ತೆಲಂಗಾಣದ ಮಹಾಲಕ್ಷ್ಮಿ ಉಚಿತ ಬಸ್ ಪ್ರಯಾಣ ಯೋಜನೆಯ ಪರಿಶೀಲನೆ ವೇಳೆ ಇಬ್ರಾಹಿಂಪಟ್ಟಣಂ ಕಾಂಗ್ರೆಸ್ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ ಯುವತಿಯೊಬ್ಬಳನ್ನು ಅಸಹ್ಯವಾಗಿ ಸ್ಪರ್ಶಿಸಿರುವ ವಿಡಿಯೋ ವೈರಲ್ ಆಗಿದೆ. ಶಾಸಕನ ಈ ಅನುಚಿತ ವರ್ತನೆಗೆ ಸಾರ್ವಜನಿಕರು ಮತ್ತು ವಿರೋಧ ಪಕ್ಷದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಹೈದರಾಬಾದ್: ಗ್ಯಾರೆಂಟಿ ಯೋಜನೆಯ ಅನುಷ್ಠಾನದ ವೇಳೆಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಜಿಎಸ್‌ಆರ್‌ಟಿಸಿ) ಬಸ್‌ನಲ್ಲಿ ಇಬ್ರಾಹಿಂಪಟ್ಟಣಂ ಕಾಂಗ್ರೆಸ್ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ ಯುವತಿಯೊಬ್ಬಳನ್ನು ಅಸಹ್ಯವಾಗಿ ಪದೇ ಪದೇ ಸ್ಪರ್ಶಿಸುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಜನರು ಶಾಸಕನಿಗೆ ಛೀಮಾರಿ ಹಾಕುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ನಂತರ ವಿವಾದ ಭುಗಿಲೆದ್ದಿದೆ. ಇದರಿಂದ ತೆಲಂಗಾಣ ಸರ್ಕಾರ ಮುಜುಗರಕ್ಕೆ ಈಡಾಗಿದೆ.

ಮಹಿಳೆಯರು, ಹುಡುಗಿಯರು ಮತ್ತು ಟ್ರಾನ್ಸ್‌ಜೆಂಡರ್‌ಗಳಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ರಾಜ್ಯ ಸರ್ಕಾರದ ಪ್ರಮುಖ ಮಹಾಲಕ್ಷ್ಮಿ ಉಚಿತ ಸವಾರಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಹನ ನಡೆಸಲು ಬಸ್​ ಹತ್ತಿರುವ ಈ ಶಾಸಕರು ಇಂಥ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ವೈರಲ್​ ಆಗಿರುವ ಈ ವಿಡಿಯೋದಲ್ಲಿ, 70 ವರ್ಷದ ಶಾಸಕರು ಬಸ್ ಒಳಗೆ ನಿಂತಿದ್ದ ಯುವತಿಯ ಕೈಯನ್ನು ಪದೇ ಪದೇ ಸ್ಪರ್ಶಿಸುತ್ತಾ, ಮಹಿಳಾ ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಿರುವುದನ್ನು ತೋರಿಸಲಾಗಿದೆ.

ಯುವತಿಗೆ ಮುಜುಗರ

ಈ ಯೋಜನೆಯು ತನಗೆ ₹45,000 ಉಳಿಸಲು ಸಹಾಯ ಮಾಡಿದೆ ಎಂದು ಹೇಳಿದ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಸಂವಹನ ನಡೆಸುವಾಗ, ಇಬ್ರಾಹಿಂಪಟ್ಟಣ ಶಾಸಕ ರೆಡ್ಡಿ ಆಕೆಯ ಜೊತೆ ಅನುಚಿತವಾಗಿ ವರ್ತಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಿದ್ಯಾರ್ಥಿನಿಯ ಕೈ ಹಿಡಿದಾಗ ಆಕೆ ಮುಜುಗರದಿಂದ ದೂರ ಸರಿಯಲು ಪ್ರಯತ್ನಿಸುವುದನ್ನು ನೋಡಬಹುದಾಗಿದೆ. ಪ್ರೀತಿಯಿಂದ ಯುವತಿಗೆ ಹೀಗೆ ಮಾಡಿರುವುದಾಗಿ ಶಾಸಕ ಸ್ಪಷ್ಟನೆ ಕೊಟ್ಟಿದ್ದರೂ, ಈ ವಿಡಿಯೋ ನೋಡಿದರೆ ಉದ್ದೇಶ ಬೇರೆಯದ್ದೇ ಇದೆ ಎನ್ನುವುದು ತಿಳಿಯುತ್ತದೆ ಎಂದು ಕಮೆಂಟ್ಸ್​ಗಳಿಗೆ ಜನರು ಟೀಕಿಸುತ್ತಿದ್ದಾರೆ.

ಟೀಕೆಗೆ ಗುರಿ

ಈ ಘಟನೆಯು ಅನೇಕರಿಂದ ಟೀಕೆಗೆ ಗುರಿಯಾಗಿದೆ. "ಕಾಂಗ್ರೆಸ್ ತನ್ನ ಪುರುಷ ನಾಯಕರಿಗೆ ಹುಡುಗಿಯರಿಂದ ದೂರವಿರಲು ತರಬೇತಿ ನೀಡಬೇಕಾಗಿದೆ. ಸಾಮಾನ್ಯ ಸಂಭಾಷಣೆಯ ಸಮಯದಲ್ಲಿ ಅವರನ್ನು ಪದೇ ಪದೇ ಮುಟ್ಟುವ ಅಗತ್ಯವಿಲ್ಲ. ಅವರ ವಯಸ್ಸು ಏನೇ ಇರಲಿ, ಹುಡುಗಿ ಅನಾನುಕೂಲತೆಯನ್ನು ಅನುಭವಿಸುತ್ತಿದ್ದಾಳೆ ಮತ್ತು ಈ ವ್ಯಕ್ತಿಗೆ ಒಪ್ಪಿಗೆಯ ಬಗ್ಗೆ ಯಾವುದೇ ಜ್ಞಾನವಿಲ್ಲ" ಎಂದು ಜನರು ಟೀಕೆ ಮಾಡುತ್ತಿದ್ದಾರೆ. ಇದೀಗ ರಾಜಕೀಯ ದಾಳವಾಗಿ ಬದಲಾಗಿದೆ.

ಘಟನೆಯನ್ನು ಖಂಡಿಸಿ, ಮಾಜಿ ಐಪಿಎಸ್ ಅಧಿಕಾರಿ ಮತ್ತು ರಾಜಕಾರಣಿ ಆರ್.ಎಸ್. ಪ್ರವೀಣ್ ಕುಮಾರ್ ಅವರು ಶಾಸಕಿಯ ಅನುಚಿತ ವರ್ತನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಭದ್ರತಾ ತಂಡಗಳು ಮತ್ತು ಮಹಿಳಾ ಭದ್ರತಾ ವಿಭಾಗಕ್ಕೆ ಕರೆ ನೀಡಿದರು. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಪಟ್ಲೋಲ್ಲಾ ಕಾರ್ತಿಕ್ ಇಂದ್ರ ರೆಡ್ಡಿ ಘಟನೆಗೆ ಪ್ರತಿಕ್ರಿಯಿಸುತ್ತಾ, "ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಬದಲು, ನಮ್ಮ ಸರ್ಕಾರ ಈ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು. ಸರ್ಕಾರ ಹಾಗೆ ಮಾಡಲು ವಿಫಲವಾದರೆ, ನಾವು ಇಬ್ರಾಹಿಂಪಟ್ಟಣದಲ್ಲಿ ನೇರವಾಗಿ ಪ್ರತಿಭಟನೆ ನಡೆಸುತ್ತೇವೆ" ಎಂದು ಹೇಳಿದರು.