ದೆಹಲಿಯ ಪಕ್ಷದ ಕಚೇರಿ ನಮ್ಮ ಪಾಲಿನ ದೇವಾಲಯ. ನಮಗೆ ಮಾರ್ಗದರ್ಶನ ನೀಡಲಿದೆ. ಯಾವುದೇ ವಿಚಾರದಲ್ಲೂ ನನಗೆ ಆತುರವಿಲ್ಲ. ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು (ನ.29): ಯಾವುದೇ ವಿಚಾರದಲ್ಲೂ ನನಗೆ ಆತುರವಿಲ್ಲ. ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲವನ್ನೂ ಪಕ್ಷ ನಿರ್ಧಾರ ಮಾಡುತ್ತದೆ. ದೆಹಲಿಯ ಪಕ್ಷದ ಕಚೇರಿ ನಮ್ಮ ಪಾಲಿನ ದೇವಾಲಯ. ದೆಹಲಿ ಕಚೇರಿ ನಮಗೆ ಮಾರ್ಗದರ್ಶನ ನೀಡಲಿದೆ ಎಂದರು. ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿರುವ ಕಾರಣದಿಂದಾಗಿ ನಾನು ಹೋಗಬಹುದು. ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯದ ಸಂಸದರನ್ನು ಭೇಟಿ ಮಾಡಬೇಕಿದೆ. ಮೇಕೆದಾಟು, ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿ ನೀರಾವರಿ ಯೋಜನೆಗಳ ಕುರಿತು ಸಂಸದರೊಂದಿಗೆ ಚರ್ಚೆ ಮಾಡಬೇಕಿದೆ. ಈ ಕುರಿತು ಸರ್ವಪಕ್ಷ ಸಭೆ ಕರೆಯಬೇಕಿದ್ದು, ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಒಕ್ಕಲಿಗರೂ ಹಿಂದುಳಿದ ಸಮುದಾಯದವರೇ: ಒಕ್ಕಲಿಗ ಸಮುದಾಯ ನಿಮ್ಮ ಪರ ನಿಂತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಸಮುದಾಯದ ದೃಷ್ಟಿಕೋನ ಬಗ್ಗೆ ಚರ್ಚೆ ಮಾಡುವುದಿಲ್ಲ. ನನಗೆ ಪಕ್ಷ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿ ಸಮಾದ ಎಲ್ಲ ಸಮುದಾಯಗಳ ಪರವಾಗಿದೆ. ಒಕ್ಕಲಿಗರು ಕೂಡ ಹಿಂದುಳಿದ ವರ್ಗದ ಸಮುದಾಯದವರೇ ಎಂದು ಮಾರ್ಮಿಕವಾಗಿ ಹೇಳಿದರು.
2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸತೀಶ್ ಜತೆ ಚರ್ಚೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ, ರಾಹುಲ್ ಗಾಂಧಿ ಅವರ ಮಾರ್ಗರ್ಶನ, ಸಿದ್ದರಾಮಯ್ಯ ಮತ್ತು ಎಲ್ಲರ ಶ್ರಮದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸಚಿವ ಸತೀಶ್ ಜಾರಕಿಹೊಳಿ ಜತೆಗಿನ ಭೇಟಿ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ಅವರ ಜತೆಗೆ 2028ರಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯತಂತ್ರ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ನಾನು ಪಕ್ಷದ ಅಧ್ಯಕ್ಷನಾಗಿ ನಾನು, ಸತೀಶ್ ಜಾರಕಿಹೊಳಿ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ನಾವಿಬ್ಬರೂ ಆತ್ಮೀಯ ಸ್ನೇಹಿತರು. ಇಬ್ಬರ ಬಾಂಧವ್ಯ ಚೆನ್ನಾಗಿದೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಮತ್ತು ಸತೀಶ್ ಇಬ್ಬರೂ ಪ್ರಸ್ತುತ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರು ಪಕ್ಷದ ದೊಡ್ಡ ಆಸ್ತಿ. 2028 ಮತ್ತು 2029ರ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಕುರಿತು ಇಬ್ಬರೂ ಚರ್ಚೆ ಮಾಡಿದ್ದೇವೆ ಎಂದರು. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಉಳಿದ ಎರಡೂವರೆ ವರ್ಷಗಳಲ್ಲಿ ಏನೇನು ಕೆಲಸ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಅದನ್ನು ಬಿಟ್ಟರೆ ಬೇರೆ ಯಾವುದೇ ವಿಶೇಷ ಮಾತುಕತೆ ನಡೆಸಿಲ್ಲ ಎಂದರು.


