ಹೈಕಮಾಂಡ್ ನಾಯಕರಿಗೆ ಸಮಯಪ್ರಜ್ಞೆಯಿದೆ. ಸಂದರ್ಭ, ಸನ್ನಿವೇಶ ನೋಡಿಕೊಂಡು ಸಿಎಂ-ಡಿಸಿಎಂ ಕರೆಯುತ್ತಾರೆ. ಯಾವಾಗ ಮಧ್ಯಪ್ರವೇಶಿಸಬೇಕು ಎಂಬುದನ್ನು ನೋಡಿಕೊಂಡು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರು (ನ.29): ಹೈಕಮಾಂಡ್ ನಾಯಕರಿಗೆ ಸಮಯಪ್ರಜ್ಞೆಯಿದೆ. ಸಂದರ್ಭ, ಸನ್ನಿವೇಶ ನೋಡಿಕೊಂಡು ಸಿಎಂ-ಡಿಸಿಎಂ ಕರೆಯುತ್ತಾರೆ. ಯಾವಾಗ ಏನು ಮಾಡಬೇಕು, ಯಾವಾಗ ಮಧ್ಯಪ್ರವೇಶಿಸಬೇಕು ಎಂಬುದನ್ನು ನೋಡಿಕೊಂಡು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, 130 ವರ್ಷದ ಇತಿಹಾಸ ಇರುವ ಪಕ್ಷಕ್ಕೆ ಇವೆಲ್ಲವೂ ಹೊಸದಲ್ಲ. ಹೈಕಮಾಂಡ್ ನಾಯಕರು ಎಲ್ಲವನ್ನೂ ನೋಡುತ್ತಿದ್ದು, ಯಾವಾಗ ಏನು ಮಾಡಬೇಕು, ಯಾವಾಗ ಮಧ್ಯಪ್ರವೇಶಿಸಬೇಕು ಎಂಬುದು ಹೈಕಮಾಂಡ್ ನಾಯಕರಿಗೆ ತಿಳಿದಿದೆ.
ಸಮಯ, ಸಂದರ್ಭವನ್ನು ಗಮನಿಸಿ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆದಿರುವ ವಿಚಾರ ನಮಗೆ ತಿಳಿದಿಲ್ಲ. ಇದು ಸಿಎಂ-ಡಿಸಿಎಂ ಅವರಿಗೂ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಗತ್ಯ ಇದ್ದಾಗ ಕರೆದು ಮಾತನಾಡುತ್ತೇವೆ ಎಂದಿದ್ದಾರೆ. ಕರೆ ಬಂದರೆ ಇಬ್ಬರೂ ಹೋಗುತ್ತಾರೆ. ಇನ್ನು, ಸಿಎಂ ಮತ್ತು ಡಿಸಿಎಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ನನಗೆ ತಿಳಿದಿಲ್ಲ. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಅಷ್ಟೇ ಎಂದು ಹೇಳಿದರು.
ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಪ್ರಿಯಾಂಕ್
ಸಚಿವ ಪ್ರಿಯಾಂಕ್ ಖರ್ಗೆಯವರು ಶುಕ್ರವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ನಿವಾಸಕ್ಕೆ ಆಗಮಿಸಿದ ಪ್ರಿಯಾಂಕ್, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಸಿಎಂ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆಯವರು ಡಿಕೆಶಿಯನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗುತ್ತಿದ್ದು, ಡಿಕೆಶಿಯ ಸಂದೇಶವನ್ನು ತಲುಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಕೆಶಿ ಮತ್ತು ಡಿಕೆ ಸುರೇಶ್ ಇಬ್ಬರೂ ದೆಹಲಿಗೆ ಆಗಮಿಸಿದ್ದು, ಇದೇ ವೇಳೆ, ಪ್ರಿಯಾಂಕ್ ಖರ್ಗೆ ಕೂಡ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ.


