ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಶಾಸಕರು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ಕೆಲ ಸಚಿವರು ಒಟ್ಟಿಗೆ ಊಟ ಮಾಡಿದ್ದಾರೆ ಅಷ್ಟೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು (ನ.26): ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಶಾಸಕರು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ಕೆಲ ಸಚಿವರು ಒಟ್ಟಿಗೆ ಊಟ ಮಾಡಿದ್ದಾರೆ ಅಷ್ಟೇ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಮುಖ್ಯಮಂತ್ರಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ದೆಹಲಿಯಲ್ಲಿ ವೈಯಕ್ತಿಕ ಕೆಲಸವಿದ್ದ ಕಾರಣಕ್ಕಾಗಿ ಶಾಸಕರು ಹೋಗಿದ್ದಾರೆ. ಇನ್ನು, ಕೆಲ ಸಚಿವರು ಜತೆಯಲ್ಲಿ ಕೂತು ಊಟ ಮಾಡಿದ್ದಾರೆ. ಗೊಂದಲವೇ ಇಲ್ಲ ಎಂದ ಮೇಲೆ ಸರ್ಕಾರದ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ.
ಸಂಪುರ ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದರು. ಬಿಜೆಪಿಯವರು ನಮ್ಮನ್ನು ಟೀಕಿಸುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಮೂವರು ಮುಖ್ಯಮಂತ್ರಿಯಾದರು. ಒಂದೇ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಎಂದು ಹೇಳಿದರು. ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆ ಚುನಾವಣೆ ಮೇಲೆ ಗಮನಹರಿಸಿದ್ದೇವೆ. ಐದೂ ಪಾಲಿಕೆಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಕರಗ ಆಚರಣೆ
ಬಸವನಗುಡಿ ಕಡಲೆಕಾಯಿ ಪರಿಷೆ ಯಶಸ್ವಿಯಾದಂತೆ ಮುಂದಿನ ಕರಗ ಉತ್ಸವವನ್ನೂ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ಆಚರಿಸಲು ಯೋಜನೆ ರೂಪಿಸಿಕೊಳ್ಳುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕಡಲೆಕಾಯಿ ಪರಿಷೆ ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದ ವಿವಿಧ ಇಲಾಖೆಗಳ ಅಧಿಕಾರಿ , ಸಿಬ್ಬಂದಿಗೆ ದೊಡ್ಡ ಬಸವಣ್ಣ ದೇವಸ್ಥಾನ ಆವರಣದಲ್ಲಿ ಸೋಮವಾರ ಸನ್ಮಾನಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರದಲ್ಲಿ ಕಡಲೆಕಾಯಿ ಪರಿಷೆ, ಕರಗ ಉತ್ಸವಗಳು ಅತ್ಯಂತ ದೊಡ್ಡ ಆಚರಣೆಗಳಾಗಿದ್ದು ಲಕ್ಷಾಂತರ ಜನ ಸೇರುತ್ತಾರೆ. ಕರಗ ಆಚರಣೆ ಕುರಿತು ಮುಂದಿನ ಜನವರಿಯಲ್ಲಿ ದೇವಸ್ಥಾನ ಸಮಾಜದ ಮುಖಂಡರು, ಅಧಿಕಾರಿ ವರ್ಗದ ಜತೆ ಸಭೆ ನಡೆಸಲಾಗುವುದು.
ಹಿಂದೆಂದೂ ಆಗದಷ್ಟು ವೈಭವಯುತವಾಗಿ ಆಚರಿಲು ಕ್ರಮ ವಹಿಸಲಿದ್ದೇವೆ. ಮೈಸೂರಿನಂತೆ ವಿವಿಧೆಡೆ ಸರ್ಕಲ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು. ಮುಜರಾಯಿ, ಜಿಬಿಎ, ಬೆಸ್ಕಾಂ, ಜಲಮಂಡಳಿ, ಪೌರಕಾರ್ಮಿಕರು, ಪೊಲೀಸ್ ಇಲಾಖೆ, ಎನ್‌ಎಸ್‌ಎಸ್ ಕಾಲೇಜು ಸ್ವಯಂ ಸೇವಕರು ಸೇರಿ ಹತ್ತು ಹಲವು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಿದ್ದರಿಂದ ಈ ಬಾರಿ ಪರಿಷೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಕಳೆದ ವರ್ಷ 4 ಲಕ್ಷ ಜನ ಬಂದಿದ್ದರೆ, ಐದು ದಿನಗಳ ಕಾಲ ವಿಸ್ತರಣೆಯಾದ ಈ ಬಾರಿಯ ಪರಿಷೆಗೆ ಬರೋಬ್ಬರಿ 12ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿರುವುದಾಗಿ ಪೊಲೀಸ್ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ. ಯಾವುದೇ ಗೊಂದಲಕ್ಕೆ ಎಡೆಯಿಲ್ಲದಂತೆ ಪರಿಷೆ ಯಶಸ್ವಿಯಾಗಿದೆ ಎಂದು ಹೇಳಿದರು.
ಮೈಸೂರು ದಸರಾ ಮಾದರಿಯಲ್ಲಿ ಎನ್‌ಆರ್ ಕಾಲನಿಯಿಂದ ಹಿಡಿದು ವಿವೇಕಾನಂದ ಸರ್ಕಲ್‌ನಿಂದ ಆಚೆಗೂ ಜಗಮಗಿಸುವ ವಿದ್ಯುದಲಂಕಾರ ಮಾಡಲಾಡಿತ್ತು. ಹಾಸನದ ಹಾಸನಾಂಬೆ ದೇವಾಲಯದಲ್ಲಿ ಹೂವಿನಲಂಕಾರ ಮಾಡಿದವರಿಂದಲೇ ಇಲ್ಲಿ ಅಲಂಕಾರ ಮಾಡಿಸಿರುವುದು ಈ ಬಾರಿಯ ಪರಿಷೆಯ ವಿಶೇಷ. ಈ ಬಾರಿಯೂ ಪ್ಲಾಸ್ಟಿಕ್ ನಿರ್ಬಂಧಿಸಿ ಪರಿಷೆ ಮಾಡಲಾಯಿತು. ಸ್ವಯಂ ಸೇವಕರಿಂದ ಬಟ್ಟೆ, ಪೇಪರ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ಜತೆಗೆ ಕಳೆದ ವರ್ಷದಂತೆ ವ್ಯಾಪಾರಸ್ಥರಿಗೆ ಅನುಕೂಲ ಆಗಿಸಲು ಕರ ವಸೂಲಿ ಮಾಡಿಲ್ಲ. ಇದಕ್ಕೆ ಬಡ ವರ್ತಕರು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಒಣ, ಹಸಿಕಸ ಸೇರಿ ಈ ಬಾರಿ ಬರೋಬ್ಬರಿ 135 ಟನ್ ಕಸ ಉತ್ಪಾದನೆಯಾಗಿದ್ದು ಪೌರಕಾರ್ಮಿಕರು ಶ್ರಮವಹಿಸಿ ಸ್ವಚ್ಛತೆ ಕಾಪಾಡಿದ್ದಾರೆ. ಕೆಲ ವರ್ತಕರಿಂದ ಪ್ಲಾಸ್ಟಿಕ್ ವಶಪಡಿಸಿಕೊಂಡು ಬಟ್ಟೆ ಬ್ಯಾಗ್ ವಿತರಿಸಲಾಯಿತು. ಟ್ರಾಫಿಕ್ ಸೇರಿ 800 ಪೊಲೀಸರು ಭದ್ರತೆಗೆ ಕರ್ತವ್ಯ ನಿರ್ವಹಿಸಿದ್ದಾರೆ. ನೂರಾರು ಸಿಸಿ ಟಿವಿ ಕ್ಯಾಮೆರಾ, ಡ್ರೋನ್ ಮೂಲಕ ಸುರಕ್ಷತೆಗೆ ಕ್ರಮ ವಹಿಸಲಾಗಿತ್ತು ಎಂದರು. ಎಐಸಿಸಿ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ಮಾತನಾಡಿ, ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ಈ ಬಾರಿಯ ಪರಿಷೆ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಜರುಗಿತು. ಈ ಬಾರಿ 2ರಿಂದ 3.5 ಸಾವಿರ ವ್ಯಾಪಾರಸ್ಥರು ಅಂಗಡಿ ಹಾಕಿಕೊಂಡಿದ್ದರೂ ಇವರಿಂದ ಯಾವ ಸುಂಕ ತೆಗೆದುಕೊಂಡಿಲ್ಲ. ಪರಿಷೆಯ ಕೊನೆ ದಿನದ ತನಕವೂ ಸಚಿವರು ಖುದ್ದು ದೇವಸ್ಥಾನಕ್ಕೆ ಬಂದು ಇಲ್ಲಿನ ಸ್ವಚ್ಛತೆ, ಮೂಲ ಸೌಕರ್ಯದ ಬಗ್ಗೆ ಪರಿಶೀಲಿಸಿ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

