ಹೈಕೋರ್ಟ್‌ ಆದೇಶದ ಮೇರೆಗೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ, ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡರ 255 ಮತಗಳು ಅಸಿಂಧುಗೊಂಡಿವೆ. ಇದರಿಂದಾಗಿ 2023ರ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯ ಡಿ.ಎನ್. ಜೀವರಾಜ್ ಇದೀಗ 52 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಚಿಕ್ಕಮಗಳೂರು (ಮೇ.4): ತೀವ್ರ ಗೊಂದಲ, ಹೈಡ್ರಾಮಾ ನಡುವೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಶನಿವಾರ ತಡರಾತ್ರಿ ವೇಳೆಗೆ ಮುಕ್ತಾಯಗೊಂಡಿದೆ. 2023ರಲ್ಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡರು ಪಡೆದ ಮತಗಳ ಪೈಕಿ ಬರೋಬ್ಬರಿ 255 ಮತಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ಗೆ 52 ಮತಗಳ ಮುನ್ನಡೆಯ ಜಯ ದೊರೆತಿದೆ.

ಹೈಕೋರ್ಟ್‌ ಆದೇಶದ ಮೇರೆಗೆ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿಲ್ಲ. ಆದರೆ ಜೀವರಾಜ್‌ ಅವರು ಶೃಂಗೇರಿಯ ಶಾಸಕ ಎಂದು ಘೋಷಿಸಿ ಚುನಾವಣಾ ಆಯೋಗ ಅವರಿಗೆ ಇ-ಮೇಲ್‌ ಕಳುಹಿಸಿದೆ. ಇದನ್ನು ಸ್ವತಃ ಜೀವರಾಜ್‌ ಅವರು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ.

ಸಾಮಾನ್ಯವಾಗಿ ಮತದಾನದ ದಿನದಂದು ಅಭ್ಯರ್ಥಿಗಳು ಮರು ಎಣಿಕೆಗೆ ಮನವಿ ಮಾಡುವುದು, ಅದನ್ನು ಮನ್ನಿಸಿ ಮರು ಎಣಿಕೆ ನಡೆಸಿದಾಗ ಫಲಿತಾಂಶವೇ ಅದಲು- ಬದಲಾಗುವ ನಿದರ್ಶನಗಳು ಇವೆ. ಆದರೆ ಫಲಿತಾಂಶ ಪ್ರಕಟವಾದ ಮೂರು ವರ್ಷಗಳ ಬಳಿಕ ಮರು ಎಣಿಕೆ ನಡೆದು ಪರಾಜಿತ ಅಭ್ಯರ್ಥಿಯೊಬ್ಬರು ಶಾಸಕರಾಗಿದ್ದು ಅಪರೂಪ.

ಎಣಿಕೆ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡಿದ ಚುನಾವಣಾಧಿಕಾರಿ ಗೌರವ ಕುಮಾರ್‌ ಶೆಟ್ಟಿ, ‘2023ರ ಮತ ಎಣಿಕೆ ವೇಳೆ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ 692 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರಿಗೆ 569 ಮತಗಳು ಲಭಿಸಿದ್ದವು. ಆದರೆ, ಶನಿವಾರ ನಡೆದ ಪರಿಶೀಲನೆ ಮತ್ತು ಮರು ಎಣಿಕೆ ಬಳಿಕ ಜೀವರಾಜ್ ಅವರ ಮತಗಳು 690 ಆಗಿದ್ದರೆ, ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿವೆ. ಜೀವರಾಜ್‌ ಗೆ 52 ಮತಗಳ ಮುನ್ನಡೆ ಸಿಕ್ಕಿದೆ ಎಂದು ತಿಳಿಸಿದರು.

2023ರಲ್ಲಿ ಅಂಚೆ ಮತಗಳ ಎಣಿಕೆ ವೇಳೆ ರಾಜೇಗೌಡರಿಗಿಂತ ಜೀವರಾಜ್‌ ಅವರು 123 ಮತಗಳಿಂದ ಮುನ್ನಡೆಯಲ್ಲಿದ್ದರು. ಆದರೆ ರಾಜೇಗೌಡರು ಇವಿಎಂನಲ್ಲಿ 324 ಮತಗಳ ಮುನ್ನಡೆ ಗಳಿಸಿದ್ದರು. ಇವಿಎಂ- ಅಂಚೆಮತ ಎರಡನ್ನೂ ಪರಿಗಣಿಸಿದಾಗ 201 ಮತಗಳೊಂದಿಗೆ ಅವರು ಗೆಲುವು ಸಾಧಿಸಿದ್ದರು.

ಆದರೆ, ಶನಿವಾರ ನಡೆದ ಪರಿಶೀಲನೆ ಮತ್ತು ಮರು ಎಣಿಕೆ ಬಳಿಕ ಜೀವರಾಜ್ ಅವರ ಅಂಚೆ ಮತಗಳು 690 (2 ಇಳಿಕೆ) ಆಗಿದ್ದರೆ, ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿವೆ. ಅಂದರೆ, ಇವಿಎಂ- ಅಂಚೆಮತ ಎರಡನ್ನೂ ಗಣನೆಗೆ ತೆಗೆದುಕೊಂಡರೆ ಜೀವರಾಜ್‌ ಅವರಿಗೆ 52 ಮತಗಳ ಮುನ್ನಡೆ ಸಿಕ್ಕಿದೆ.

16 ತಾಸು ಮತ ಎಣಿಕೆ:

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್.ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು.ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಏ.6 ರಂದು ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.

ಹೈಕೋರ್ಟ್‌ ಆದೇಶದಂತೆ ಕ್ಷೇತ್ರದ 1,822 ಅಂಚೆ ಮತ ಪತ್ರಗಳ ಪರಿಶೀಲನೆ ಮತ್ತು ಮರು ಎಣಿಕೆ ನಡೆಸಲಾಯಿತು. ಶನಿವಾರ ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್‌ ರೂಂ ಓಪನ್‌ ಮಾಡಿ, 8.30ರ ಸುಮಾರಿಗೆ ಎಣಿಕಾ ಕೇಂದ್ರಕ್ಕೆ ಮತ ಪತ್ರ ತಂದು, 9 ಗಂಟೆಗೆ ಮತ ಎಣಿಕೆ ಆರಂಭಿಸಲಾಯಿತು. ಎಣಿಕೆ ಕಾರ್ಯ, ಶುರುವಿನಿಂದ ಅಂತ್ಯದವರೆಗೂ ಹಲವು ಗೊಂದಲ, ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಶನಿವಾರ ತಡರಾತ್ರಿ 1.30ರ ಸುಮಾರಿಗೆ ಎಣಿಕಾ ಕಾರ್ಯ ಮುಕ್ತಾಯವಾಗಿ, ರಾತ್ರಿ 2 ಗಂಟೆ ಸುಮಾರಿಗೆ ಅಂಚೆ ಮತಪತ್ರಗಳನ್ನು ಸ್ಟ್ರಾಂಗ್‌ ರೂಂಗೆ ಸೇರಿಸಲಾಯಿತು.

ಫಲಿತಾಂಶ ಕೋರ್ಟಿಗೆ ಸಲ್ಲಿಕೆ

ಹೈಕೋರ್ಟ್ ಸೂಚನೆಯಂತೆ ಅಂಚೆ ಮತ ಪತ್ರ ಮರು ಎಣಿಕೆ ಮಾಡಲಾಗಿದೆ. ಇವಿಎಂ ಮತ್ತು ಅಂಚೆ ಮತ ಎರಡನ್ನೂ ಕೂಡಿಸಿ ಫಲಿತಾಂಶ ಪ್ರಕಟಿಸಬೇಕಿದೆ. ಆದರೆ, ಈಗ ಅಂಚೆ‌ ಮತ ಮಾತ್ರ ಮರು ಎಣಿಕೆ ಮಾಡಲಾಗಿದೆ. ಹೀಗಾಗಿ, ಫಲಿತಾಂಶ ಪ್ರಕಟಿಸಲು ಅವಕಾಶವಿಲ್ಲ. ಎಲ್ಲವನ್ನೂ ಚುನಾವಣಾ ಆಯೋಗಕ್ಕೆ, ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತೇನೆ.

- ಗೌರವ್ ಕುಮಾರ್ ಶೆಟ್ಟಿ, ಚುನಾವಣಾಧಿಕಾರಿ.

ಸ್ಟ್ರಾಂಗ್‌ ರೂಂ ವ್ಯವಸ್ಥೆ ನೋಡಿದ ತಕ್ಷಣ ಮತ ಟ್ಯಾಂಪರಿಂಗ್‌ ಆಗಿದೆ ಎಂದು ಮತ ಎಣಿಕೆ ಆರಂಭಕ್ಕೂ ಮುನ್ನವೇ ಹೇಳಿದ್ದೇವು. ಜೀವರಾಜ್‌ ಹಾಗೂ ಅವರಿಗೆ ಬೆಂಬಲ ನೀಡಿದವರ ವಿರುದ್ಧ ಮತಗಳ ಟ್ಯಾಂಪರಿಂಗ್‌ ದೂರು ದಾಖಲಿಸುತ್ತೇನೆ. 2023ರ ಮತ ಎಣಿಕೆ ವೇಳೆ ಎಲ್ಲ ಪಕ್ಷಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಈ ಮತಪತ್ರಗಳನ್ನು ಸಿಂಧು ಎಂದು ಪರಿಗಣಿಸಲಾಗಿತ್ತು. ಈಗ ಅದೇ ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ.

- ಟಿ.ಡಿ.ರಾಜೇಗೌಡ, ಹಾಲಿ ಕಾಂಗ್ರೆಸ್‌ ಶಾಸಕ.

279 ತಿರಸ್ಕೃತ ಅಂಚೆ ಮತ ಪೈಕಿ 12 ನಾಪತ್ತೆ:

ತಿರಸ್ಕೃತ ಮತಗಳ ಪುನರ್‌ ಪರಿಶೀಲನೆ ಮಾಡಿ, ಮಾನ್ಯಗೊಂಡ ಮತಗಳ ಮರು ಎಣಿಕೆ ಮಾಡಿ ಎಂದು ಕೋರ್ಟ್‌ ಸೂಚಿಸಿತ್ತು. ಆದರೆ, ತಿರಸ್ಕೃತಗೊಂಡ 279 ಮತಗಳಲ್ಲಿ 12 ಮತಗಳು ಲಭ್ಯವಾಗಿಲ್ಲ. ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಆ 12 ಮತಪತ್ರಗಳು ಎಲ್ಲಿ ಹೋಗಿವೆ ಎಂಬುದು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಕೇವಲ 267 ತಿರಸ್ಕೃತ ಮತಪತ್ರಗಳು ಸಿಕ್ಕಿವೆ. ಉಳಿದಂತೆ 1,543 ಮತ ಪತ್ರಗಳ ಮರು ಎಣಿಕೆ ಮಾಡಲಾಗಿದೆ ಎಂದು ಗೌರವ್‌ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇ-ಮೇಲ್‌ ಬಂತು, ನಾನೀಗ ಶಾಸಕ!

ನಾನು ಶೃಂಗೇರಿ ಕ್ಷೇತ್ರದ ಶಾಸಕನಾಗಿರುವ ಬಗ್ಗೆ ಚುನಾವಣಾಧಿಕಾರಿಗಳಿಂದ ಇ-ಮೇಲ್‌ ಮೂಲಕ ಪ್ರಮಾಣಪತ್ರ ಬಂದಿದೆ. ಮುದ್ರಿತ ಪತ್ರವನ್ನು ಸೋಮವಾರ ನೀಡುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದಾರೆ.

- ಡಿ.ಎನ್‌. ಜೀವರಾಜ್‌

ಬಿಜೆಪಿ ಗೆದ್ದಿದ್ದು ಹೇಗೆ?

- 2023ರ ಚುನಾವಣೆಯಲ್ಲಿ ಬಿಜೆಪಿಯ ಜೀವರಾಜ್‌ ಅವರು ಕಾಂಗ್ರೆಸ್‌ನ ರಾಜೇಗೌಡಗಿಂತ 123 ಅಧಿಕ ‘ಅಂಚೆ ಮತ’ ಗಳಿಸಿದ್ದರು

- ಇವಿಎಂಗಳ ಎಣಿಕೆಯಲ್ಲಿ ರಾಜೇಗೌಡ 324 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಹೀಗಾಗಿ 201 ಮತಗಳಿಂದ ಅವರು ಗೆದ್ದಿದ್ದರು

- ಅಂಚೆ ಮತಗಳ ಮರು ಎಣಿಕೆ ಕೋರಿ ಜೀವರಾಜ್‌ ಹೈಕೋರ್ಟ್‌ಗೆ ಹೋಗಿದ್ದರು. ಅದರಂತೆ ಶನಿವಾರ ರಾತ್ರಿವರೆಗೆ ಎಣಿಕೆ ನಡೆಯಿತು

- ರಾಜೇಗೌಡ ಅವರಿಗೆ ಲಭಿಸಿದ್ದ 255 ಮತಗಳು, ಜೀವರಾಜ್‌ ಅವರು ಪಡೆದಿದ್ದ 2 ಮತಗಳು ಅಸಿಂಧು ಎಂದು ಆಯೋಗ ನಿರ್ಧಾರ

- 201 ಮತಗಳಿಂದ ಗೆದ್ದಿದ್ದ ರಾಜೇಗೌಡರಿಗೆ 255 ಮತ ನಷ್ಟ. ಜೀವರಾಜ್‌ ಅವರ 2 ಮತಗಳ ನಷ್ಟ ಸೇರಿ 52 ಮತಗಳಿಂದ ಸೋಲು