Asianet Suvarna News Asianet Suvarna News

25 ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ವಿಧಾನಸಭೆಗೆ ಆಯ್ಕೆ, ಸಿಎಂ ರೇಸ್‌ನಲ್ಲೂ ಮಹಿಳಾ ಕ್ಯಾಂಡಿಡೇಟ್!

ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಕೆಳಗಿಳಿಸಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದು, 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿರುವುದು ಒಬ್ಬರೇ ಒಬ್ಬರು ಮಹಿಳೆ.  

Reena Kashyap from Pachhad constituency one and only Female MLA in Himachal Pradesh Assembly election akb
Author
First Published Dec 9, 2022, 1:33 PM IST

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಕೆಳಗಿಳಿಸಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದು, 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿರುವುದು ಒಬ್ಬರೇ ಒಬ್ಬರು ಮಹಿಳೆ.  ನವೆಂಬರ್ 12 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಣದಲ್ಲಿದ್ದ 24 ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಈ ವರ್ಷ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಆಯ್ಕೆಯಾಗಿರುವುದು ಒಬ್ಬರೇ ಮಹಿಳೆ. 

ಬಿಜೆಪಿಯ ರೀನಾ ಕಶ್ಯಪ್ (Reena Kashyap) ಎಂಬುವವರೇ ಹಿಮಾಚಲ ವಿಧಾನಸಭೆಗೆ ಆಯ್ಕೆಯಾದ ಏಕೈಕ ಮಹಿಳೆ ಇವರು 3,857 ಮತಗಳ ಅಂತರದಿಂದ ಕಾಂಗ್ರೆಸ್‌ನ ದಯಾಳ್ ಪ್ಯಾರಿ (Dayal Pyari) ಅವರನ್ನು ಸೋಲಿಸುವ ಮೂಲಕ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇವರು ಸಿರ್ಮೌರ್ ಜಿಲ್ಲೆಯ ಪಚ್ಚಡ್ (Pachhad) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

 ಹಿಮಾಚಲದಲ್ಲಿ ಬಿಜೆಪಿ ಸೋಲು: ಕಾರ್ಯಕರ್ತರಿಂದ ಕೇಂದ್ರ ಸಚಿವರ ಟ್ರೋಲ್

ಹಿಮಾಚಲ ವಿಧಾನಸಭೆಗೆ ಸಲ್ಲಿಕೆಯಾದ ಒಟ್ಟು 412 ನಾಮಪತ್ರಗಳ ಪೈಕಿ 24 ಮಹಿಳಾ ಅಭ್ಯರ್ಥಿಗಳು ಇದ್ದರು, ಈ ಪೈಕಿ ಬಿಜೆಪಿ 6, ಆಮ್ ಆದ್ಮಿ ಪಕ್ಷ (AAP) 5 ಮತ್ತು ಕಾಂಗ್ರೆಸ್  ಮೂವರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆದರೆ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿದ್ದು ಮಾತ್ರ ರೀನಾ ಕಶ್ಯಪ್ ಒಬ್ಬರೇ. ಕಳೆದ ಬಾರಿಯೂ ಗೆದ್ದಿದ್ದ ರೀನಾ ಈ ಬಾರಿ  ಪಕ್ಷ ಸೋತರೂ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಗುಜರಾತ್‌ನಲ್ಲಿ ಆಪ್ ಸರ್ಕಾರ ರಚನೆ, ಫುಲ್ ಟ್ರೋಲ್ ಆಯ್ತು ಕೇಜ್ರಿವಾಲ್ ಐಬಿ ರಿಪೋರ್ಟ್!

ಇದಕ್ಕೂ ಮೊದಲು 2017ರಲ್ಲಿ ಹಿಮಾಚಲ ವಿಧಾನಸಭಾ ಚುನಾವಣೆಯಲ್ಲಿ (Vidhan Sabha elections) ಒಟ್ಟು ನಾಲ್ವರು ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಕೊನೆಯದಾಗಿ 1977ರಲ್ಲಿ ರಾಜ್ಯದಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕರಾಗಿದ್ದರು. ಅದಕ್ಕೂ ಮೊದಲು 1998 ರ ವಿಧಾನಸಭಾ ಚುನಾವಣೆಯಲ್ಲಿ ಎಂಟು ಮಹಿಳೆಯರು ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ನವೆಂಬರ್ 12 ರಂದು ನಡೆದ ಚುನಾವಣೆಯಲ್ಲಿ ಸೋತ ಪ್ರಮುಖ ಮಹಿಳಾ ಅಭ್ಯರ್ಥಿಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಡಾಲ್‌ಹೌಸಿ (Dalhousie) ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆಶಾ ಕುಮಾರಿ ( Asha Kumari) ಕೂಡ ಸೇರಿದ್ದಾರೆ. ಇವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಆಗಿದ್ದರು. ಪ್ರಸ್ತುತ ಅವರು ಸೋತಿದ್ದರೂ ಸಹ ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ . ಅವರ  ಪಕ್ಷ  ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದಿದ್ದರೂ ಅವರು ಬಿಜೆಪಿ ಅಭ್ಯರ್ಥಿ ಡಿ.ಕೆ ಠಾಕೂರ ವಿರುದ್ಧ ಸೋಲು ಕಂಡರು.

ಇನ್ನು ಕರ್ನಾಟಕದತ್ತ ಎಲ್ಲರ ಚಿತ್ತ: ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ ಫೈಟ್‌

ಇವರ ಜೊತೆ ಈ ಹಿಂದೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಮತ್ತು ಕಂಗ್ರಾದ (Kangra) ಶಾಹಪುರ್‌ನಿಂದ ನಾಲ್ಕು ಬಾರಿ ಶಾಸಕರಾಗಿದ್ದ ಸರ್ವೀನ್ ಚೌಧರಿ (Sarveen Chaudhary) ಅವರು ಕೂಡ ಸೋಲು ಕಂಡಿದ್ದಾರೆ. ಅಲ್ಲದೇ ಇಂದೋರಾದಲ್ಲಿ ಬಿಜೆಪಿ ಶಾಸಕರಾಗಿದ್ದ ರೀಟಾ ಧಿಮಾನ್ (Rita Dhiman), ಮಂಡಿ ಕ್ಷೇತ್ರದ ಶಾಸಕರಾದ ಕಾಂಗ್ರೆಸ್ ನ ಹಿರಿಯ ಸಚಿವ ಕೌಲ್ ಸಿಂಗ್ ಅವರ ಪುತ್ರಿ ಚಂಪಾ ಠಾಕೂರ್ (Champa Thakur)  ಕೂಡ ಸೋಲು ಕಂಡಿದ್ದಾರೆ.

ಹಿಮಾಚಲ ವಿಧಾನಸಭೆಗೆ ಒಬ್ಬರೇ ಮಹಿಳಾ ಅಭ್ಯರ್ಥಿ ಆಯ್ಕೆಯಾಗಿದ್ದರೆ, ಇತ್ತ ಸರ್ಕಾರ ರಚನೆ ಸಜ್ಜಾಗಿರುವ ಕಾಂಗ್ರೆಸ್ ಇದೀಗ ಮಹಿಳಾ ನಾಯಕಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ತಯಾರಿಮಾಡಿಕೊಂಡಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್‌ಗೆ ಸಿಎಂ ಪಟ್ಟ ನೀಡಲು ಹಲವರು ಒಲವು ತೋರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ವೀರಭದ್ರ ಸಿಂಗ್ ಅಗಲಿಕೆಯಿಂದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಜವಾಬ್ದಾರಿ ಹೊತ್ತ ಪತ್ನಿ ಪ್ರತಿಭಾ ಸಿಂಗ್ ಇದೀಗ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ಇತರ ನಾಲ್ವರ ಹೆಸರು ಕೇಳಿಬರುತ್ತಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದೇ ಅನುಮಾನ ಅನ್ನೋ ಪರಿಸ್ಥಿತಿ ನಡುವೆ ಪಕ್ಷ ಸಂಘಟಿಸಿ ಸ್ಪಷ್ಟ ಬಹುಮತ ಪಡೆಯಲು ಕಾರಣರಾದ ಪ್ರತಿಭಾ ಸಿಂಗ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗುವ ಸಾಧ್ಯತೆ ಇದೆ. 

ಚುನಾವಣಾ ಆಯೋಗದ ಅಂಕಿ ಅಂಶಗಳ (election commission data) ಪ್ರಕಾರ, ಈ ಬಾರಿಯ  ವಿಧಾನಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ದಾಖಲೆಯ 75.6 ಶೇಕಡಾ ಮತದಾನವಾಗಿದೆ. ಹಿಮಾಚಲದಲ್ಲಿ 28,54,945 ಪುರುಷರು ಮತ್ತು 27,37,845 ಮಹಿಳೆಯರು ಸೇರಿದಂತೆ ಒಟ್ಟು 55,92,828 ಮತದಾರರಿದ್ದಾರೆ. 76.8 ಮಹಿಳೆಯರು ಹಾಗೂ 2.4 ಪುರುಷರು ಈ ಬಾರಿ ಚಲಾಯಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಕಳೆದ ಎರಡು ದಶಕಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರ ಶೇಕಡಾವಾರು ಮತದಾನವು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದೆ. 

Follow Us:
Download App:
  • android
  • ios