ರಾಜ್ಯ ಸರ್ಕಾರದ ಪರಿಸ್ಥಿತಿ ಎಟಿಎಂ ಥರ ಆಗಿದೆ. ಪ್ರಚಾರಕ್ಕಾಗಿ ಎಟಿಎಂ ಮಶೀನ ಯೂಸ್ ಮಾಡಿದ್ದಾರೆ. ಈಗ ಎಟಿಎಂನಲ್ಲಿನ ಹಣ ಖಾಲಿಯಾಗಿದೆ. ಇವರ ಬೊಕ್ಕಸದಲ್ಲಿ ಹಣವೇ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.
ವಿಜಯಪುರ (ಜು.14): ರಾಜ್ಯ ಸರ್ಕಾರದ ಪರಿಸ್ಥಿತಿ ಎಟಿಎಂ ಥರ ಆಗಿದೆ. ಪ್ರಚಾರಕ್ಕಾಗಿ ಎಟಿಎಂ ಮಶೀನ ಯೂಸ್ ಮಾಡಿದ್ದಾರೆ. ಈಗ ಎಟಿಎಂನಲ್ಲಿನ ಹಣ ಖಾಲಿಯಾಗಿದೆ. ಇವರ ಬೊಕ್ಕಸದಲ್ಲಿ ಹಣವೇ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸವಾಗಿಲ್ಲ, ನೌಕರರ ಸಂಬಳವಾಗಿಲ್ಲ.
ಬಡವರ ಹಿಂದುಳಿದವರ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳುವ ಸರ್ಕಾರದವರು ಯಾರಿಗೂ ಅನುಕೂಲ ಕಲ್ಪಿಸಿಲ್ಲ. ಗ್ಯಾರಂಟಿ ಕೊಡುವುದರಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಳಾಗಿದೆ. ರಾಜ್ಯವನ್ನು ಹಾಳು ಮಾಡಿದ್ದೀರಿ ಎಂದು ಎಷ್ಟೊಜನ ಶಾಪ ಹಾಕುತ್ತಿದ್ದಾರೆ. ಆಂಧ್ರ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ನಮ್ಮ ರಾಜ್ಯದಲ್ಲಿ ಆಗಿಲ್ಲ ಎಂದು ಲೇವಡಿ ಮಾಡಿದರು.
ಸಿಎಂ ಸಿದ್ಧರಾಮಯ್ಯನವರು, ಕೇಂದ್ರದ ಜೊತೆಗೆ ಒಳ್ಳೆಯ ಸಂಭಂದವನ್ನು ಇಟ್ಟುಕೊಂಡಿದ್ದರೆ ಅವರಿಂದಾರೂ ಒಂದಿಷ್ಟು ಕೆಲಸಗಳು ಆಗುತ್ತಿದ್ದವು. ಅದನ್ನೂ ಮಾಡಿಲ್ಲ. ಇದೆಲ್ಲವನ್ನೂ ನೋಡಿದರೆ ನೋವಾಗುತ್ತದೆ. ಜನರಿಗೆ ತೊಂದರೆಯಾದಾಗ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಹಿಂದೆ ಯಾರೋ ಮಾಡಿದ್ದನ್ನು ಇಂದು ತಾವು ತಮ್ಮ ಹೆಸರು ಹಾಕಿಕೊಂಡು ಉದ್ಘಾಟನೆ ಮಾಡುತ್ತಿದ್ದಾರೆ. ಯಾವುದೇ ಹಳ್ಳಿಗಳಲ್ಲೂ ರಸ್ತೆಗಳು ಸರಿಯಾಗಿಲ್ಲ. ರಾಜ್ಯದ ಸ್ಥಿತಿ ಶೋಚನೀಯವಾಗಿದೆ. ರಾಜ್ಯ ಸರ್ಕಾರದ ನಡೆಯನ್ನು ನಾನು ಖಂಡಿಸುತ್ತೇನೆ ಎಂದರು.
ಈಗ ಬಿಹಾರ ಚುನಾವಣೆ ಬಂದಿದೆ, ರಾಜ್ಯಕ್ಕೆ ಬಂದು ಶಾಸಕರ ಸಭೆ ಕರೆದು ಹಣ ತೆಗೆದುಕೊಂಡು ಹೋಗಿಬಿಡುತ್ತಾರೆ. ಅವರ ಪಕ್ಷದವರು ಕರ್ನಾಟಕವನ್ನು ಎಟಿಎಂ ಥರ ಮಾಡುತ್ತಿದ್ದಾರೆ. ಹೀಗೆ ಮುಂದುವರೆದರೆ ಈ ಸರ್ಕಾರ ಎಷ್ಟು ದಿನ ಮುಂದುವರೆಯುತ್ತದೆ ಎಂಬ ಪ್ರಶ್ನೆ ಮೂಡಿದೆ. ಮಂತ್ರಿಗಳೇ ನೇರವಾಗಿ ವ್ಯವಹಾರಕ್ಕೆ ಇಳಿದಿದ್ದಾರೆ. ಸರ್ಕಾರ ನಡೆಸುವುದು ದೊಡ್ಡ ಕೆಲಸವಲ್ಲ, ಗೌರವ ಉಳಿಸಿಕೊಂಡು ಸರ್ಕಾರ ನಡೆಸಬೇಕು. ಎಲ್ಲವನ್ನೂ ಬಿಟ್ಟು ಸರ್ಕಾರ ನಡೆಸುತ್ತಿರುವ ನಿಮ್ಮನ್ನು ದೇವರೇ ಕಾಪಾಡಬೇಕು ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಇದ್ದರು.
