ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ. ಈ ವೇಳೆ ಮೋದಿಯವರು ಎನ್‌ಡಿಎ ಮೈತ್ರಿ ಪಕ್ಷಗಳನ್ನು ನಡೆಸಿಕೊಳ್ಳುವ ರೀತಿಯನ್ನು ಶ್ಲಾಘಿಸಿರುವ ಅವರು, ವಿರೋಧ ಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ಇಂದು 25 ವರ್ಷಗಳನ್ನು ಪೂರೈಸಿದ್ದಾರೆ. ಗುಜರಾತ್​ ಮುಖ್ಯಮಂತ್ರಿಯಾಗಿ, ಬಳಿಕ 12 ವರ್ಷ ಪ್ರಧಾನಿಯಾಗಿ ಅವರು 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜಗತ್ತಿನ ವಿವಿಧ ನಾಯಕರು ಪ್ರಧಾನಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಹುತೇಕ ಎಲ್ಲಾ ದೇಶಗಳ ನಾಯಕರೂ, ದಿಗ್ಗಜರು, ವಿಭಿನ್ನ ಕ್ಷೇತ್ರಗಳ ಸೆಲೆಬ್ರಿಟಿಗಳು ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

ಅದೇ ರೀತಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶುಭಾಶಯ ಕೋರಿದ್ದು, ಅವರು ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮೈತ್ರಿ ಪಕ್ಷಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ. ಬಿಜೆಪಿಗೆ ಜೆಡಿಎಸ್​ ಸಾಥ್​ ಕೊಟ್ಟು ವರ್ಷಗಳೇ ಕಳೆದಿವೆ. ಎಚ್​.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿಯೂ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆಯೇ ಅವರು ನೀಡಿರುವ ಈ ಹೇಳಿಕೆ ಭಾರಿ ವೈರಲ್​ ಆಗುತ್ತಿದೆ.

ವಿಶ್ರಾಂತಿ ಇಲ್ಲದ ನಾಯಕ

ಮಾಧ್ಯಮಗಳ ಜೊತೆ ಮಾತನಾಡಿದ ಎಚ್​.ಡಿ.ಕುಮಾರಸ್ವಾಮಿ ಅವರು, ಕಳೆದ 25 ವರ್ಷಗಳಿಂದ, ಒಂದು ನಿಮಿಷವೂ ವಿಶ್ರಾಂತಿ ಪಡೆಯದೆ, ದೇಶವನ್ನಷ್ಟೇ ಅಲ್ಲದೆ ಜಗತ್ತನ್ನೇ ಅಭಿವೃದ್ಧಿಪಡಿಸುವ ತಮ್ಮ ದೂರದೃಷ್ಟಿಯನ್ನು ಅವರು ಸಾಕಾರಗೊಳಿಸುತ್ತಾ ಬಂದವರು ಮೋದಿ ಎಂದಿದ್ದಾರೆ. ಡಿಜಿಟಲ್ ಇಂಡಿಯಾ, ಜನ್ ಧನ್ ಮತ್ತು GST ಯಿಂದ ಹಿಡಿದು ಆಯುಷ್ಮಾನ್ ಭಾರತ್, ಬೃಹತ್ ಮೂಲಸೌಕರ್ಯ ವಿಸ್ತರಣೆ, ಗತಿ ಶಕ್ತಿ, 370ನೇ ವಿಧಿಯ ರದ್ದು, ಚಂದ್ರಯಾನ-3 ಮತ್ತು ಆತ್ಮನಿರ್ಭರ ಭಾರತದತ್ತ ಒತ್ತು ನೀಡುವುದರವರೆಗೆ ಹಲವು ಸಾಧನೆಗಳು ಅವರ ಈ ಪ್ರಯಾಣದಲ್ಲಿ ಸೇರಿವೆ. ಅವರ ಅಧಿಕಾರಾವಧಿಯು ಭಾರತದ ಬೆಳೆಯುತ್ತಿರುವ ಜಾಗತಿಕ ಉಪಸ್ಥಿತಿ ಮತ್ತು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯೊಂದಿಗೆ ಸಾಗಿದೆ ಎಂದು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈತ್ರಿ ಪಕ್ಷಗಳ ಬಗ್ಗೆ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು, ಮೈತ್ರಿ ರಾಜಕೀಯವನ್ನು ನಂಬಿಕೆ, ಪರಸ್ಪರ ಗೌರವ ಮತ್ತು ರಾಷ್ಟ್ರದ ಬಗೆಗಿನ ಸಮಾನ ಬದ್ಧತೆಯ ಆಧಾರದ ಮೇಲೆ ಕಟ್ಟಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ಎಂದಿಗೂ ಮೈತ್ರಿ ಪಕ್ಷಗಳನ್ನು ಕೇವಲ ಸಂಖ್ಯೆಗಳಾಗಿ ಪರಿಗಣಿಸಿಲ್ಲ; ಬದಲಾಗಿ, ತಮ್ಮ ಮಿತ್ರಪಕ್ಷಗಳಿಗೆ ಕೊಡುಗೆ ನೀಡಲು ಅಗತ್ಯವಾದ ಅವಕಾಶ ಮತ್ತು ಸ್ವಾತಂತ್ರ್ಯವನ್ನು ನೀಡಿದ್ದಾರೆ, ಅವರ ಆತಂಕಗಳಿಗೆ ಕಿವಿಗೊಟ್ಟಿದ್ದಾರೆ ಮತ್ತು ವಿಶಾಲವಾದ ರಾಷ್ಟ್ರೀಯ ಕಾರ್ಯದಲ್ಲಿ ಅವರೊಂದಿಗೆ ಸಮಾನ ಪಾಲುದಾರರಾಗಿ ಕೆಲಸ ಮಾಡಿದ್ದಾರೆ. ವಿಶಾಲ ರಾಷ್ಟ್ರೀಯ ಹಿತಾಸಕ್ತಿಯನ್ನು ಕೇಂದ್ರದಲ್ಲಿರಿಸಿಕೊಂಡು ವಿವಿಧ ದೃಷ್ಟಿಕೋನಗಳನ್ನು ಒಗ್ಗೂಡಿಸುವ ಅವರ ಸಾಮರ್ಥ್ಯವು NDA ಯ ಪ್ರಮುಖ ಶಕ್ತಿಯಾಗಿದೆ ಎಂದರು. ಈ ಮೂಲಕ ವಿರೋಧ ಪಕ್ಷಗಳ ಮೈತ್ರಿಯಲ್ಲಿ ಇರುವ ಬಿಕ್ಕಟ್ಟಿನ ಬಗ್ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ.