ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ NSUI ಚಾಕು ಪಾರ್ಸೆಲ್ ಮಾಡಿದ್ದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾರಾಯಣಸ್ವಾಮಿ ಹೇಳಿಕೆ ತಿರುಚಿ, ದಲಿತ ನಾಯಕನಿಗೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮೈಸೂರು (ನ.8): ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಎನ್‌ಎಸ್‌ಯುಐ(NSUI) ಕಾರ್ಯಕರ್ತರು ಚಾಕು, ಚೂರಿಗಳನ್ನು ಬ್ಲಿಂಕಿಟ್ ಮೂಲಕ ಪಾರ್ಸೆಲ್ ಮಾಡಿರುವ ವಿಚಾರಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ

ಈ ಘಟನೆ ಸಂಬಂಧ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ತಮಿಳುನಾಡಿನ ಇನ್ಫ್ಲೂಯನ್ಸರ್ ವೀರಮಣಿ ವಿಚಾರದಲ್ಲಿ ನಡೆದ ಕಾನ್ಸಪ್ಟ್‌ ಅನ್ನೇ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಕಾಪಿ ಮಾಡುತ್ತಿದ್ದಾರೆ. ಚಾಕು, ಚೂರಿ ಬುಕ್ ಮಾಡಿ ನಿಮ್ಮ ವಿದ್ಯಾರ್ಥಿ ಕಾಂಗ್ರೆಸ್‌ ಹುಡುಗರು ವಿರೋಧ ಪಕ್ಷದವರ ಮನೆ ತೋರಿಸಲು ಹೋಗುತ್ತಾರೆ. ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಇವರೆಲ್ಲ ಯಾರ ಶಿಷ್ಯಂದಿರು ಎಂಬುದು ನಾಡಿಗೆ ಗೊತ್ತಿದೆ. ಈಗ ಅವರಲ್ಲಿ ಒಬ್ಬರು ಸಿಎಂ ಆಗಿದ್ದಾರೆ, ಇನ್ನೊಬ್ಬರು ಕೆಪಿಸಿಸಿ ಅಧ್ಯಕ್ಷರಾಗಿದ್ದೀರಿ. ಆದ್ರೂ ನಿಮ್ಮ ಹಳೇ ಸಂಸ್ಕೃತಿ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಛಲವಾದಿ ಹೇಳಿಕೆ ತಿರುಚಲು ಯತ್ನ

ಛಲವಾದಿ ನಾರಾಯಣಸ್ವಾಮಿ ಹೇಳಿದ ಉದ್ದೇಶವೇ ಬೇರೆ. ಆದ್ರೆ ಕಾಂಗ್ರೆಸ್ ಅವರ ಹೇಳಿಕೆಯನ್ನು ತಿರುಚಿ ವಿವಾದ ಮಾಡಲು ಯತ್ನಿಸುತ್ತಿದೆ. ನಾರಾಯಣಸ್ವಾಮಿ ಹೇಳಿಕೆಯನ್ನ ಬೇರೆಯದೇ ರೀತಿಯಲ್ಲಿ ಅರ್ಥೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಲಿತ ನಾಯಕ ನಾರಾಯಣಸ್ವಾಮಿಗೆ ಬೆದರಿಕೆ ಹಾಕ್ತಿದ್ದೀರಾ?

ನಿಮ್ಮನ್ನು ನಂಬಿ ವರ್ಷಗಳಿಂದ ದಲಿತರು ಕಾಂಗ್ರೆಸ್‌ ಬೆಂಬಲಿಸುತ್ತಾ ಬಂದಿದ್ದಾರೆ. ಇಷ್ಟಾದರೂ ನಿಮ್ಮ ಯೋಗ್ಯತೆಗೆ ಕಾಂಗ್ರೆಸ್‌ನಲ್ಲಿ ಒಬ್ಬ ದಲಿತನನ್ನು ಮುಖ್ಯಮಂತ್ರಿ ಮಾಡಲು ಆಗಲಿಲ್ಲ. ಈಗ ದಲಿತ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಬೆದರಿಕೆ ಹಾಕ್ತಿದ್ದೀರಾ? ಡಿಕೆ, ಬಿಕೆ ಇಬ್ಬರಿಗೂ ಹೇಳ್ತೀನಿ, ಅವರ ಜೊತೆ ಕೈ ಜೋಡಿಸಿರೋ ಪಿಕೆ(ಪ್ರಿಯಾಂಕ್ ಖರ್ಗೆ)ಗೂ ಹೇಳ್ತಿನಿ, ಇಂಥ ಆಟಾಟೋಪವನ್ನು ಕೂಡಲೇ ನಿಲ್ಲಿಸಿ. ಇನ್ನು ಒಂದೂವರೆ ವರ್ಷ ಅಷ್ಟೇ ಇರೋದು. 2027 ಕಳೆದ ಕೂಡಲೇ ನೀನು ನಿಮ್ಮ ಬಂಗಲೆ ಖಾಲಿ ಮಾಡೋಕೆ ತಯಾರಿ ಮಾಡ್ಕೊಳ್ಳಿ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.