ಇನ್ನು ಕರ್ನಾಟಕದತ್ತ ಎಲ್ಲರ ಚಿತ್ತ: ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ ಫೈಟ್
ಬಹು ನಿರೀಕ್ಷಿತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬೀಳುವುದರೊಂದಿಗೆ ಬಿಜೆಪಿ, ಕಾಂಗ್ರೆಸ್ ಮತ್ತಿತರ ರಾಷ್ಟ್ರೀಯ ಪಕ್ಷಗಳ ಗಮನ ಇನ್ನು ಕರ್ನಾಟಕದತ್ತ ಗಂಭೀರವಾಗಿ ಹರಿಯುವುದು ನಿಶ್ಚಿತವಾಗಿದೆ.
ಬೆಂಗಳೂರು (ಡಿ.09): ಬಹು ನಿರೀಕ್ಷಿತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬೀಳುವುದರೊಂದಿಗೆ ಬಿಜೆಪಿ, ಕಾಂಗ್ರೆಸ್ ಮತ್ತಿತರ ರಾಷ್ಟ್ರೀಯ ಪಕ್ಷಗಳ ಗಮನ ಇನ್ನು ಕರ್ನಾಟಕದತ್ತ ಗಂಭೀರವಾಗಿ ಹರಿಯುವುದು ನಿಶ್ಚಿತವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಫೆಬ್ರವರಿಯಲ್ಲಿ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಚುನಾವಣೆ ಎದುರಾಗಲಿವೆ. ಆದರೆ, ಕರ್ನಾಟಕ ದೊಡ್ಡ ರಾಜ್ಯವಾಗಿರುವುದರಿಂದ ಸಹಜವಾಗಿಯೇ ರಾಷ್ಟ್ರೀಯ ಪಕ್ಷಗಳ ಗಮನ ಇಲ್ಲೇ ಹೆಚ್ಚು ಕೇಂದ್ರೀಕೃತವಾಗಲಿದೆ.
ಕಳೆದ ಮೂರೂವರೆ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆ ಪಕ್ಷವನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಭರ್ಜರಿ ಹೋರಾಟ ನಡೆಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ಇನ್ನು ಕರ್ನಾಟಕದ ರಾಜಕೀಯ ಆಗುಹೋಗುಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಖಚಿತವಾಗಿದೆ. ಇಬ್ಬರೂ ನಾಯಕರು ಕರ್ನಾಟಕಕ್ಕೆ ಬಂದು ಹೋಗುವುದು ಇನ್ನು ಹೆಚ್ಚಾಗಲಿದೆ. ಇದು ಇಲ್ಲಿನ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುವ ನಿರೀಕ್ಷೆ ಇದೆ.
ರೆಡ್ಡಿ ಸ್ನೇಹ, ಪಕ್ಷ ಸರಿದೂಗಿಸಿಕೊಂಡು ಹೋಗುತ್ತೇನೆ: ಸಚಿವ ಶ್ರೀರಾಮುಲು
ಮತ್ತೊಂದೆಡೆ, ಹೊಸ ವರ್ಷದ ಜನವರಿ 26ಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗಲಿದೆ. ಅನಂತರ ಅವರು ಕೂಡ ಕರ್ನಾಟಕದ ಕಾಂಗ್ರೆಸ್ ತಂತ್ರಗಾರಿಕೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಇನ್ನು ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಗಳಿಸಿರುವ ಆಮ್ ಆದ್ಮಿ ಪಕ್ಷದ ನಾಯಕರು ಕೂಡ ಕರ್ನಾಟಕದಲ್ಲಿ ಖಾತೆ ತೆರೆಯುವ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆ ವಿಸ್ತರಿಸಲು ಪ್ರಯತ್ನ ನಡೆಸುವುದು ನಿಚ್ಚಳವಾಗಿದೆ.
ಬಿಜೆಪಿಯಲ್ಲಿ ಉತ್ಸಾಹದ ಜೊತೆಗೆ ಆತಂಕ: ಗುಜರಾತ್ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವುದು ರಾಜ್ಯ ಬಿಜೆಪಿ ಪಾಳೆಯದಲ್ಲಿ ಅಪರಿಮಿತ ಉತ್ಸಾಹ ಕಂಡು ಬಂದಿದೆ. ರಾಜ್ಯ ಸರ್ಕಾರದ ವಿರುದ್ಧದ ಸತತ ಭ್ರಷ್ಟಾಚಾರ ಆರೋಪಗಳಿಂದಾಗಿ ಪಕ್ಷದ ವರ್ಚಸ್ಸು ತುಸು ಮಂಕಾಗಿದೆಯೇನೊ ಎಂಬ ಅನುಮಾನದ ನಡುವೆಯೇ ಈ ಫಲಿತಾಂಶ ಬಿಜೆಪಿ ಕಾರ್ಯಕರ್ತರಲ್ಲಿ ನೆಮ್ಮದಿ ಉಂಟು ಮಾಡಿದೆ. ಮೋದಿ ಮತ್ತು ಅಮಿತ್ ಶಾ ಜೋಡಿ ಕಮಾಲ್ ನಡೆಸುವ ಮೂಲಕ ಮುಂಬರುವ 2023ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬಹುದು ಎಂಬ ವಿಶ್ವಾಸ ಕಾರ್ಯಕರ್ತರಲ್ಲಿ ಮೂಡತೊಡಗಿದೆ.
ಆದರೆ, ಟಿಕೆಟ್ ಹಂಚಿಕೆಯಲ್ಲಿ ಗುಜರಾತ್‌ನಲ್ಲಿ ಕೈಗೊಂಡ ಪ್ರಯೋಗವನ್ನು ರಾಷ್ಟ್ರೀಯ ನಾಯಕರು ಇಲ್ಲೂ ಕೈಗೊಳ್ಳಬಹುದು ಎಂಬ ಆತಂಕ ಪಕ್ಷದ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರಲ್ಲಿ ಮೂಡಿದೆ. ಈ ಫಲಿತಾಂಶದ ಬೆನ್ನಲ್ಲೇ ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ, ಹೊಸಬರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಹೀಗಾಗಿ, ಹಾಲಿ ಶಾಸಕರ ಪೈಕಿ ಅನೇಕರಿಗೆ ತಮಗೆ ಈ ಬಾರಿ ಟಿಕೆಟ್ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಶುರುವಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನಲ್ಲೂ ಹೊಸ ರಕ್ತದ ಹಕ್ಕೊತ್ತಾಯ: ಗುಜರಾತ್‌ನಲ್ಲಿ ಹಿನ್ನಡೆಯನ್ನು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ, ಈ ಪ್ರಮಾಣದ ಹಿನ್ನಡೆ ನಿರೀಕ್ಷಿಸಿರಲಿಲ್ಲ. ಇನ್ನು ಹಿಮಾಚಲದ ಗೆಲವು ಸಹಜವಾಗಿಯೇ ಉತ್ಸಾಹ ಮೂಡಿಸಿದೆ. ಗುಜರಾತ್ ಸೋಲಿಗೆ ಕಾಂಗ್ರೆಸ್ ಬಳಿ ತನ್ನದೇ ಆದ ಕಾರಣಗಳಿವೆ. ಆಮ್ ಆದ್ಮಿ ಸೇರಿದಂತೆ ಕೆಲ ಪಕ್ಷಗಳಿಂದಾಗಿ ಜಾತ್ಯತೀತ ಮತಗಳು ಹರಿದು ಹಂಚಿಹೋಗಿದ್ದು ಹಾಗೂ ಬಿಜೆಪಿ ಹಣದ ಹೊಳೆ ಹರಿಸಿದ್ದನ್ನು ಸೋಲಿಗೆ ಕಾರಣವಾಗಿ ನೀಡುತ್ತದೆ. ಇದೇ ವೇಳೆ ಹಿಮಾಚಲದ ಗೆಲುವು ಹಾಗೂ ಆ ರಾಜ್ಯದಲ್ಲಿ ಚುನಾವಣೆ ಪ್ರಚಾರದಲ್ಲಿ ಪ್ರಿಯಾಂಕ ಗಾಂಧಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕೆ ಮತದಾರರು ಸ್ಪಂದಿಸಿದ್ದು ಪಕ್ಷಕ್ಕೆ ಚೈತನ್ಯ ನೀಡಿದೆ.
ಒಟ್ಟಾರೆ ಈ ಫಲಿತಾಂಶದಿಂದ ಕಾಂಗ್ರೆಸ್‌ನಲ್ಲೂ ಹೊಸ ರಕ್ತಕ್ಕೆ ಬೆಲೆ ನೀಡಬೇಕು ಎಂಬ ಹಕ್ಕೊತ್ತಾಯ ಪ್ರಬಲವಾಗುವ ಸಾಧ್ಯತೆ ಗೋಚರಿಸಿದೆ. ಎಐಸಿಸಿಯ ಉದಯಪುರ ಸಮಾವೇಶದಲ್ಲಿ ಯಾವುದೇ ಚುನಾವಣೆಯಲ್ಲಿ ಶೇ.50ರಷ್ಟು ಸೀಟುಗಳನ್ನು ಯುವಕರಿಗೆ ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. ಈ ನಿರ್ಧಾರವನ್ನು ಜಾರಿಗೆ ತರುವಂತೆ ಹಾಗೂ ಸೋಲುವ ಸಾಧ್ಯತೆ ಕಂಡು ಬರುವ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವಂತೆ ಒತ್ತಾಯ ತೀವ್ರವಾಗುವ ಸಾಧ್ಯತೆಯಿದೆ.
Ticket Fight: ಬೀದರ್ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್
ಆಮ್ ಆದ್ಮಿ ಪಕ್ಷದಲ್ಲಿ ಹುಮ್ಮಸ್ಸು: ದೆಹಲಿ ಮಹಾನಗರ ಪಾಲಿಕೆಯ ಯಶಸ್ಸಿನ ಬೆನ್ನಲ್ಲೇ ಗುಜರಾತ್ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಲಭಿಸದಿದ್ದರೂ ಖಾತೆ ತೆರೆದು ತನ್ನ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕರಿಗೆ ಕರ್ನಾಟಕದಲ್ಲಿ ಖಾತೆಯನ್ನಾದರೂ ತೆರೆಯಬೇಕು ಎಂಬ ಹುಮ್ಮಸ್ಸು ಬಂದಂತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿರುವ ರಾಜ್ಯ ನಾಯಕರಿಗೆ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಿ ಬೆನ್ನುತಟ್ಟುವ ಕೆಲಸ ಮಾಡಲಿದ್ದಾರೆ. ಜತೆಗೆ ಇತರ ಪಕ್ಷಗಳ ಅತೃಪ್ತರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಸಾಧ್ಯತೆಯೂ ಇದೆ.