ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿಗೆ ಹೋದರೆ ಪಂದಿಕರಿ, ಕಡುಂಬಟ್ಟು, ನೂಪ್ಪುಟ್ಟು ಇಂತಹ ಆಹಾರಗಳ ರುಚಿಯನ್ನು ನೋಡದೆ ಯಾರು ಬರ್ತೀರಾ ಅಲ್ವಾ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.13): ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗಿಗೆ ಹೋದರೆ ಪಂದಿಕರಿ, ಕಡುಂಬಟ್ಟು, ನೂಪ್ಪುಟ್ಟು ಇಂತಹ ಆಹಾರಗಳ ರುಚಿಯನ್ನು ನೋಡದೆ ಯಾರು ಬರ್ತೀರಾ ಅಲ್ವಾ. ಆದರೆ ಚಳಿಗಾಲ ಬಂತು ಅಂದ್ರೆ ಮಾಂಸ ಆಹಾರಕ್ಕಿಂತ ಸ್ವಾಭಾವಿಕವಾಗಿ ದೊರೆಯುವ ಒಂದಿಷ್ಟು ಸಸ್ಯ ಆಹಾರಗಳನ್ನು ಕೊಡಗಿನ ಜನರು ಉಪಯೋಗಿಸುವುದು ಸಾಮಾನ್ಯ. ಹಾಗಾದರೆ ಯಾವು ಆಹಾರಗಳು, ಏನು ಅವುಗಳ ವಿಶೇಷ ಅಂತೀರಾ ನೀವೂ ಒಮ್ಮೆ ರುಚಿ ನೋಡಿ. ಬಿದಿರಿನ ಕಳಲೆ, ತರ್ಮೆ ಸೊಪ್ಪು, ಕಾಡು ಮಾವಿನಕಾಯಿ, ಕಲ್ಲೇಡಿ. ಅಯ್ಯಯ್ಯೋ ಇದೇನು ಇದ್ಯಾವುದೋ ಕಾಡಿನ ಸೊಪ್ಪುಗಳನ್ನೆಲ್ಲಾ ಹೇಳ್ತಾ ಇದ್ದಾರಲ್ಲಪ್ಪ ಎಂದುಕೊಳ್ತಾ ಇದ್ದೀರಾ.
ಅದ್ರಲ್ಲೇ ವಿಶೇಷ ಇರುವುದು ನೋಡಿ. ಹೌದು ಸಾಮಾನ್ಯವಾಗಿ ಕೊಡಗಿನಲ್ಲಿ ಪಂದಿಕರಿ, ಕಡುಂಬಟ್ಟು ಇಂತಹವುಗಳು ವಿಶೇಷ ಎಂದುಕೊಂಡೀರ್ತೀರಾ ಅಲ್ವಾ.? ಆದರೆ ಪಂದಿಕರಿ ಕಡುಂಬಟ್ಟು, ನೂಪುಟ್ಟು ಇವೆಲ್ಲವೂ ಮಾಂಸಹಾರದ ವಿಶೇಷ ಆಹಾರಗಳು. ಮತ್ತು ಅವುಗಳಿಗೆ ಇಂತಹದ್ದೇ ನಿರ್ದಿಷ್ಟ ಕಾಲಮಾನ ಎಂದೇನು ಇಲ್ಲ. ಯಾವಾಗ ಬೇಕಾದರೂ ಮಾಡಿ ಸವಿಯಬಹುದು. ಆದರೆ ಎತ್ತೇಚ್ಛವಾಗಿ ಮಳೆ ಸುರಿಯುವ ಕೊಡಗಿನಲ್ಲಿ ಮಳೆಗಾಲದಲ್ಲಿ ಮನುಷ್ಯನ ದೇಹವನ್ನು ಆವರಿಸುವ ಅತಿಯಾದ ಶೀತವನ್ನು ತಡೆಗಟ್ಟಿ ದೇಹದಲ್ಲಿ ಒಂದಿಟ್ಟು ಉಷ್ಣತೆ ಹೆಚ್ಚಿಸುವ ಆಹಾರ ಪದಾರ್ಥಗಳು ಇವೆ.
ಸ್ವಾಭಾವಿಕವಾಗಿ ದೊರೆಯುವ ತರ್ಮೆ ಸೊಪ್ಪು, ಕಾಡಿನಲ್ಲಿ ಬೆಳೆಯುವ ಬಿದಿರಿನ ಕಳಲೆ, ಕಾಡು ಮಾವಿನ ಹಣ್ಣು ಜೊತೆಗೆ ಕಲ್ಲೇಡಿಗಳನ್ನು ಈ ಸಂದರ್ಭದಲ್ಲಿ ಎತ್ತೇಚ್ಛವಾಗಿ ಮಾರಾಟ ಮಾಡಲಾಗುತ್ತದೆ. ಕಾಡಿನಿಂದ ಈ ಸೊಪ್ಪುಗಳನ್ನು ತಂದು ಪಟ್ಟಣ, ನಗರ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲ್ಲಾ ಆಹಾರ ಪದಾರ್ಥಗಳು ಮನುಷ್ಯನ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತವೆ. ಜೂನ್ ಆರಂಭದಿಂದ ಆಗಸ್ಟ್ ತಿಂಗಳ ಕೊನೆಯವರೆಗೆ ಕೊಡಗಿನಲ್ಲಿ ಸಾಕಷ್ಟು ಮಳೆ ಸುರಿಯುವುದರಿಂದ ಶೀತ ಜಾಸ್ತಿಯಾಗುತ್ತದೆ.
ಹೀಗಾಗಿಯೇ ಇಂತಹ ಆಹಾರ ಪದಾರ್ಥಗಳನ್ನು ಸೇರಿಸುವುದರಿಂದ ಉಷ್ಣತೆಯನ್ನು ಹೆಚ್ಚಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದ್ದರಿಂದಲೇ ಮಳೆಗಾಲದಲ್ಲಿ ಇವುಗಳೆಲ್ಲಾ ಕೊಡಗಿನಲ್ಲಿ ವಿಶೇಷ ಆಹಾರಗಳು. ಅವುಗಳ ಭರ್ಜರಿ ಖರೀದಿ ಕೂಡ ನಡೆಯುತ್ತಿದೆ. ಇನ್ನು ಈ ಸಮಯದಲ್ಲಿ ಮಾತ್ರವೇ ದೊರೆಯುವ ಇಂತಹ ಆಹಾರ ಪದಾರ್ಥಗಳನ್ನು ಕೊಡಗಿನ ಜನರು ಮಿಸ್ ಮಾಡದೆ ಸಾಕಷ್ಟು ಬಳಕೆ ಮಾಡುತ್ತಾರೆ. ಜೊತೆಗೆ ಕೊಡಗಿನಿಂದ ಹೊರ ಜಿಲ್ಲೆಗಳಿಗೆ ಹೋಗಿ ಬದುಕುತ್ತಿರುವವರು ಕೂಡ ಮಳೆಗಾಲದಲ್ಲಿ ಕೊಡಗಿಗೆ ಬಂದ್ರೆ ಇಂತಹ ಈ ಆಹಾರ ಪದಾರ್ಥಗಳನ್ನು ಕೊಂಡೊಯ್ದು ತಪ್ಪದೇ ಬಳಸುತ್ತಾರೆ.
ಇದೀಗ ಕೊಡಗಿನಲ್ಲಿ ತೀವ್ರ ಮಳೆ ಇರುವುದರಿಂದ ಇದೇ ಸಮಯದಲ್ಲಿ ದೊರೆಯುವ ಈ ಆಹಾರ ಪದಾರ್ಥಗಳನ್ನು ಖರೀದಿ ಮಾಡುತ್ತಿದ್ದಾರೆ. ಹಿಂದಿನಿಂದಲೂ ಇಂತಹ ಸ್ವಾಭಾವಿಕ ಆಹಾರ ಪದಾರ್ಥಗಳನ್ನು ಬಳಸಿದ್ದೇವೆ. ಹೀಗಾಗಿ ಕೊಡಗಿಗೆ ಬಂದ್ರೆ ಇವುಗಳನ್ನು ಕೊಂಡು ತಿನ್ನದೇ ಇರಲು ಸಾಧ್ಯವೇ ಇಲ್ಲ. ವರ್ಷದಲ್ಲಿ ಒಮ್ಮೆ ಸಿಗುವ ಇವುಗಳನ್ನು ಖರೀದಿಸಿ ತಿನ್ನುತ್ತೇವೆ ಎನ್ನುತ್ತಿದ್ದಾರೆ. ನೋಡಿದ್ರಲಾ ಕೊಡಗು ಎಂದರೆ ಕೇವಲ ಪಂದಿಕರಿ, ಕಡುಂಬಟ್ಟು ಇವುಗಳೇ ವಿಶೇಷ ಎನ್ನುವ ಜೊತೆಗೆ ಮಳೆಗಾಲದಲ್ಲಿ ಮಾತ್ರವೇ ದೊರೆಯುವ ಈ ಆಹಾರ ಪದಾರ್ಥಗಳು ಎಷ್ಟರ ಮಟ್ಟಿಗೆ ವಿಶೇಷ ಹಾಗೂ ಅವುಗಳು ಎಷ್ಟರ ಮಟ್ಟಿಗೆ ಆರೋಗ್ಯ ಸರಿದೂಗಿಸುತ್ತವೆ ಎಂದು. ಕೊಡಗಿಗೆ ಬಂದ್ರೆ ನೀವು ಒಮ್ಮೆ ಇವುಗಳನ್ನು ಖರೀದಿಸಿ ಸೇವಿಸಬಹುದು.
