ರಾಜ್ಯದ ಅಧಿಕಾರ ಹಂಚಿಕೆ ತಿಕ್ಕಾಟ ಪರಿಹಾರಕ್ಕೆ ಕಾಂಗ್ರೆಸ್‌ ವರಿಷ್ಠರ ಸಭೆ ಭಾನುವಾರ ದೆಹಲಿಯಲ್ಲಿ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಬ್ರೇಕ್ ಫಾಸ್ಟ್ ಮೀಟಿಂಗ್‌ ಫಲಿತಾಂಶವನ್ನು ಆಧರಿಸಿದೆ.

ಬೆಂಗಳೂರು : ರಾಜ್ಯದ ಅಧಿಕಾರ ಹಂಚಿಕೆ ತಿಕ್ಕಾಟ ಪರಿಹಾರಕ್ಕೆ ಕಾಂಗ್ರೆಸ್‌ ವರಿಷ್ಠರ ಸಭೆ ಭಾನುವಾರ ದೆಹಲಿಯಲ್ಲಿ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಬ್ರೇಕ್ ಫಾಸ್ಟ್ ಮೀಟಿಂಗ್‌ ಫಲಿತಾಂಶವನ್ನು ಆಧರಿಸಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ನ ಮೂಲಗಳ ಪ್ರಕಾರ, ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದ ಸಂಸದೀಯ ಸಭೆ ನಂತರ ಕರ್ನಾಟಕದ ವಿಚಾರಗಳ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ, ಸಭೆಯನ್ನು ಇನ್ನೂ ನಿಗದಿ ಮಾಡಿಲ್ಲ.

ಬ್ರೇಕ್‌ ಫಾಸ್ಟ್ ಮೀಟಿಂಗ್ ಫಲಿತಾಂಶ ಆಧರಿಸಿ ಸಭೆ

ಏಕೆಂದರೆ, ಈ ವಿವಾದ ಬಗ್ಗೆ ಮುಖಾಮುಖಿ ಮಾತುಕತೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶನಿವಾರ ನಡೆಸಲಿರುವ ಬ್ರೇಕ್‌ ಫಾಸ್ಟ್ ಮೀಟಿಂಗ್ ಫಲಿತಾಂಶ ಆಧರಿಸಿ ಸಭೆ ಆಯೋಜನೆ ಬಗ್ಗೆ ಹೈಕಮಾಂಡ್‌ ತೀರ್ಮಾನಿಸಲಿದೆ ಎಂದು ಮೂಲಗಳು ಹೇಳಿವೆ.

ನಿರೀಕ್ಷೆಯಂತೆ ಬರದಿದ್ದರೆ ಹೈಕಮಾಂಡ್‌ ನಿರ್ಣಯ

ಬ್ರೇಕ್ ಫಾಸ್ಟ್ ಸಭೆಯ ಫಲಿತಾಂಶ ನಿರೀಕ್ಷೆಯಂತೆ ಬರದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ನ. 30ಕ್ಕೆ ದೆಹಲಿಗೆ ಬುಲಾವ್‌ ನೀಡಿ, ಹೈಕಮಾಂಡ್‌ ತಮ್ಮ ನಿರ್ಣಯ ತಿಳಿಸುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ನ.30ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸೇರಿ ವರಿಷ್ಠರು ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲಿದ್ದಾರೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.