ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಾಸ್‌ ಆಗಲು ವಿದ್ಯಾರ್ಥಿಗಳು ಪಡೆಯಬೇಕಾದ ಕನಿಷ್ಠ ಅಂಕ ಪ್ರಮಾಣವನ್ನು ಏಕಾಏಕಿ ಶೇ.33ಕ್ಕೆ ಇಳಿಸಿಲ್ಲ. ಜನಾಭಿಪ್ರಾಯ ಪಡೆದು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬೆಂಗಳೂರು (ಅ.31): ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಾಸ್‌ ಆಗಲು ವಿದ್ಯಾರ್ಥಿಗಳು ಪಡೆಯಬೇಕಾದ ಕನಿಷ್ಠ ಅಂಕ ಪ್ರಮಾಣವನ್ನು ಏಕಾಏಕಿ ಶೇ.33ಕ್ಕೆ ಇಳಿಸಿಲ್ಲ. ಜನಾಭಿಪ್ರಾಯ ಪಡೆದು ನಿರ್ಧರಿಸಲಾಗಿದೆ. ಇದರಲ್ಲಿ ತಮ್ಮ ವೈಯಕ್ತಿಕ ನಿರ್ಧಾರವೇನೂ ಅಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.

ಎರಡೂ ಪರೀಕ್ಷೆಗಳ ಪಾಸ್‌ ಅಂಕ ಇಳಿಕೆ ಆಕ್ಷೇಪಿಸಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, ಹೊರಟ್ಟಿ ಅವರ ಪತ್ರ ಇನ್ನೂ ನನಗೆ ತಲುಪಿಲ್ಲ. ಆದರೆ, ಇಲಾಖೆ ಈ ನಿರ್ಧಾರವನ್ನು ಏಕಾಏಕಿ ಮಾಡಿಲ್ಲ. ಶಿಕ್ಷಕರು, ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಸೇರಿ ಶಿಕ್ಷಣ ಕ್ಷೇತ್ರದ ಪರಿಣಿತರೊಂದಿಗೆ ಚರ್ಚಿಸಿ ಬಳಿಕ ನಿಯಮಾವಳಿಗೆ ತಿದ್ದುಪಡಿ ತಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಹಾಲಿ ಶಿಕ್ಷಕರು 5 ವರ್ಷದೊಳಗೆ ಟಿಇಟಿ ಪಾಸ್‌ ಮಾಡಬೇಕು

ಸರ್ಕಾರಿ ಶಾಲೆಗಳಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಕಡ್ಡಾಯವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಪಾಸು ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಮಾಡಿರುವ ಆದೇಶವನ್ನು ಪಾಲಿಸಲಾಗುವುದು ಸಚಿವ ಮಧು ಬಂಗಾರಪ್ಪ ಹೇಳಿದರು. ಸವೋಚ್ಚ ನ್ಯಾಯಾಲಯದ ಆದೇಶ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅನ್ವಯ. ಹಾಗಾಗಿ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಮುಂದಿನ ಐದು ವರ್ಷಗಳಲ್ಲಿ ಟಿಇಟಿ ಪಾಸು ಮಾಡಿಕೊಳ್ಳುವುದು ಕಡ್ಡಾಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ 51 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇದ್ದು, ಶೀಘ್ರ ಸರ್ಕಾರಿ, ಅನುದಾನಿತ ಶಾಲೆಗಳು, ಪಿಯು ಕಾಲೇಜುಗಳಿಗೆ 15 ಸಾವಿರ ಶಿಕ್ಷಕರು, ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುವುದು. ಇದಕ್ಕೂ ಮುನ್ನ ಟಿಇಟಿ ಪರೀಕ್ಷೆ ನಡೆಯಲಿದ್ದು ಈ ಸಂಬಂಧ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.