮೂರು ವರ್ಷಗಳಿಂದ ಶಾಸಕರಾಗಿದ್ದ ಟಿ.ಡಿ. ರಾಜೇಗೌಡ ಅವರು ಇಂದಿನಿಂದ ಮಾಜಿ ಶಾಸಕರಾಗುತ್ತಾರೆ. ಈ ಫಲಿತಾಂಶದಿಂದ ಜಿಲ್ಲೆಯ ರಾಜಕೀಯ ಸಮೀಕರಣದಲ್ಲೂ ಬದಲಾವಣೆ ಕಂಡುಬಂದಿದೆ. “ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರೇ” ಎಂಬ ಹೇಳಿಕೆಗೆ ಇದೀಗ ಧಕ್ಕೆ ಬಿದ್ದಂತಾಗಿದೆ.

ಗಮನಾರ್ಹವಾಗಿ, ಮರು ಎಣಿಕೆ ಸಂದರ್ಭದಲ್ಲಿ ಗೊಂದಲ ಹಾಗೂ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ತಕ್ಷಣ ಫಲಿತಾಂಶ ಪ್ರಕಟಿಸಿರಲಿಲ್ಲ. ಬಳಿಕ ಡಿ.ಎನ್. ಜೀವರಾಜ್ ಪರ ವಕೀಲರು ಫಲಿತಾಂಶ ಪ್ರಕಟಿಸಲು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ, ಚುನಾವಣಾಧಿಕಾರಿಗಳು ಅಂತಿಮವಾಗಿ ಫಲಿತಾಂಶವನ್ನು ಘೋಷಿಸಿದ್ದಾರೆ.

ಒಟ್ಟಿನಲ್ಲಿ, ಅಂಚೆ ಮತಗಳ ಅಕ್ರಮ ಆರೋಪ, ಪ್ರಕರಣ ದಾಖಲು ಹಾಗೂ ಮರು ಎಣಿಕೆ ನಂತರದ ಫಲಿತಾಂಶ – ಈ ಎಲ್ಲಾ ಬೆಳವಣಿಗೆಗಳು ಶೃಂಗೇರಿ ಕ್ಷೇತ್ರದ ಉಪಚುನಾವಣೆಯನ್ನು ಹೆಚ್ಚು ಸಂಚಲನಕಾರಿ ಮಾಡಿವೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.