‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು’ ಎಂಬಂತೆ ಅಧಿಕೃತವಾಗಿ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಿಸುವ ಮುನ್ನವೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ಸಂಭ್ರಮಾಚರಣೆ ನಡೆಸಿದರು.

ಬೆಂಗಳೂರು (ಮೇ.18): ‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು’ ಎಂಬಂತೆ ಅಧಿಕೃತವಾಗಿ ಮುಖ್ಯಮಂತ್ರಿ ಯಾರು ಎಂಬುದನ್ನು ಘೋಷಿಸುವ ಮುನ್ನವೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ಸಂಭ್ರಮಾಚರಣೆ ನಡೆಸಿದರು. ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಯ ನಂತರ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್‌ ಒಪ್ಪಿಗೆ ನೀಡಿದೆ, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ, ಸಿದ್ದರಾಮಯ್ಯ ಅವರ ಅಭಿಮಾನಿಗಳು ವಿವಿಧ ಕಡೆ ಸಿಹಿ ವಿತರಿಸಿ, ಸಂಭ್ರಮಿಸಿದರು.

ಬೆಂಗಳೂರಿನ ಕುಮಾರಕೃಪದಲ್ಲಿನ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವರು ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಅಲ್ಲದೆ, ಮುಖ್ಯಮಂತ್ರಿಯಾಗಿ ನೇಮಕವಾಗಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂಬ ಫ್ಲೆಕ್ಸ್‌ಗಳನ್ನು ಎಲ್ಲೆಡೆ ಅಳವಡಿಸುತ್ತಿರುವುದು ಕಂಡು ಬಂದಿತು. ಆದರೆ ‘ಮಾಧ್ಯಮಗಳಲ್ಲಿ ಬಿತ್ತರಗೊಂಡ ಮಾಹಿತಿ ತಪ್ಪಾಗಿದೆ. ಆ ರೀತಿ ಯಾವುದೇ ತೀರ್ಮಾನವಾಗಿಲ್ಲ, ಇನ್ನೂ ಚರ್ಚೆ ನಡೆಯುತ್ತಿದೆ. 

ಎಂಟಿಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಶಾಸಕ ಶರತ್‌ ಬಚ್ಚೇಗೌಡ

ಒಂದೆರಡು ದಿನಗಳಲ್ಲಿ ಹೈಕಮಾಂಡ್‌ ತೀರ್ಮಾನಿಸಲಿದೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲ ಅವರು ದೆಹಲಿಯಲ್ಲಿ ಹೇಳಿಕೆ ನೀಡುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಸ್ಥಗಿತಗೊಳಿಸಿದರು. ಅಲ್ಲದೇ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಇಂದೇ ವಾಪಸ್‌ ಆಗಲಿದ್ದಾರೆಂಬ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಅನೇಕರು ಹೂಗುಚ್ಛಗಳನ್ನು ಹಿಡಿದುಕೊಂಡು ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ್ದರು. ಕೊನೆಗೆ ಅಧಿಕೃತವಾಗಿ ಮುಖ್ಯಮಂತ್ರಿ ಘೋಷಣೆಯಾಗಿಲ್ಲ ಎಂಬ ಮಾಹಿತಿ ಖಚಿತವಾಗುತ್ತಿದ್ದಂತೆ ಮುಖಂಡರು ಹೂಗುಚ್ಛದೊಂದಿಗೆ ವಾಪಸು ತೆರಳಿದರು.

ಶಾಸಕರಿಗೆ ಡಿಕೆಶಿ, ಸಿದ್ದು ಬಣದಿಂದ ಫೋನ್‌: ಕುತೂಹಲಕರ ಬೆಳವಣಿಗೆಯಲ್ಲಿ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಬಣದ ನಾಯಕರು ಬುಧವಾರ ಸಂಜೆಯ ವೇಳೆಗೆ ಹಠಾತ್ತನೇ ಶಾಸಕರ ಸಂಪರ್ಕ ಆರಂಭಿಸಿ, ತಮ್ಮೊಂದಿಗೆ ಇರುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ. ವಾಸ್ತವವಾಗಿ ಶಾಸಕರ ಅಭಿಪ್ರಾಯವನ್ನು ಶಾಸಕಾಂಗ ಪಕ್ಷದ ಸಭೆಯಲ್ಲೇ ಪಡೆಯಲಾಗಿದೆ. ಇದಕ್ಕಾಗಿ ರಹಸ್ಯ ಮತದಾನ ಕೂಡ ನಡೆದಿದ್ದು, ಮತದಾನದ ಬಾಕ್ಸ್‌ ದೆಹಲಿ ಕೂಡ ತಲುಪಿದೆ. 

ಅರುಣ್‌ ಕುಮಾರ್‌ ಪುತ್ತಿಲ ಎಫೆಕ್ಟ್: ಬಿಜೆಪಿ ವೋಟು ಶೇ.4.90 ಕುಸಿತ!

ಆದರೆ, ಈ ಬಾಕ್ಸ್‌ ಅನ್ನು ತೆಗೆದು ಶಾಸಕರ ಅಭಿಪ್ರಾಯವೇನು ಎಂಬುದನ್ನು ಇದುವರೆಗೂ ಹೈಕಮಾಂಡ್‌ ನೋಡಿಲ್ಲ. ಸಿದ್ದರಾಮಯ್ಯ ಅವರು ಹೈಕಮಾಂಡ್‌ ಮುಂದೆ ಶಾಸಕರ ಬೆಂಬಲ ತಮಗೆ ಹೆಚ್ಚು ಇದೆ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್‌ ಬಣದ ಕೆಲ ನಾಯಕರು ಬುಧವಾರ ಸಂಜೆಯ ವೇಳೆಗೆ ಕೆಲ ಶಾಸಕರನ್ನು ಸಂಪರ್ಕಿಸಿದರು ಎಂಬ ವದಂತಿ ಹಬ್ಬುತ್ತಿದ್ದಂತೆಯೇ ಸಿದ್ದರಾಮಯ್ಯ ಬಣದ ನಾಯಕರು ಸಹ ಶಾಸಕರನ್ನು ಸಂಪರ್ಕಿಸತೊಡಗಿದರು ಎಂದು ಮೂಲಗಳು ತಿಳಿಸಿವೆ.