Asianet Suvarna News Asianet Suvarna News

ಅರುಣ್‌ ಕುಮಾರ್‌ ಪುತ್ತಿಲ ಎಫೆಕ್ಟ್: ಬಿಜೆಪಿ ವೋಟು ಶೇ.4.90 ಕುಸಿತ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್‌ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಜಿಲ್ಲೆಯಲ್ಲಿ ಒಟ್ಟಾರೆ ವೋಟು ಹಂಚಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ. 

Arun Kumar Puthila Effect  BJP vote down by 4 90 percent at Mangaluru gvd
Author
First Published May 17, 2023, 11:31 PM IST

ಸಂದೀಪ್‌ ವಾಗ್ಲೆ

ಮಂಗಳೂರು (ಮೇ.17): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್‌ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ ಜಿಲ್ಲೆಯಲ್ಲಿ ಒಟ್ಟಾರೆ ವೋಟು ಹಂಚಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ. ಒಟ್ಟು ಮತಗಳ (13,75,099) ಪೈಕಿ ಬಿಜೆಪಿ ಜಿಲ್ಲೆಯಲ್ಲಿ ಶೇ.48.58 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್‌ ಒಟ್ಟು ಶೇ.42.41 ಓಟು ಬಾಚಿಕೊಂಡಿದೆ. ಆದರೆ 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ವೋಟ್‌ ಶೇರ್‌ನಲ್ಲಿ ಶೇ.4.90ಯಷ್ಟುಕುಸಿತವಾಗಿದ್ದರೆ, ಕಾಂಗ್ರೆಸ್‌ನ ಮತಗಳು ಶೇ.0.8ರಷ್ಟುಮಾತ್ರ ಇಳಿಕೆಯಾಗಿವೆ.

2018ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 13,37,459 ಮಂದಿ ಮತದಾನ ಮಾಡಿದ್ದು, ಇದರಲ್ಲಿ 7,15,208 (ಶೇ.53.48) ಮತಗಳು ಬಿಜೆಪಿಗೂ, 5,77,935 (ಶೇ.43.21) ಮತಗಳು ಕಾಂಗ್ರೆಸ್‌ಗೆ ದೊರೆತಿತ್ತು. ಅಂದರೆ ಬಿಜೆಪಿಗಿಂತ ಕಾಂಗ್ರೆಸ್‌ಗೆ ಬರೋಬ್ಬರಿ ಶೇ.10.27ರಷ್ಟುಮತಗಳ ಅಂತರವಿತ್ತು. ಈ ಬಾರಿ ಅಂತರ ಶೇ.6.17ಗೆ ಇಳಿದಿದೆ. ಈ ಬಾರಿಯ ಚುನಾವಣೆಯಲ್ಲಿ 13,75,099 ಮತದಾರರ ಪೈಕಿ 6,68,119 ಬಿಜೆಪಿಗೆ (ಶೇ.48.58), ಉಳಿದ 5,83,234 ಮತದಾರರು ಕಾಂಗ್ರೆಸ್‌ಗೆ (ಶೇ.42.41) ಓಟು ಹಾಕಿದ್ದಾರೆ.

ಹುಲಿಗೆಮ್ಮ ಜಾತ್ರೆಗೆ ಬರುತ್ತಿದೆ ಭಕ್ತಸಾಗರ: ಸಹಸ್ರಾರು ಪ್ರಾಣಿಬಲಿ ಅವ್ಯಾಹತ

ಬೆಳ್ತಂಗಡಿ ಮತಗಳಿಕೆ: 2018ರ ಚುನಾವಣೆಯಲ್ಲಿ ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್‌ ಪೂಂಜಾ ಶೇ.54.81 ಮತ ಗಳಿಸಿದ್ದರೆ, ಈ ಬಾರಿ ಶೇ.53.44 ಮತ ಪಡೆದಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ವಸಂತ ಬಂಗೇರ ಮತಗಳಿಕೆ ಶೇ.42.02 ಆಗಿದ್ದರೆ, ಈ ಬಾರಿ ರಕ್ಷಿತ್‌ ಶಿವರಾಮ್‌ ಶೇ.43.80 ಮತ ಗಳಿಸಿ ಓಟ್‌ ಬ್ಯಾಂಕ್‌ ಹೆಚ್ಚಿಸಿಕೊಂಡಿದ್ದಾರೆ.

ಮಂಗಳೂರು ಉತ್ತರ: ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿಯ ಡಾ.ಭರತ್‌ ಶೆಟ್ಟಿಶೇ.56.02 ಓಟು ಗಳಿಸಿದ್ದರೆ, ಈ ಬಾರಿ ಶೇ.56.77 ಮತ ಗಳಿಕೆ ಮಾಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನ ಮೊಹಿಯುದ್ದೀನ್‌ ಬಾವ ಶೇ.40.88 ಓಟು ಗಳಿಸಿದ್ದರೆ, ಈ ಬಾರಿ ಇನಾಯತ್‌ ಅಲಿ ಶೇ.38.72 ಓಟು ಪಡೆದಿದ್ದಾರೆ. ಕಾಂಗ್ರೆಸ್‌ನ ಶೇ.2.88ರಷ್ಟುಮತಗಳನ್ನು ಈ ಬಾರಿ ಜೆಡಿಎಸ್‌ನ ಬಾವ ಕಸಿದಿದ್ದಾರೆ.

ಮಂಗಳೂರು: ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳು ಸ್ವಲ್ಪ ಮಟ್ಟಿಗೆ ಓಟು ಗಳಿಕೆಯಲ್ಲಿ ಹಿಂದುಳಿದಿವೆ. ಕಾಂಗ್ರೆಸ್‌ನ ಯು.ಟಿ. ಖಾದರ್‌ 2018ರಲ್ಲಿ ಶೇ.54.11 ಮತ ಗಳಿಕೆ ಮಾಡಿದ್ದರೆ, ಈ ಬಾರಿ ಶೇ.52.01 ಓಟು ಗಳಿಸಿದ್ದಾರೆ. ಕಳೆದ ಬಾರಿ ಬಿಜೆಪಿಯ ಸಂತೋಷ್‌ ಬೊಳಿಯಾರು ಶೇ.40.89 ಮತ ಗಳಿಸಿದ್ದರೆ, ಈ ಬಾರಿ ಸತೀಶ್‌ ಕುಂಪಲ ಶೇ. 37.77 ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುತ್ತೂರು ಕ್ಷೇತ್ರ: ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿಕಳೆದ ಚುನಾವಣೆಯಲ್ಲಿ ಶೇ.42.57 ಓಟು ಗಳಿಸಿಯೂ ಸೋತಿದ್ದರು. ಈ ಬಾರಿ ಅಶೋಕ್‌ ರೈ ಶೇ.38.55 ಓಟು ಗಳಿಸಿ ಗೆದ್ದಿದ್ದಾರೆ. 2018ರಲ್ಲಿ ಬಿಜೆಪಿಯ ಸಂಜೀವ ಮಠಂದೂರು ಶೇ. 54.31 ಮತ ಗಳಿಕೆ ಮಾಡಿದ್ದರೆ, ಈ ಬಾರಿ ಆಶಾ ತಿಮ್ಮಪ್ಪ ಶೇ. 21.74 ಮತ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ಶೇ.36.15 ಓಟು ಪಡೆದಿದ್ದಾರೆ.

ಮೂಡುಬಿದಿರೆ: 2018ರಲ್ಲಿ ಮೂಡುಬಿದಿರೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಶೇ.57.44 ಮತ ಗಳಿಸಿದ್ದರೆ, ಈ ಬಾರಿ ಶೇ.54.77 ಓಟು ಗಳಿಸಿದ್ದಾರೆ. ಕಾಂಗ್ರೆಸ್‌ನ ಅಭಯಚಂದ್ರ ಜೈನ್‌ ಕಳೆದ ಬಾರಿ ಶೇ.37.86 ಮತ ಗಳಿಸಿದ್ದರು. ಈ ಬಾರಿ ಮಿಥುನ್‌ ರೈ ಶೇ.40.61ರಷ್ಟುಮತ ಗಳಿಕೆ ಹೆಚ್ಚಿಸಿಕೊಂಡಿದ್ದಾರೆ.

ಮಂಗಳೂರು ದಕ್ಷಿಣ: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್‌ ಶೇ.52.97 ಓಟು ಗಳಿಸಿದ್ದರೆ, ಈ ಬಾರಿ ಶೇ.56.46ರಷ್ಟುಮತ ಗಳಿಸಿ ಓಟ್‌ಬ್ಯಾಂಕ್‌ ಹೆಚ್ಚಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಜೆ.ಆರ್‌. ಲೋಬೊ ಕಳೆದ ಚುನಾವಣೆಯಲ್ಲಿ ಶೇ.43.13 ಮತ ಗಳಿಸಿದ್ದರೆ ಈ ಬಾರಿ ಶೇ.41.67ಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಬಂಟ್ವಾಳ ಕ್ಷೇತ್ರ: ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್‌ ನಾೖಕ್‌ ಕಳೆದ ಚುನಾವಣೆಯಲ್ಲಿ ಶೇ.53.57 ಮತ ಗಳಿಕೆ ಮಾಡಿದ್ದರೆ, ಈ ಬಾರಿ ಶೇ.50.29ಕ್ಕೆ ಕುಸಿದಿದ್ದರೆ, ಕಾಂಗ್ರೆಸ್‌ನ ರಮಾನಾಥ ರೈ 2018ರಲ್ಲಿ ಶೇ.44.83ರಷ್ಟುಓಟು ಪಡೆದಿದ್ದರು, ಈ ಬಾರಿ ಶೇ.45.83ಕ್ಕೆ ಹೆಚ್ಚಿಸಿಕೊಂಡರೂ ಸೋಲನುಭವಿಸಿದ್ದಾರೆ.

ನನ್ನ ಗೆಲುವಿನಲ್ಲಿ ಹೊನ್ನಾವರದ ಮತದಾರರ ಪಾತ್ರ ದೊಡ್ಡದು: ಶಾಸಕ ದಿನಕರ ಶೆಟ್ಟಿ

ಸುಳ್ಯ ಕ್ಷೇತ್ರ: ಸುಳ್ಯ ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿಯ ಅಂಗಾರ ಶೇ.56.53 ಓಟು ಗಳಿಸಿದ್ದರು. ಈ ಬಾರಿ ಭಾಗೀರಥಿ ಮುರುಳ್ಯ ಅದಕ್ಕಿಂತಲೂ ಹೆಚ್ಚು ಶೇ.57.01 ಮತ ಪಡೆದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನ ಡಾ.ರಘು ಶೇ.41.05 ಓಟು ಪಡೆದಿದ್ದರೆ, ಈ ಬಾರಿ ಕೃಷ್ಣಪ್ಪ ಅವರ ವೋಟ್‌ ಶೇರ್‌ ಶೇ.38.27ಕ್ಕೆ ಕುಸಿದಿದೆ.

ಬಿಜೆಪಿಗೆ ಪುತ್ತಿಲ ಎಫೆಕ್ಟ್: ಈ ಚುನಾವಣೆಯಲ್ಲಿ ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ದೊಡ್ಡ ಮಟ್ಟದಲ್ಲಿ ಬಿಜೆಪಿ ಮತಗಳನ್ನು ಕಸಿದದ್ದೇ ಬಿಜೆಪಿಯ ಶೇಕಡಾವಾರು ಮತ ಇಳಿಕೆಯಾಗಲು ಮುಖ್ಯ ಕಾರಣ. ಪುತ್ತೂರಿನಲ್ಲಿ ಚಲಾವಣೆಯಾದ ಒಟ್ಟು 1,72,762 ಮತಗಳ ಪೈಕಿ ಪುತ್ತಿಲ ಶೇ.36.15ರಷ್ಟುಮತಗಳನ್ನು ಪಡೆದುಕೊಂಡಿದ್ದಾರೆ. ಅಂದರೆ ಜಿಲ್ಲೆಯ ಒಟ್ಟು ಮತಗಳ ಪೈಕಿ ಶೇ.4.54ರಷ್ಟುಓಟನ್ನು ಪುತ್ತಿಲ ಒಬ್ಬರೇ ಬಾಚಿಕೊಂಡಿದ್ದಾರೆ. ಬಿಜೆಪಿಯೊಳಗಿನ ಭಿನ್ನಮತದ ಕಾರಣದಿಂದಾಗಿಯೇ ಪಕ್ಷ ಓಟು ಕಳೆದುಕೊಳ್ಳುವಂತಾಗಿದೆ.

Follow Us:
Download App:
  • android
  • ios