ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಅದೆಲ್ಲ ಇರುವುದು ಬಿಜೆಪಿ ಮತ್ತು ಮಾಧ್ಯಮಗಳಲ್ಲಿ ಮಾತ್ರ. ಕಾಂಗ್ರೆಸ್‌ನಲ್ಲಿ ಏನೇ ನಿರ್ಧಾರವಿದ್ದರೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು (ನ.27): ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಅದೆಲ್ಲ ಇರುವುದು ಬಿಜೆಪಿ ಮತ್ತು ಮಾಧ್ಯಮಗಳಲ್ಲಿ ಮಾತ್ರ. ಕಾಂಗ್ರೆಸ್‌ನಲ್ಲಿ ಏನೇ ನಿರ್ಧಾರವಿದ್ದರೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಟೆಕ್ ಸಮ್ಮಿಟ್‌ಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರಿಗೆ ಬರಲಾಗಲಿಲ್ಲ. ಹೀಗಾಗಿ ದೆಹಲಿಗೆ ತೆರಳಿ ಅವರನ್ನು ಭೇಟಿಯಾಗಿ ಕೃತಕಬುದ್ಧಿಮತ್ತೆ ಕಂಪ್ಯೂಟರ್ ತೋರಿಸಿ ವಿವರಿಸಿದ್ದೇನೆ. ಆಳಂದ, ಮಹದೇವಪುರದಲ್ಲಿನ ಮತಗಳ್ಳತನ ಬಗ್ಗೆ ಚರ್ಚೆ ಮಾಡಿದ್ದೇನೆ. ಅದನ್ನು ಹೊರತುಪಡಿಸಿ ರಾಜ್ಯ ರಾಜಕಾರಣ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದರು.
ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ: ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತು ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ಸಂದರ್ಭ ಬಂದಾಗ ಹೈಕಮಾಂಡ್ ಎಲ್ಲವನ್ನೂ ಸ್ಪಷ್ಟಪಡಿಸುತ್ತದೆ. ಇನ್ನು, ಬಿಜೆಪಿ ಮತ್ತು ಮಾಧ್ಯಮಗಳಲ್ಲಿ ಮಾತ್ರ ಗೊಂದಲಗಳಿವೆ. ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು. ಅಧಿಕಾರ ಹಸ್ತಾಂತರ ಕುರಿತು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಧಿಕಾರ ಹಸ್ತಾಂತರ ಕುರಿತು ನಡೆದ ಮಾತುಕತೆಯಲ್ಲಿ ಮೂರ್ನಾಲ್ಕು ನಾಯಕರು ಇದ್ದರು ಎಂದು ಅವರೇ ಹೇಳಿದ್ದಾರೆ. ಅಲ್ಲಿ ಏನು ಚರ್ಚೆಯಾಗಿತ್ತು ಎಂಬುದು ನಮಗೆ ಗೊತ್ತಿಲ್ಲ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಪರಂಗೆ ಸಿಎಂ ಆಗೋ ಅರ್ಹತೆ ಇದೆ
ಡಾ.ಜಿ.ಪರಮೇಶ್ವರ್ ಅವರು ತಾವೂ ಸಿಎಂ ರೇಸ್‌ನಲ್ಲಿದ್ದೇವೆ ಎಂದು ಹೇಳಿದ್ದಕ್ಕೆ ಉತ್ತರಿಸಿ, ಈ ರೀತಿಯ ಸಂದರ್ಭದಲ್ಲಿ ಎಲ್ಲ ಸಮುದಾಯದವರೂ ಮುಖ್ಯಮಂತ್ರಿ ಸ್ಥಾನ ಕೇಳುತ್ತಾರೆ. ಡಾ.ಪರಮೇಶ್ವರ್ ಅವರೂ ಅತಿಹೆಚ್ಚಿನ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಎಲ್ಲ ಅರ್ಹತೆಯಿದೆ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಮಂದಿಗೆ ಆ ಅರ್ಹತೆಯಿದೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಬಾಹ್ಯ ಬೆಂಬಲ ನೀಡಲಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಚಪ್ಪಲಿಯೂ ಅವರ ಬಳಿಗೆ ಹೋಗುವುದಿಲ್ಲ. ನಮಗೆ ಬಿಜೆಪಿ ಬೆಂಬಲ ಪಡೆಯುವಷ್ಟು ಕೆಟ್ಟಕಾಲ ಬಂದಿಲ್ಲ. ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


