ಅಧಿಕಾರ ಹಸ್ತಾಂತರ ಬಿಕ್ಕಟ್ಟಿನ ನಡುವೆಯೇ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ರಾಜ್ಯ ನಾಯಕರಿಗಾಗಿ ಸಂದೇಶವೊಂದನ್ನು ಹೊತ್ತು ತಂದಿದ್ದರು ಎನ್ನಲಾಗಿದೆ.

ಬೆಂಗಳೂರು (ನ.26): ಅಧಿಕಾರ ಹಸ್ತಾಂತರ ಬಿಕ್ಕಟ್ಟಿನ ನಡುವೆಯೇ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ರಾಜ್ಯ ನಾಯಕರಿಗಾಗಿ ಸಂದೇಶವೊಂದನ್ನು ಹೊತ್ತು ತಂದಿದ್ದರು ಎನ್ನಲಾಗಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿದೇಶದಿಂದ ಹಿಂತಿರುಗಿದ ಪ್ರಿಯಾಂಕ್‌ ಖರ್ಗೆ ಅವರು ಮಂಗಳವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು.

ಇದಾದ ನಂತರ ನಗರಕ್ಕೆ ಆಗಮಿಸಿದ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರಾಹುಲ್ ನೀಡಿದ್ದ ಸಂದೇಶವೊಂದನ್ನು ಗೌಪ್ಯವಾಗಿ ಉಭಯ ನಾಯಕರಿಗೂ ರವಾನಿಸಿದರು ಎನ್ನಲಾಗಿದೆ. ಮೂಲಗಳ ಪ್ರಕಾರ, 2023ರ ಮೇ 18ರಂದು ದೆಹಲಿಯಲ್ಲಿ ಆರು ಮಂದಿ ನಾಯಕರ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನ ಪಾಲನೆಯಾಗಬೇಕು ಎಂಬುದು ಈ ಸಂದೇಶ ಎನ್ನಲಾಗುತ್ತಿದೆ.

ಆದರೆ, ಮೇ 18ರಂದು ನಡೆದ ಸಭೆಯ ನಡಾವಳಿಯ ಬಗ್ಗೆ ಉಭಯ ಬಣಗಳು ವಿಭಿನ್ನ ವಿವರಣೆ ನೀಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಪ್ರಕಾರ, ಸದರಿ ಸಭೆಯಲ್ಲಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆಯಾಗಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣದ ಪ್ರಕಾರ, ತಲಾ ಎರಡೂವರೆ ವರ್ಷ ಅಧಿಕಾರದ ನಿರ್ಧಾರ ಸದರಿ ಸಭೆಯಲ್ಲಿ ಆಗಿತ್ತು.

ಉಭಯ ಬಣಗಳಲ್ಲೂ ತೀವ್ರ ಚಟುವಟಿಕೆ

ಪ್ರಿಯಾಂಕ್‌ ಖರ್ಗೆ ಅವರು ದೆಹಲಿಯಿಂದ ತಂದ ಸಂದೇಶ ರವಾನೆಯಾದ ನಂತರ ಉಭಯ ಬಣಗಳಲ್ಲೂ ತೀವ್ರ ಚಟುವಟಿಕೆ ನಡೆಯಿತು. ಮುಖ್ಯವಾಗಿ ಸಿದ್ದರಾಮಯ್ಯ ಆಪ್ತ ಸಚಿವ ಜಮೀರ್ ಅಹ್ಮದ್‌ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅನಂತರ ಅವರು ಮುಖ್ಯಮಂತ್ರಿಯವರೊಂದಿಗೂ ಚರ್ಚಿಸಿದರು. ಆದರೆ, ಯಾವ ವಿಚಾರ ಚರ್ಚೆ ನಡೆಸಿದರು ಎಂಬುದು ಬಹಿರಂಗಗೊಂಡಿಲ್ಲ.