ಕಾರವಾರದಲ್ಲಿ 450 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಆದರೆ, ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಇಬ್ಬರೂ ನಾಯಕರು ಪರಸ್ಪರ ಮಾತನಾಡದೆ ಮೌನ ವಹಿಸಿದ್ದು, ಅವರ ನಡುವಿನ ಅಸಮಾಧಾನ ಮತ್ತೆ ಬಹಿರಂಗ?

ಕಾರವಾರ(ಫೆ.22): ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂದು ನಡೆದ ಬಹುನಿರೀಕ್ಷಿತ 450 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮೌನ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಅಕ್ಕ ಪಕ್ಕದಲ್ಲೇ ಕುಳಿತಿದ್ದರೂ ಇಬ್ಬರು ನಾಯಕರು ಒಬ್ಬರಿಗೊಬ್ಬರು ಮಾತನಾಡದೆ ಇರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Add Asianetnews Kannada as a Preferred SourcegooglePreferred

ಕೊನೆಗೂ ಕಾರವಾರಕ್ಕೆ ಸಿಕ್ತು 450 ಬೆಡ್‌ಗಳ ಆಸ್ಪತ್ರೆ

ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 450 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಂಟಿಯಾಗಿ ಉದ್ಘಾಟಿಸಿದರು. ಜಿಲ್ಲೆಯ ಜನರ ದಶಕಗಳ ಕನಸಾದ ಸುಸಜ್ಜಿತ ವೈದ್ಯಕೀಯ ಸೇವೆಗೆ ಇಂದು ಅಧಿಕೃತ ಚಾಲನೆ ಸಿಕ್ಕಂತಾಗಿದೆ.

ವೇದಿಕೆ ಮೇಲೆ ದಿಗ್ಗಜರ ದಂಡು

ಆಸ್ಪತ್ರೆ ಉದ್ಘಾಟನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ, ಹಿರಿಯ ಶಾಸಕರಾದ ಆರ್.ವಿ. ದೇಶ್‌ಪಾಂಡೆ, ಶಿವರಾಮ ಹೆಬ್ಬಾರ್, ಸತೀಶ್ ಸೈಲ್ ಹಾಗೂ ಎಂಎಲ್‌ಸಿ ಗಣಪತಿ ಉಳ್ವೇಕರ್ ಸೇರಿದಂತೆ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಒಂದು ಗಂಟೆ ಕಳೆದರೂ ಸಿಎಂ-ಡಿಸಿಎಂ ನಡುವೆ ಮಾತಿಲ್ಲ ಕತೆಯಿಲ್ಲ

ಕಾರ್ಯಕ್ರಮ ಆರಂಭವಾಗಿ ಸುಮಾರು ಒಂದು ಗಂಟೆ ಕಳೆದರೂ ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಒಂದೂ ಮಾತು ವಿನಿಮಯವಾಗಲಿಲ್ಲ. ಇಬ್ಬರು ನಾಯಕರು ಪರಸ್ಪರ ಮುಖವನ್ನೂ ನೋಡದೆ ಇರುವುದು ಸಾರ್ವಜನಿಕರಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ.

ಸೌಜನ್ಯದ ಮಾತಿಗೂ ಇಲ್ವಾ ಜಾಗ?

ಪಕ್ಕದ ಕುರ್ಚಿಯಲ್ಲೇ ಕುಳಿತಿದ್ದ ನಾಯಕರು ಒಬ್ಬರಿಗೊಬ್ಬರು ಮಾತನಾಡದೆ ತಮ್ಮದೇ ಕೆಲಸದಲ್ಲಿ ಬ್ಯುಸಿ ಇರುವಂತೆ ಕಾಣಿಸಿತು. ಸಿಎಂ ಸಿದ್ದರಾಮಯ್ಯ ಫೈಲ್, ಕೆಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದರೆ, ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಮೊಬೈಲ್ ನೋಡುತ್ತಾ ಕಾಲ ಕಳೆದರು. ಅಕ್ಕಪಕ್ಕದ ಸಚಿವರ ಜೊತೆ ಮಾತನಾಡಿದರೂ, ಪರಸ್ಪರ ಮಾತನಾಡಲು ಮಾತ್ರ ಇಬ್ಬರೂ ಆಸಕ್ತಿ ತೋರಲಿಲ್ಲ.

ಮತ್ತೆ ಬಹಿರಂಗವಾಯ್ತೇ ಅಸಮಾಧಾನ?:

ಈ ಮೌನವು ರಾಜ್ಯ ಕಾಂಗ್ರೆಸ್ ಸರ್ಕಾರದ ಇಬ್ಬರು ಪ್ರಬಲ ನಾಯಕರ ನಡುವಿನ ಅಸಮಾಧಾನ ಮತ್ತು ಅಂತರವನ್ನು ಮತ್ತೆ ಜಗಜ್ಜಾಹೀರು ಮಾಡಿದೆ. ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದ ಸಿಎಂ ಮತ್ತು ಡಿಸಿಎಂ ನಡುವಿನ ಕುರ್ಚಿ ಸಂಘರ್ಷದ ಬಗ್ಗೆ ಕಾರವಾರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

YouTube video player