ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಚಾಕು ಮತ್ತು ಚೂರಿಗಳನ್ನು ಪಾರ್ಸೆಲ್ ಮೂಲಕ ಕಳುಹಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಘಟನೆ ಖಂಡಿಸಿ ಬಿಜೆಪಿ ನಿಯೋಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೆ 20 ಮೊಬೈಲ್ ಸಂಖ್ಯೆಗಳಿಂದ ಚಾಕು, ಚೂರಿ ಬುಕ್ ಮಾಡಿ ಕಳುಹಿಸಿದ್ದ ಎನ್‌ಎಸ್‌ಯುಐ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಬಿಜೆಪಿ ನಾಯಕರ ನಿಯೋಗ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ದೂರು ನೀಡಿದೆ.
ಬೆಂಗಳೂರು (ನ.8): ಮಾತಿನ ಭರದಲ್ಲಿ ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಣಸ್ವಾಮಿ(Chalavadi Narayanaswamy) ಅವರ ಸರ್ಕಾರಿ ನಿವಾಸದ ವಿಳಾಸಕ್ಕೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಕಾರ್ಯಕರ್ತರು ಬ್ಲಿಂಕಿಟ್‌ನಲ್ಲಿ ಚಾಕುಗಳ ಪಾರ್ಸೆಲ್ ಕಳುಹಿಸಿರುವ ಘಟನೆ ಶನಿವಾರ ನಡೆದಿದೆ.
ಪೊಲೀಸ್ ಆಯುಕ್ತರಿಗೆ ದೂರು, ಚಾಕು ಚೂರಿ ಕಳಿಸಿದ್ಯಾರು?
ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಪ್ರಮುಖ ನಾಯಕರ ನಿಯೋಗ ಶನಿವಾರ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಒಂಬತ್ತು ವ್ಯಕ್ತಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ಸಹಿತ ದೂರು ನೀಡಿದೆ.
ಸುಮಾರು 20 ಮೊಬೈಲ್ ಸಂಖ್ಯೆಗಳಿಂದ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು, ಚೂರಿ ವಸ್ತುಗಳನ್ನು ಬುಕ್ ಮಾಡಿದ್ದ ಎನ್‌ಎಸ್‌ಯುಐನ ಗೂಂಡಾಗಳ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಆಗ್ರಹಿಸಿದೆ.
ಕೆಪಿಸಿಸಿ ಅಧ್ಯಕ್ಷ, ಗೃಹಮಂತ್ರಿಯೇ ನೇರ ಕಾರಣ
ಎನ್‌ಎಸ್‌ಯುಐ ಹುಡುಗರು ಸುಮಾರು 20 ಮೊಬೈಲ್ ನಂಬರ್‌ಗಳಿಂದ ಚಾಕು, ಚೂರಿ ಮಾರಕವಸ್ತುಗಳನ್ನು ಛಲವಾದಿ ನಾರಾಯಣಸ್ವಾಮಿ ಅವರ ವಿಳಾಸಕ್ಕೆ ಬುಕ್ ಮಾಡಿದ್ದರು. ಸುಮಾರು 10 ಮಂದಿ ಕಾಂಗ್ರೆಸ್ ಪಕ್ಷದ ನಾಯಕರು ಛಲವಾದಿ ಅವರ ಮನೆ ಬಳಿ ಬಂದು ಗೇಟ್ ಸುತ್ತುವರಿದು ಭಯ ಹುಟ್ಟಿಸಿದ್ದಾರೆ. ಗೂಂಡಾ ಸಂಸ್ಕೃತಿಯ ಎನ್‍ಎಸ್‍ಯುಐ ಕಾರ್ಯಕರ್ತರು ಇಂಥ ಕೆಲಸಗಳಲ್ಲಿ ತೊಡಗಲು ಕುಮ್ಮಕ್ಕು ನೀಡಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳೇ ನೇರ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೆಪಿಸಿಸಿ ಕಾರ್ಯದರ್ಶಿ ಮನೋಹರ್ ಮತ್ತು ಸಹಚರರು ಸಾಕಷ್ಟು ಬಾರಿ ಮನೆ ಎದುರು ಪ್ರತಿಭಟನೆ ಮಾಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಮನೆ ಅಕ್ಕ-ಪಕ್ಕದಲ್ಲಿ ಅನೇಕ ಮಂತ್ರಿಗಳ ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮನೆಗಳಿವೆ. ಆನ್‍ಲೈನ್ ವ್ಯವಹಾರಿಕ ಸಂಸ್ಥೆ ಬ್ಲಿಂಕಿಟ್ ಯಾವುದೇ ವಸ್ತುಗಳನ್ನು ಪಾರ್ಸಲ್ ಮಾಡುವ ಮುಂಚೆ ಪರಿಶೀಲಿಸಬೇಕು. ಆದರೆ, ಅದ್ಯಾವುದನ್ನೂ ಪರಿಶೀಲಿಸದೆ ಮಾರಕ ವಸ್ತುಗಳನ್ನು ಪಾರ್ಸೆಲ್ ಕೊಟ್ಟಿರುವುದು ಸಂಸ್ಥೆ ಬಗ್ಗೆ ಸಂಶಯ ಮೂಡಿಸಿದೆ. ಹೀಗಾಗಿ ಈ ಸಂಸ್ಥೆಯ ಪರವಾನಗಿ ರದ್ದುಪಡಿಸಬೇಕು. ಮಾರಕಾಸ್ತ್ರ ಬುಕ್ ಮಾಡಿ ಭಯದ ವಾತಾವರಣ ಸೃಷ್ಟಿಸಿದವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ಇವರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಛಲವಾದಿ ಮನೆಗೆ ಬಿವೈವಿ ಭೇಟಿ:
ಇದಕ್ಕೂ ಮುನ್ನ ಚಾಕು ಪಾರ್ಸೆಲ್ ವಿಚಾರ ತಿಳಿದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿಗರ ಪಾಪದ ಕೊಡ ತುಂಬಿದೆ. ನಿಮ್ಮ ಈ ಅಹಂಕಾರ, ದುರಹಂಕಾರ, ಅಧಿಕಾರದ ಮದವನ್ನು ರಾಜ್ಯದ ಜನ ಶೀಘ್ರದಲ್ಲೇ ಇಳಿಸಲಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೊತ್ವಾಲ್ ಶಿಷ್ಯರು ಇದ್ದಾರೆ
ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು-ಚೂರಿಗಳನ್ನು ಕಳಿಸುವ ಮುಖಾಂತರ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಸಂಸ್ಕೃತಿ ಮತ್ತೊಮ್ಮೆ ಅನಾವರಣಗೊಂಡಿದೆ. ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ ಎಂಬುದನ್ನು ದೇಶದ ಜನತೆಗೆ ತೋರಿಸಿಕೊಟ್ಟಿದ್ದಾರೆ. ಕೊತ್ವಾಲ್ ರಾಮಚಂದ್ರನ ಜತೆಯಲ್ಲಿ ಗೂಂಡಾಗಿರಿ ಮಾಡಿಕೊಂಡು ಬಂದವರು ಕಾಂಗ್ರೆಸ್ ಪಕ್ಷದ ವ್ಯವಸ್ಥೆ ಹಾಗೂ ಸರ್ಕಾರದಲ್ಲೂ ಇದ್ದಾರೆ. ಹುಟ್ಟುಗುಣ ಸುಟ್ಟರೂ ಹೋಗಲ್ಲ ಎನ್ನುವಂತೆ ಇವರ ವರ್ತನೆ ಇದೆ. ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಅವರ ಗೂಂಡಾವರ್ತನೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ವೈಫಲ್ಯ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಳೆದ ಮೂರೂವರೆ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕೇಳುವವರೇ ಇಲ್ಲದಂತಾಗಿದೆ. ರೌಡಿಗಳು ಮಚ್ಚು, ಲಾಂಗ್‌ಗಳನ್ನು ಹಿಡಿಯುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಈ ಕಾಂಗ್ರೆಸ್‌ನವರು ಚಾಕು-ಚೂರಿ, ಮುಚ್ಚುಗಳನ್ನು ಪಾರ್ಸೆಲ್ ಕಳುಹಿಸುತ್ತಾರೆ ಎಂದರೆ, ಪೊಲೀಸ್ ವೈಫಲ್ಯವಾಗಿದೆ. ಪೊಲೀಸರು ಆ ಕಾಂಗ್ರೆಸ್ಸಿಗರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂತಹವರ ವಿರುದ್ಧ ಕ್ರಮ ವಹಿಸಬೇಕು. ಇಲ್ಲವಾದರೆ, ಇದು ಗೂಂಡಾಗಳ ಸರ್ಕಾರ ಎಂದು ಎಲ್ಲ ಕಡೆ ಪೋಸ್ಟರ್ ಅಂಟಿಸುವ ಅಭಿಯಾನ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಡಬಾರದೆಂದು ನಾವು ಸುಮ್ಮನಿದ್ದೇವೆ. ಆದರೆ ಕಾಂಗ್ರೆಸ್‌ನವರು ಜಿರಳೆ ಪಾರ್ಟಿ ಜೊತೆ ಸೇರಿಕೊಂಡು ಜಿರಳೆಗಳಂತೆ ವರ್ತಿಸಿದರೆ ಅದಕ್ಕೆ ತಕ್ಕಂತೆ ಹಿಟ್ ಹೊಡೆಯುವುದು ನಮಗೂ ತಿಳಿದಿದೆ ಎಂದು ಎಚ್ಚರಿಸಿದರು.
ಕೊತ್ವಾಲ್ ಸಂಸ್ಕೃತಿ ಮೊದಲು ಬಿಡಿ: ಛಲವಾದಿ
ಬೆಂಗಳೂರು: ಕೊತ್ವಾಲ್ ಸಂಸ್ಕೃತಿ ಮೊದಲು ಬಿಡಬೇಕು. ಎಷ್ಟು ಓದಿದರೇನು? ಎಷ್ಟು ಬುದ್ಧಿ ಇದ್ದರೇನು? ಮೊದಲು ಸಂಸ್ಕೃತಿ ಕಲಿತುಕೊಳ್ಳಿ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊತ್ವಾಲ್ ಅವರು ಈಗಿಲ್ಲ. ವಿಪರ್ಯಾಸ ಎಂದರೆ, ಕೊತ್ವಾಲ್ ಸಂಸ್ಕೃತಿ ಇನ್ನೂ ಬದುಕಿದೆ ಎಂಬುದಕ್ಕೆ ಈಗ ಜೀವಂತ ಉದಾಹರಣೆ ಅಥವಾ ಸಾಕ್ಷಿ ಸಿಗುತ್ತಿದೆ. ಮೊನ್ನೆ ಕೋಲಾರದಲ್ಲಿ ಮಾತನಾಡುವಾಗ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಇದೇ ರೀತಿ ಅರಾಜಕತೆ ಸೃಷ್ಟಿ ಮಾಡಿದರೆ, ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಹಾಕುತ್ತಾರೆ ಎಂದು ಹೇಳಿದ್ದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ಶರದ್ ಪವಾರ್, ಮಮತಾ ಬ್ಯಾನರ್ಜಿ ತುಂಡು ಮಾಡಿದ್ದರು. ನಿಜಲಿಂಗಪ್ಪ, ಬಂಗಾರಪ್ಪ ಗುಂಡೂರಾಯರ ಕಾಲದಲ್ಲೂ ತುಂಡಾಗಿದೆ. ದೇವರಾಜ ಅರಸರ ಕಾಲದಲ್ಲೂ ತುಂಡಾಗಿದೆ. ತುಂಡು ತುಂಡಾಗುವುದು ಕಾಂಗ್ರೆಸ್ಸಿಗೆ ಹೊಸದೇನೂ ಅಲ್ಲ. ನಾನೇ ತುಂಡು ಮಾಡುತ್ತೇನೆ ಎಂದು ಹೇಳಿಲ್ಲ. ದೇಶದ ಜನ ಮಾಡಲಿದ್ದಾರೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಹಣ ಪಾವತಿ ಕಳಿಸಬಹುದಿತ್ತು:
ಚಾಕು-ಚೂರಿ ಸಂಸ್ಕೃತಿ ಯಾರದು ಎಂಬುದು ದೇಶಕ್ಕೆ ಗೊತ್ತಿತ್ತು, ಈಗ ಮತ್ತೊಮ್ಮೆ ಸಾಬೀತಾಗಿದೆ. ಕೊತ್ವಾಲ್ ಸಂಸ್ಕೃತಿ ಕಾಂಗ್ರೆಸ್ ನಲ್ಲಿ ಬದುಕಿದೆ, ಚಾಕು-ಚೂರಿಯನ್ನು ಹಣ ಪಾವತಿಸಿ ಕಳಿಸಬಹುದಿತ್ತು. ನಮಗೆ ತರಕಾರಿ ಕತ್ತರಿಸಲು ಆಗುತ್ತಿತ್ತು. ಅದಕ್ಕೆ ಹಣನೂ ಕೊಟ್ಟಿಲ್ಲ. ಪುಕ್ಕಟೆ ಫೋನ್ ಮಾಡಿ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್, ನಂಬರ್ ಸಿಕ್ಸ್, ಛಲವಾದಿ ನಾರಾಯಣಸ್ವಾಮಿ ಎಂದು ವಿಳಾಸಕ್ಕೆ ಹಾಕಿ ಕಳಿಸಿದ್ದಾರೆ. ಎನ್‍ಎಸ್‍ಯುಐನ ಇಬ್ಬರು ಹುಡುಗರು ಅಲ್ಲಿ ನಿಂತು ‘ಹೋಗಿ ಹೋಗಿ ಒಳಗಡೆ, ಕೊಟ್ಟು ಹೋಗಿ’ ಅಂತ ಕಳಿಸುತ್ತಿದ್ದಾರೆ. ಏನು ಸಾಧಿಸಲು ಹೊರಟ್ಟಿದ್ದೀರಿ? ಗೂಂಡಾ ಸಂಸ್ಕೃತಿ, ಕೊಲೆಗಡುಕರ ಸಂಸ್ಕೃತಿ ಈ ಕಾಂಗ್ರೆಸ್ ಮರೆತೇ ಇಲ್ಲ ಎಂದು ಛಲವಾದಿ ವಾಗ್ದಾಳಿ ನಡೆಸಿದರು.
ಇದರಿಂದ ನೀವು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವೇ? ನಿಮ್ಮ ಚಾಕು-ಚೂರಿಗೆ ನಾವು ಹೆದರಲ್ಲ. ಯಾರೋ ಕೆಲ ನಕಲಿ ದಲಿತರು ‘ನಂದು ಅಂಬೇಡ್ಕರ್ ರಕ್ತ'' ಅಂತಾರಲ್ಲ, ನಿಜವಾದ ಅಂಬೇಡ್ಕರ್ ರಕ್ತ ಇಲ್ಲಿದೆ. ನಮಗೇನು ಅದರ ಭಯ ಇಲ್ಲ. ನಾವು ಸತ್ಯ ಹೇಳಲು ಎಂದಿಗೂ ಹಿಂಜರಿಯಲ್ಲ ಎಂದು ಛಲವಾದಿ ಗುಡುಗಿದರು.===
ನೀವು ಎಷ್ಟು ಚಾಕು-ಚೂರಿ ಕಳಸುತ್ತಿರೋ ಕಳಿಸಿ. ಆದರೆ ದುಡ್ಡು ಕೊಟ್ಟು ಕಳುಹಿಸಿ. ನಾನು ಅವುಗಳಿಗೆ ಫ್ರೇಮ್ ಹಾಕಿಸಿ ಮನೆ ಬಾಗಿಲಲ್ಲಿ ‘ಕಾಂಗ್ರೆಸ್ ಕೊಡುಗೆ’ ಎಂದು ಇರಿಸುವೆ.
- ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ














