ಕಾಂಗ್ರೆಸ್ ನಾಯಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕೊಲೆಗೆ ಪ್ರಚೋದನೆ ನೀಡುವಂತಹ ಮಾತುಗಳನ್ನಾಡಿದರೆ ಕಾನೂನು ಕ್ರಮ ಕೈಗೊಂಡು ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.5): ‘ಬಿಜೆಪಿ ನಾಯಕರದ್ದು ಅತಿಯಾಗುತ್ತಿದೆ. ಕಾಂಗ್ರೆಸ್‌ನವರನ್ನು ಕಡಿಯುತ್ತೇವೆ, ಬಡಿಯುತ್ತೇವೆ ಎಂದರೆ ಸುಮ್ಮನಿರಲ್ಲ. ಸಂವಿಧಾನ, ಕಾನೂನಿನ ಶಕ್ತಿಯನ್ನು ತೋರಿಸಿ ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖರ್ಗೆ ಕಿಡಿ

‘ಬಿಜೆಪಿಯವರು ಕಾಂಗ್ರೆಸ್‌ ನಾಯಕರನ್ನು ಕಡಿದು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂಬ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ನಾರಾಯಣ ಸ್ವಾಮಿಯವರ ನಾಲಿಗೆಗೂ, ಮೆದುಳಿಗೂ ಸಂಪರ್ಕವಿಲ್ಲ. ಆರ್‌ಎಸ್ಎಸ್ ಚಡ್ಡಿಯನ್ನು ತಲೆ ಮೇಲೆ ಹೊತ್ತುಕೊಂಡು ಸರ್ವಜ್ಞ ಎಂದುಕೊಂಡಿದ್ದಾರೆ. ಇವರದ್ದು ಅತಿಯಾಗುತ್ತಿದೆ. ಉತ್ತರ ಪ್ರದೇಶ ಅಥವಾ ಗುಜರಾತ್‌ನಲ್ಲಿ ಆಡಿದಂತೆ ಆಡಲು ಬಿಡುವುದಿಲ್ಲ. ಇದು ಕೊಲೆಗೆ ಪ್ರಚೋದನೆ, ಹೀಗಾಗಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ನನ್ಮಕ್ಕಳು..’ ವಿಜಯೇಂದ್ರ ಹೇಳಿಕೆಗೂ ಕಿಡಿ

ಕೆಲವು ದಿನಗಳ ಹಿಂದೆ ಬಿ.ವೈ.ವಿಜಯೇಂದ್ರ‌ ಅವರು ‘ಕಾಂಗ್ರೆಸ್ ನನ್ಮಕ್ಕಳು’ ಎಂದು ಹೇಳಿದ್ದಾರೆ. ಈ ಹಿಂದೆ ಇದೇ ಛಲವಾದಿ ನಾರಾಯಣಸ್ವಾಮಿ ಕಲಬುರಗಿಗೆ ಬಂದು ನನ್ನನ್ನು ‘ನಾಯಿ’ ಎಂದಿದ್ದರು. ಬಳಿಕ ‘ನಾಯಿ ನಾರಾಯಣ’ ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗಲೂ ನಾನು ಆ ರೀತಿ ಹೇಳಿಲ್ಲ, ಈ ರೀತಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ ಸ್ಪಷ್ಟನೆ ನೀಡಿದರೆ ಆಗುತ್ತದೆಯೇ?. ಬಿಜೆಪಿಯವರದು ದಿನದಿಂದ ದಿನಕ್ಕೆ ಅತಿಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಕಂಬಿ ಎಣಿಸಬೇಕಾಗುತ್ತದೆ ಎಂದು ಕಿಡಿ ಕಾರಿದರು.

ಇವರಿಗೆ ಬೆಳಗ್ಗೆ ಆರ್‌ಎಸ್‌ಎಸ್‌ನಿಂದ ವಾಟ್ಸಾಪ್‌ ಸಂದೇಶ ಬರುತ್ತದೆ. ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡು, ಪ್ರಿಯಾಂಕ್ ಖರ್ಗೆ ವಿರುದ್ದ ಮಾತನಾಡು ಎಂಬ ಸೂಚನೆ ಮೇರೆಗೆ ಇವರು ಮಾತನಾಡುತ್ತಾರೆ ಎಂದು ಖರ್ಗೆ ದೂರಿದರು.

ಬನ್ನಿ, ಅರೆಸ್ಟ್‌ ಮಾಡಿ: ಖರ್ಗೆಗೆ ಅಶೋಕ್‌ ಸವಾಲು

‘ಬನ್ನಿ, ಅರೆಸ್ಟ್ ಮಾಡಿ. ನಾನೇ ರೆಡ್ ಕಾರ್ಪೆಟ್‌ ಹಾಕುತ್ತೇನೆ’ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿಯವರು ಹೊಡಿತೀವಿ, ಬಡಿತೀವಿ ಎಂದರೆ ಅವರನ್ನು ಜೈಲಿಗೆ ಹಾಕ್ತೀವಿ ಎಂಬ ಪ್ರಿಯಾಂಕ್‌ ಹೇಳಿಕೆಗೆ ತಿರುಗೇಟು ನೀಡಿ, ನೀವೇನು ತುರ್ತು ಪರಿಸ್ಥಿತಿ ಹೇರುತ್ತೀರಾ?. ನಿಮ್ಮ ರಾಹುಲ್ ಗಾಂಧಿ ಅಜ್ಜಿ ವಿರುದ್ಧ ಘೋಷಣೆ ಕೂಗಿ ಜೈಲಿಗೆ ಹೋಗಿದ್ದವನು ನಾನು. ಏನು ನನ್ನನ್ನು ಭಯಪಡಿಸುತ್ತೀರಾ?. ಬನ್ನಿ ನೋಡೊಣ ಬಂಧಿಸಿ ಎಂದು ಹರಿಹಾಯ್ದರು. ನಿಮ್ಮ ಅಧಿಕಾರ ಒಂದು ವರ್ಷ ಇದೆ ಅಷ್ಟೇ. ಏನು ಅಂತ ಹಾರಾಡುತ್ತೀರಿ. ಆಮೇಲೆ ಖಾಲಿ ಚೊಂಬು ಹಿಡಿದುಕೊಂಡು ಹೋಗಬೇಕು ಎಂದು ಕಿಡಿಕಾರಿದರು.