ಸಿಗಂದೂರು ಸೇತುವೆ ಲೋಕಾರ್ಪಣೆ ಸೋಮವಾರ (ಜು.14) ನಡೆಯಲಿದ್ದು, ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಜು.13): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ಸೇತುವೆ ಲೋಕಾರ್ಪಣೆ ಸೋಮವಾರ (ಜು.14) ನಡೆಯಲಿದ್ದು, ಸಿಗಂದೂರು ಸೇತುವೆ ಉದ್ಘಾಟನೆಗೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂ ಬರೆದ ಪತ್ರದಲ್ಲಿ ಏನಿದೆ?: ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಜುಲೈ 14, 2025 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನೆಹರು ಕ್ಷೇತ್ರದಲ್ಲಿ 'ರಾಷ್ಟ್ರ ಸಮರ್ಪಣೆ ಮತ್ತು ಶಂಕುಸ್ಥಾಪನೆ ಸಮಾರಂಭ' ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಮತ್ತು ನನ್ನ ಹೆಸರನ್ನು ಕರಡು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ ಎಂದು ನನ್ನ ಗಮನಕ್ಕೆ ಬಂದಿದೆ. ಆದಾಗ್ಯೂ, ಈ ಕಾರ್ಯಕ್ರಮದ ಬಗ್ಗೆ ನನಗೆ ಮುಂಚಿತವಾಗಿ ತಿಳಿಸಲಾಗಿಲ್ಲ ಮತ್ತು ಅದೇ ದಿನ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಲಾಗಿದೆ.

ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿಗದಿಪಡಿಸುವ ಮೊದಲು MoRTH ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದ್ದರೆ ಹೆಚ್ಚು ಸೂಕ್ತವಾಗಿತ್ತು. ಆದ್ದರಿಂದ, ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಇಲಾಖೆಗೆ ಸೂಚಿಸಬೇಕೆಂದು ನಾನು ವಿನಂತಿಸುತ್ತೇನೆ. ಅಲ್ಲದೆ, ಈ ಕಾರ್ಯಕ್ರಮವನ್ನು ಮುಂದೂಡಲು ಮತ್ತು ನಿಮಗೆ ಅನುಕೂಲಕರವಾದ ಒಂದೆರಡು ದಿನಾಂಕಗಳನ್ನು ನನಗೆ ಒದಗಿಸುವಂತೆ ನಾನು ವಿನಂತಿಸುತ್ತೇನೆ, ಇದರಿಂದ ನಾನು ಈ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಸೇರಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ, ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನೇಕರ ಹೋರಾಟದ ಫಲ: ಹಲವು ದಶಕಗಳ ತಪಸ್ಸಿನ ಫಲ ಇದೀಗ ವರವಾಗಿ ಸಿಕ್ಕಿದೆ. ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳುತ್ತಿದೆ. ಈ ಸೇತುವೆ ಸಾಕಾರದ ಹಿಂದೆ ಅನೇಕರ ಹೋರಾಟ ಇದೆ. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ದ ಅವರ ಬದ್ಧತೆಯಿಂದಾಗಿ ಯೋಜನೆ ಜಾರಿಗೊಂಡರೆ, ಈ ಯೋಜನೆ ಜಾರಿಗೊಳಿಸುವಂತೆ ದಶಕಗಳ ಕಾಲ ಹೋರಾಟ ನಡೆಸಿದವರಲ್ಲಿ ಚದರವಳ್ಳಿ ಪರಮೇಶ್ವರಪ್ಪ ಅವರನ್ನು ಮೊದಲಿಗೆ ನೆನೆಯಬೇಕು. ಬಳಿಕ ಕೆರೆಕೈ ಪ್ರಸನ್ನ ಈ ಹೋರಾಟಕ್ಕೊಂದು ಸ್ಪಷ್ಟ ದಿಕ್ಸೂಚಿ ನೀಡಿದರು.

ಇಷ್ಟು ಮಾತ್ರವಲ್ಲ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವರು ಪಕ್ಷಾತೀತವಾಗಿ ಈ ಹೋರಾಟ, ಹಕ್ಕೊತ್ತಾಯ, ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಸಂಸದ ರಾಘವೇಂದ್ರ ಅವರ ನಿರ್ಣಾಯಕ ಹಂತದಲ್ಲಿ ಇದಕ್ಕೊಂದು ಸ್ಪಷ್ಟ ರೂಪ ನೀಡಿ ಕಾರ್ಯಗತಗೊಳಿಸಿದರು. ಜಾತಿ, ಜನಾಂಗ, ಪಕ್ಷ ಎಂದು ನೋಡದೆ ಕೆರೆಕೈ ಪ್ರಸನ್ನ ಹೋರಾಟಕ್ಕೆ ಸ್ಪಷ್ಟತೆ ನೀಡಿದರಲ್ಲದೆ, ಬೆನ್ನು ಹತ್ತಿ ಕೆಲಸ ಆಗುವಂತೆ ನಿರಂತರವಾಗಿ ಪ್ರಯತ್ನವನ್ನು ನಡೆಸಿದರು. ಈ ಸೇತುವೆ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿದರೆ ಕೆಲಸ ಸುಲಭ ಎಂದು ತಾಂತ್ರಿಕ ಮಾಹಿತಿ ಪಡೆದುಕೊಂಡ ಪ್ರಸನ್ನ ಅವರು ಕಾಗೋಡು ತಿಮ್ಮಪ್ಪ ಅವರ ಜೊತೆ ಬೆಂಗಳೂರಿಗೆ ಹೋಗಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಅವರಿಗೂ ಮನವಿ ಅರ್ಪಿಸಿದ್ದರು.

ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಆರಂಭದಲ್ಲಿಯೂ ಇವರು ಪ್ರತಿ ವಾರ ಬೆಂಗಳೂರಿಗೆ ಹೋಗಿ ಸೇತುವೆ ನಿರ್ಮಾಣದ ಕಡತಗಳನ್ನು ಹಿಂಬಾಲಿಸುತ್ತಿದ್ದರು. ಹೀಗೆ ಇವರ ನಿರಂತರ ಪ್ರಯತ್ನ ಮತ್ತು ಸೇತುವೆ ನಿರ್ಮಾಣದ ಓಡಾಟದಿಂದ ‘ಸೇತುವೆ ಪ್ರಸನ್ನ’ ಎಂದೇ ಪರ್ಯಾಯ ನಾಮಾಂಕಿತರಾಗಿದ್ದು, ವಿಶೇಷ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ತಮ್ಮ ಆಯವ್ಯಯದಲ್ಲಿ ಸೇತುವೆ ನಿರ್ಮಾಣ ಘೋಷಿಸಿದರೂ ರಾಜಕೀಯದ ಕಾರಣ ಅದು ನೆನೆಗುದಿಗೆ ಬಿತ್ತು. 2012 ಮತ್ತು 2014ರಲ್ಲಿ ಜನಾಂದೋಲನ ರೂಪದ ಹೋರಾಟಕ್ಕೆ ಪ್ರಸನ್ನ ಚಾಲನೆ ನೀಡಿದರು.2016ರಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು 2016ರಲ್ಲಿ ಭಾರತ್ ಮಾಲಾ ಯೋಜನೆಗೆ ಸೇರಿಸುವ ಪ್ರಯತ್ನಕ್ಕೆ ಪ್ರಸನ್ನ ಕೂಡ ಜೊತೆಯಾಗಿ ನಿಂತಿದ್ದರು. ಹೀಗೆ ಈ ಸೇತುವೆ ನಿರ್ಮಾಣದ ಹಿಂದಿನ ಒತ್ತಡ, ಹೋರಾಟದ ಹಾದಿಯಲ್ಲಿ ಹಲವಾರು ನಾಯಕರು ಇದ್ದರೂ ಕೆರೆಕೈ ಪ್ರಸನ್ನ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತದೆ.