ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ. ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ನಮ್ಮ ಪಕ್ಷದ ಏನೇ ಗೊಂದಲವಿದ್ದರೂ ನಮ್ಮ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ನ.29): ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ. ಅವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ನಮ್ಮ ಪಕ್ಷದ ಏನೇ ಗೊಂದಲವಿದ್ದರೂ ನಮ್ಮ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಬೇರೆ ಕೆಲಸವಿಲ್ಲ. ನೀವು ಎಷ್ಟೇ ಪ್ರಶ್ನೆ ಕೇಳಿದರೂ ನಾನು ಬಾಯಿಮುಚ್ಚಿಕೊಂಡಿರುತ್ತೇನೆ. ಪಕ್ಷದ ಹೈಕಮಾಂಡ್ ಎಲ್ಲಾ ವಿವಾದಗಳಿಗೂ ತೆರೆ ಎಳೆಯಲಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯ ಬಗ್ಗೆ ಅದರಲ್ಲೂ ಪ್ರಮುಖವಾಗಿ ಪ್ರತಿಷ್ಠಿತ 1000 ಮಕ್ಕಳು ಓದುವ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ದೈಹಿಕ ಶಿಕ್ಷಕರಿಲ್ಲ, ಪೋಷಕರು ಈ ಸಂಬಂಧ ಪ್ರತಿಭಟನೆ ನಡೆಸಿದ್ದರು ಎಂದು ಗಮನಕ್ಕೆ ತಂದಾಗ, ಆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಶಿಕ್ಷಕರ ಕೊರತೆಯ ಬಗ್ಗೆ ನಾನು ಈಗಾಗಲೇ ಒಪ್ಪಿಕೊಂಡಿದ್ದೇನೆ. ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ದೈಹಿಕ ಶಿಕ್ಷಕರ ನೇಮಕವಾಗಲಿದೆ ಎಂದು ಭರವಸೆ ನೀಡಿದರು.
18 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತ್ತಿದ್ದು ಅದರಲ್ಲಿ 12 ಸಾವಿರ ಶಿಕ್ಷಕರನ್ನು ಆರಂಭಿಕ ಹಂತದಲ್ಲಿ ಭರ್ತಿಮಾಡಿಕೊಳ್ಳಲಾಗುವುದು ಎಂದರು. ಅನುದಾನರಹಿತ ಕನ್ನಡ ಶಾಲೆಗಳ ಶಿಕ್ಷಕರುಗಳಿಗೆ ವೇತನಾನುದಾನ ನೀಡುವ ಕುರಿತು ನಾನು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಅವರು ಬಜೆಟ್ ಸಂದರ್ಭದಲ್ಲಿ ಆದ್ಯತೆ ನೀಡುವುದಾಗಿ ಈಗಾಗಲೇ ತಿಳಿಸಿದ್ದಾರೆ ಎಂದರು.
ಯಾವ ಶಾಲೆಯನ್ನೂ ಬಂದ್ ಮಾಡಲ್ಲ
ನಾವು ಯಾವ ಸ್ಕೂಲ್‌ಗಳನ್ನೂ ಬಂದ್ ಮಾಡ್ತಿಲ್ಲ, ಯಾರೋ ತಲೆ ಹರಟೆಗಳು ಶಾಲೆ ಬಂದ್ ಮಾಡ್ತಾರೆ ಅಂತ ಹೇಳಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೆಪಿಎಸ್‌ಸಿ ಶಾಲೆಗಳನ್ನು ತೆರೆಯುತ್ತೇವೆ ಎಂದು ಹೇಳಿದ್ದು, ಆ ಪ್ರಕ್ರಿಯೆ ನಡೆಸಿದ್ದೇವೆ ಎಂದು ಹೇಳಿದರು.ಕೆಪಿಎಸ್‌ಸಿ ಶಾಲೆ ಓಳ್ಳೆಯದು, ಮಕ್ಕಳು ಒಂದೇ ಸ್ಕೂಲ್‌ನಲ್ಲಿ 14 ವರ್ಷ ಕಲಿಯುತ್ತಾರೆ. ಕೆಪಿಎಸ್‌ಸಿ ಶಾಲೆ ತೆರೆಯುವುದರಿಂದ ಸರ್ಕಾರಿ ಶಾಲೆ ಅಷ್ಟೆ ಅಲ್ಲ, ಬೇರೆ ಶಾಲೆಯ ವಿದ್ಯಾರ್ಥಿಗಳು ಬರುತ್ತಾರೆ. ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಶಿಕ್ಷಣ ಕೊಡುತ್ತೇವೆ ಎಂದರು.
ಬಿಹಾರ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿ, ಬಿಹಾರ್ ಚುನಾವಣೆಯಲ್ಲಿ ವಿಭಿನ್ನ ತೀರ್ಮಾನ ಬಂದಿದೆ. ಇದನ್ನು ಬೇರೆ ಬೇರೆ ಆ್ಯಂಗಲ್‌ನಲ್ಲಿ ನೋಡಬೇಕು ಎಂದರು. ರಾಜ್ಯ ನಾಯಕತ್ವ ಬದಲಾವಣೆ ವಿಚಾರ, ಹೈಕಮಾಂಡ್ ನಾಯಕರು ನಮಗೆ ಬಾಯಿ ಮುಚ್ಚಿಕೊಂಡು ಇರಿ ಎಂದು ಹೇಳಿದ್ದು, ಅವರು ಹೇಳಿದ ಹಾಗೆ ನಡೆದುಕೊಂಡು ಹೋಗ್ತೀವಿ ಎಂದರು. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ತಕ್ಕಂತೆ ಅನುದಾನ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಬಿಹಾರ್ ಚುನಾವಣೆ ಪಟ್ಟ ಕಟ್ಟಲು ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಸೋತರೆ ಮೋದಿಯವರು ಸೋತರು ಅನ್ನೋಕೆ ಆಗಲ್ಲ ಎಂದರು.


