ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರನ್ನು 'ಬಲಿತ ದಲಿತ' ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಯುವ ಕಾಂಗ್ರೆಸ್ ಬೆಂಗಳೂರಿನಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಿ ಖಡಕ್ ತಿರುಗೇಟು ನೀಡಿದೆ.
ಬೆಂಗಳೂರು (ನ.08): ರಾಜ್ಯ ರಾಜಕೀಯದಲ್ಲಿ ನಾಯಕರ ನಡುವಿನ ವಾಕ್ಸಮರ ಹಾಗೂ ಆರೋಪ-ಪ್ರತ್ಯಾರೋಪಗಳ ಪರ್ವ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಬೀದಿ ಕಾಳಗಕ್ಕೆ ತಿರುಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು 'ಬಲಿತ ದಲಿತ' ಎಂದು ಸಂಭೋದಿಸಿದ್ದ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ (KPYCC) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬೆಂಗಳೂರಿನಾದ್ಯಂತ ಪ್ರತ್ಯುತ್ತರ ಬ್ಯಾನರ್ ಅಳವಡಿಸಿ ತಿರುಗೇಟು ನೀಡಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಖರ್ಗೆ ಕುಟುಂಬ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದರು. ಈ ವೇಳೆ ಪ್ರಿಯಾಂಕ್ ಖರ್ಗೆ ಅವರನ್ನು 'ಬಲಿತ ದಲಿತ' ಎಂದು ಕರೆಯುವ ಮೂಲಕ ಮೀಸಲಾತಿ ಹಾಗೂ ಖರ್ಗೆ ಕುಟುಂಬದ ರಾಜಕೀಯ ಬೆಳವಣಿಗೆಯನ್ನು ಪ್ರಶ್ನಿಸಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆ ದಲಿತ ಸಮುದಾಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು.
ಬೆಂಗಳೂರಿನ ಹಲವೆಡೆ ಪ್ರತ್ಯುತ್ತರ ಬ್ಯಾನರ್‌ಗಳ ರಾರಾಜಿಸು:
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು, ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡುವ ರೀತಿಯ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.
ಬ್ಯಾನರ್‌ಗಳಲ್ಲಿ, "ಹೌದು, ನಾವು ಬಲಿತ ದಲಿತನೇ ಸುಮಾರಣ್ಣ... ನಾನು ಬೆಳೆದಿದ್ದು ನಮ್ಮ ಸಂವಿಧಾನ ಮತ್ತು ಕಾಂಗ್ರೆಸ್‌ನಿಂದಲೇ ಹೊರತು ನಿಮ್ಮ ಮನೆಯ ಆಲೂಗಡ್ಡೆಯಿಂದಲ್ಲ" ಎಂಬ ಖಡಕ್ ಹಾಗೂ ವ್ಯಂಗ್ಯಾತ್ಮಕ ಸಂದೇಶವನ್ನು ಮುದ್ರಿಸಲಾಗಿದೆ.
ರಾಜಕೀಯ ಸಂಘರ್ಷ ತೀವ್ರ:
ಯುವ ಕಾಂಗ್ರೆಸ್‌ನ ಈ ಹೊಸ ಮಾದರಿಯ ಪ್ರತಿಭಟನೆ ಹಾಗೂ ಬ್ಯಾನರ್ ಸಮರವು ಬೆಂಗಳೂರಿನಲ್ಲಿ ಭಾರಿ ಗಮನ ಸೆಳೆದಿದೆ. ಸಂವಿಧಾನ ನೀಡಿದ ಹಕ್ಕು ಮತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಂದ ನಾವು ಬೆಳೆದಿದ್ದೇವೆಯೇ ಹೊರತು, ಯಾರೊಬ್ಬರ ಹಂಗಿನಿಂದ ಅಲ್ಲ ಎಂಬುದನ್ನು ಬ್ಯಾನರ್ ಮೂಲಕ ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ಯುವ ಕಾಂಗ್ರೆಸ್ ನೀಡಿರುವ ಈ ತಿರುಗೇಟು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಟಾಪಟಿಯನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ. ಈ ಬ್ಯಾನರ್ ಸಮರಕ್ಕೆ ಜೆಡಿಎಸ್ ನಾಯಕರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.














