ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಕೋಲ್ಕತಾದಲ್ಲಿ ಸ್ಥಾಪಿಸಲಾಗಿದ್ದ ವಿಶಿಷ್ಟ ಫುಟ್ಬಾಲ್‌ ಶಿಲ್ಪವನ್ನು ಬಿಜೆಪಿ ಸರ್ಕಾರ ಧ್ವಂಸಗೊಳಿಸಿದೆ. ವಿಚಿತ್ರ ವಿನ್ಯಾಸದ ಕಾರಣಕ್ಕೆ ಟೀಕೆಗೊಳಗಾಗಿದ್ದ ಈ ಶಿಲ್ಪದ ತೆರವು, ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ ಕೋಲ್ಕತಾ ನಗರದ ಸಾಲ್ಟ್‌ ಲೇಕ್‌ ಫುಟ್ಬಾಲ್‌ ಕ್ರೀಡಾಂಗಣದ ಬಳಿ ಸ್ಥಾಪಿಸಲಾಗಿದ್ದ ವಿಶಿಷ್ಟ ಫುಟ್ಬಾಲ್‌ ಶಿಲ್ಪವನ್ನು ಅಧಿಕಾರಕ್ಕೆ ಬಿಜೆಪಿ ಸರ್ಕಾರ ಧ್ವಂಸ ಮಾಡಿಸಿದೆ. ಪಶ್ಚಿಮ ಬಂಗಾಳ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆದೇಶದ ಮೇರೆಗೆ ಅದನ್ನು ತೆರವುಗೊಳಿಸಿರುವ ಘಟನೆ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಚಿತ್ರ ವಿನ್ಯಾಸಕ್ಕೆ ಟೀಕೆ

ಈ ಶಿಲ್ಪ ಸಾಮಾನ್ಯ ಪ್ರತಿಮೆಯಂತಿರಲಿಲ್ಲ. ಇದರಲ್ಲಿ ಮಾನವನ ಕಾಲುಗಳು ಮಾತ್ರ ಇದ್ದು, ಹೊಟ್ಟೆಯ ಭಾಗದಲ್ಲಿ ದೊಡ್ಡ ಫುಟ್ಬಾಲ್‌ ಅಳವಡಿಸಲಾಗಿತ್ತು. ಆದರೆ ತಲೆ ಹಾಗೂ ದೇಹದ ಭಾಗ ಇರಲಿಲ್ಲ. ಇದೇ ಕಾರಣಕ್ಕೆ ಆರಂಭದಿಂದಲೇ ಇದರ ವಿನ್ಯಾಸದ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದರು. ಕೆಲವರು ಇದನ್ನು 'ಆಧುನಿಕ ಕಲೆಯ ಹೆಸರು ಹೇಳಿ ಮಾಡಿರುವ ವಿಚಿತ್ರ ರಚನೆ' ಎಂದು ಟೀಕಿಸಿದ್ದರು.

ಸಚಿವರ ಹೇಳಿಕೆಯ ಬಳಿಕ ಕ್ರಮ

ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳ ಕ್ರೀಡಾ ಸಚಿವ ನಿಶಿತ್ ಪ್ರಮಾಣಿಕ್‌ ಈ ಶಿಲ್ಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. 'ಇದು ವಿಕೃತ ರಚನೆ. ಸರ್ಕಾರ ಇದನ್ನು ಉಳಿಸಿಕೊಳ್ಳುವುದಿಲ್ಲ. ಶೀಘ್ರದಲ್ಲೇ ತೆರವುಗೊಳಿಸಿ ಹೊಸ ಶಿಲ್ಪ ತರಲಾಗುವುದು' ಎಂದು ಅವರು ಹೇಳಿದ್ದರು. ಸಚಿವರ ಈ ಹೇಳಿಕೆಯ ಬೆನ್ನಲ್ಲೇ ಇದೀಗ ಶಿಲ್ಪ ನೆಲಸಮವಾಗಿದೆ.

ಪ್ರತಿಮೆ ಧ್ವಂಸ ಬಳಿಕ ರಾಜಕೀಯ ವಾಕ್ಸಮರ

ಈ ಬೆಳವಣಿಗೆ ತೃಣಮೂಲ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಮಮತಾ ಆಡಳಿತದ ಕಾಲದಲ್ಲಿ ನಿರ್ಮಿಸಲಾದ ರಚನೆಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಸರ್ಕಾರ ಮಾತ್ರ 'ಹೊಸ ಮತ್ತು ಉತ್ತಮ ವಿನ್ಯಾಸದ ಶಿಲ್ಪ ನಿರ್ಮಿಸಲಾಗುವುದು' ಎಂದು ಸ್ಪಷ್ಟಪಡಿಸಿದೆ.

Scroll to load tweet…