ಹೆಂಡದ ಅಂಗಡಿ ಎದುರು ಕುಳಿತು ಮಾತನಾಡುವವರ ರೀತಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ.. ಕೆಪಿಎಸ್ಸಿ ನೇಮಕಾತಿ ಅಕ್ರಮ ಇಡಿ ದಾಳಿಯ ಕುರಿತು ಪ್ರಶ್ನಿಸಿ, ರಾಜ್ಯ ಸರ್ಕಾರ ಹಗರಣ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು (ನ.8): ಸಂಜೆ ಹೆಂಡದ ಅಂಗಡಿ ಎದುರು ಕುಳಿತು ಮಾತನಾಡುವವರ ರೀತಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ. ಅವರ ಮಾತುಗಳಿಗೆ ನಾನು ಉತ್ತರ ಕೊಡಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
KPSC ಹಗರಣದ ಪಿತಾಮಹ ನಾನಾ? ನೀನಾ?
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಎಸ್ಸಿ ಹಗರಣದ ಪಿತಾಮಹ ನಾನು ಎಂದು ಗೃಹ ಸಚಿವರು ಹೇಳಿದ್ದಾರೆ. ಈಗ ಅವರೇ ಸಿಐಡಿ, ಎಸ್ಐಟಿ ತನಿಖೆ ಮಾಡಿಸುತ್ತಿದ್ದಾರೆ. ನಾನು ಎಷ್ಟು ಜನರ ಬದುಕು ಹಾಳು ಮಾಡಿದ್ದೇನೆ ಎಂಬ ಮಾಹಿತಿ ಇದ್ದರೆ ಇಡಪ್ಪಾ.... ಹೆಂಡದ ಅಂಗಡಿ ಮುಂದೆ ಮಾತನಾಡುವವರ ಹಾಗೆ ಮಾತನಾಡಿದರೆ ನಾನು ಉತ್ತರ ಕೊಡುವುದಿಲ್ಲ ಎಂದು ತಿರುಗೇಟು ನೀಡಿದರು.
ದಾಖಲೆ ಕೊಟ್ಟಿದ್ದೇನೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 24 ಎಇಇ ಹುದ್ದೆಗಳಿಗೆ ಕೆಪಿಎಸ್ಸಿ ಮುಖಾಂತರ ನಡೆದ ನೇಮಕಾತಿ ಅಕ್ರಮದ ಬಗ್ಗೆ ನಾನು ದಾಖಲೆ ಕೊಟ್ಟಿದ್ದೇನೆ. ನಿಮ್ಮ ವ್ಯಾಪ್ತಿಯಲ್ಲೇ ಈ ಅಕ್ರಮ ನಡೆದಿದೆ. ಈ ಬಗ್ಗೆ ಈವರೆಗೂ ಉತ್ತರ ಕೊಡುವ ಯೋಗ್ಯತೆ ಇಲ್ಲದ ವ್ಯಕ್ತಿ ಈ ಗೃಹ ಸಚಿವ. ಈ ವ್ಯಕ್ತಿ ಬಗ್ಗೆ ನಾನೇನು ಮಾತನಾಡಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜ್ಞಾನೇಶ್ ಕುಮಾರ್ ಯಾರು? ಆತನನ್ನು ನೇಮಕ ಮಾಡಿದ್ದು ನೀವೇ ಅಲ್ಲವೇ
ನನ್ನಿಂದ ಈ ರಾಜ್ಯಕ್ಕೆ ಏನು ಅನ್ಯಾಯವಾಗಿದೆ? 2006-7ನೇ ಸಾಲಿನಲ್ಲಿ ನಾನು 56 ಸಾವಿರ ಶಿಕ್ಷಕರ ನೇಮಕಾತಿ ಮಾಡಿದೆ. ಈ ಮುಖಾಂತರ 56 ಸಾವಿರ ಕುಟುಂಬಗಳಿಗೆ ಕೆಲಸ ಕೊಟ್ಟಿದ್ದೇನೆ. ಇದರಲ್ಲಿ ಒಂದು ಹಗರಣ ಆಯಿತಾ? ನನ್ನ ಮೇಲೆ ಯಾವ ಹಗರಣ ಇದೆ? ಈ ಶಿವಶಂಕರಪ್ಪ ಸಾಹುಕಾರ್ನನ್ನು ಕೆಪಿಎಸ್ಸಿಯಲ್ಲಿ ಏಕೆ ಇರಿಸಿಕೊಂಡಿದ್ದೀರಾ? ಕೆಪಿಎಸ್ಸಿಗೆ 18 ಜನ ಸದಸ್ಯರನ್ನು ನೇಮಿಸಿದ್ದು ಯಾರು? ಯಾವ ಆಧಾರದ ಮೇಲೆ ಇವರನ್ನು ಸದಸ್ಯರನ್ನಾಗಿ ನೇಮಿಸಿದ್ದೀರಿ? ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಮಾಡಿದ್ದು ನಾನಾ ಎಂದು ಪ್ರಶ್ನಿಸಿದ ಅವರು, ನಿಮ್ಮ ಸರ್ಕಾರ, ನಿಮ್ಮ ಸುಪರ್ದಿಯಲ್ಲೇ ಮಾಡಿದ್ದು. ಜ್ಞಾನೇಶ್ ಕುಮಾರ್ ಯಾರು? ಆತನನ್ನು ನೇಮಕ ಮಾಡಿದ್ದು ನೀವೇ ಅಲ್ಲವೇ ಎಂದು ಹರಿಹಾಯ್ದರು.
ಇ.ಡಿ.ಯಿಂದಾಗಿ ಬಯಲು:
ಇ.ಡಿ. ದಾಳಿ ಮಾಡಿ ಹಗರಣ ಹೊರಗೆ ತೆಗೆಯದಿದ್ದರೆ, ಈ ಸರ್ಕಾರ ಹಗರಣವನ್ನೇ ಮುಚ್ಚಿ ಹಾಕುತ್ತಿತ್ತು. ಇ.ಡಿ. ದಾಳಿ ಮಾಡಿ ಅಕ್ರಮ ಆಚೆ ತೆಗೆದ ಬಳಿಕ ಈ ಸರ್ಕಾರ ಕಣ್ಣು ತೆರೆದಿದೆ. ಸಿಐಡಿ ತನಿಖೆ ನಡೆಸುತ್ತಿರುವುದೇಕೆ? ಅಕ್ರಮವನ್ನು ಮುಚ್ಚಿ ಹಾಕಲು ಅಲ್ಲವೇ? ಯಾವ ಯುವಕರಿಗೆ ನ್ಯಾಯ ಕೊಡಿಸಲು ಸಿಐಡಿ ತನಿಖೆ ಮಾಡಿಸುತ್ತಿರುವಿರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.














