ಕರ್ನಾಟಕದ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಬೇಡಿಕೆ ಮತ್ತು ಸಮಸ್ಯೆಗಳ ಕುರಿತಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಆಂಧ್ರಪ್ರದೇಶ ರಾಜ್ಯಪಾಲ ಸೈಯದ್ ಅಬ್ದುಲ್ ನಜೀರ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಬೆಂಗಳೂರು (ನ.29): ಆಂಧ್ರಪ್ರದೇಶದ ದೇವಸ್ಥಾನಗಳಲ್ಲಿ ಕರ್ನಾಟಕದ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಬೇಡಿಕೆ ಮತ್ತು ಸಮಸ್ಯೆಗಳ ಕುರಿತಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಆಂಧ್ರಪ್ರದೇಶ ರಾಜ್ಯಪಾಲ ಸೈಯದ್ ಅಬ್ದುಲ್ ನಜೀರ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಆಂಧ್ರಪ್ರದೇಶದಲ್ಲಿನ ವಿಜಯವಾಡದಲ್ಲಿನ ರಾಜ್ಯಪಾಲರ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಈ ಹಿಂದೆ ರಾಜ್ಯಪಾಲ ಸೈಯದ್ ಅಬ್ದುಲ್ ನಜೀರ್ ಅವರು ಬೆಂಗಳೂರಿಗೆ ಭೇಟಿ ನೀಡಿದಾಗಲೂ ಸಚಿವ ರಾಮಲಿಂಗಾರೆಡ್ಡಿ ಕರ್ನಾಟಕದ ಬೇಡಿಕೆಗಳ ಕುರಿತು ಗಮನಕ್ಕೆ ತಂದಿದ್ದರು.
ಅದರ ಮುಂದುವರಿದ ಭಾಗವಾಗಿ ಶುಕ್ರವಾರ ರಾಜ್ಯಪಾಲರ ಕಚೇರಿಯಲ್ಲಿ ಎರಡೂ ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪ್ರಮುಖವಾಗಿ, ಆಂಧ್ರಪ್ರದೇಶ ರಾಜ್ಯದ ಶ್ರೀಶೈಲಂ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯಕ್ಕೆ 2 ಎಕರೆ ಭೂಮಿ ನೀಡಲಾಗಿದೆ. ಅದರ ಜತೆಗೆ ಇನ್ನೂ 3 ಎಕರೆ ಭೂಮಿ ಸೇರಿಸಿ ಒಟ್ಟು 5 ಎಕರೆ ಭೂಮಿ ನೀಡಲು ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚಿಸಬೇಕು.
ಜತೆಗೆ ತಿರುಮಲದಲ್ಲಿ ರಾಜ್ಯಕ್ಕೆ ನೀಡಲಾಗಿರುವ ಏಳು ಎಕರೆ ಭೂಮಿಯ ಗುತ್ತಿಗೆ (ಲೀಸ್) ಅವಧಿಯನ್ನು 30 ವರ್ಷದಿಂದ 99 ವರ್ಷಗಳಿಗೆ ಹೆಚ್ಚಿಸಬೇಕು. ತಿರುಮಲದಲ್ಲಿ ಕರ್ನಾಟಕ ಮುಜರಾಯಿ ಇಲಾಖೆಯಿಂದ ಮನವಿ ಬಂದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡಬೇಕು. ಮಂತ್ರಾಲಯದಲ್ಲಿ ರಾಜ್ಯ ಸರ್ಕಾರ ಖರೀದಿಸಿರುವ 5 ಎಕರೆ ಜಾಗವನ್ನು ರಾಜ್ಯದ ಹೆಸರಿಗೆ ಹಸ್ತಾಂತರ ಮಾಡಬೇಕು ಎಂದು ರಾಮಲಿಂಗಾರೆಡ್ಡಿ ಕೋರಿದರು.
ಭಕ್ತರ ಅನುಕೂಲಕ್ಕಾಗಿ ಸೂಕ್ತ ಕ್ರಮ
ಈ ಮನವಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಹಾಜರಿದ್ದ ಆಂಧ್ರಪ್ರದೇಶದ ಮುಜರಾಯಿ ಸಚಿವ ಅನಂ ರಾಮನಾರಾಯಣ ರೆಡ್ಡಿ ಅವರಿಗೆ ಈ ಕುರಿತು ಚರ್ಚೆ ನಡೆಸಿ ಭಕ್ತರ ಅನುಕೂಲಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ನಿರ್ದೇಶಿಸಿದರು. ಸಭೆಯಲ್ಲಿ ರಾಜ್ಯದ ಸಣ್ಣ ನೀರಾವರಿ ಸಚಿವ ಬೋಸ್‌ರಾಜ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಆಂಧ್ರಪ್ರದೇಶ ಮುಜರಾಯಿ ಆಯುಕ್ತ ರಾಮಚಂದ್ರಮೋಹನ್ ಇತರರಿದ್ದರು.


