ಮಹಾಭಾರತ ಸಂಗ್ರಾಮ: ವಿಜಯಪುರ ಕ್ಷೇತ್ರ

ವಿಜಯಪುರ[ಫೆ.14]: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಜಿಲ್ಲೆಯಲ್ಲಿ ಚಳಿಯ ಮಧ್ಯೆಯೇ ಲೋಕಸಭೆ ಚುನಾವಣೆ ಕಾವು ಏರುತ್ತಿದೆ. ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಈಗಲೇ ಗರಿಗೆದರಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಪ್ರಬಲ ಅಭ್ಯರ್ಥಿಗಳ ಹುಡು ಕಾಟ ಜೋರಾಗಿದೆ. ಈ ಬಾರಿ ಏನಾದರೂ ಮಾಡಿ ಬಿಜೆಪಿಯ ಹಾಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರನ್ನು ಸೋಲಿಸಲೇಬೇಕು ಎಂಬ ಛಲದೊಂದಿಗೆ ಕಾಂಗ್ರೆಸ್ ಪಕ್ಷ ಪ್ರಬಲ ಅಭ್ಯರ್ಥಿ ಹುಡುಕಾಟಕ್ಕೆ ಅಣಿಯಾಗಿದೆ.

ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್‌

ಕಳೆದ ಎರಡು ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಕೇಂದ್ರ ಸಚಿವ ರಮೇಶ ಜಿಗ ಜಿಣಗಿ ಮತ್ತೆ ಬಿಜೆಪಿ ಅಭ್ಯರ್ಥಿ ಯಾಗಲು ಸಿದ್ಧತೆ ನಡೆಸಿದ್ದಾರೆ. ಜಿಗಜಿಣಗಿ ಅವರೇ ಅಭ್ಯರ್ಥಿ ಎಂಬ ಸುಳಿವನ್ನು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ನೀಡಿದ್ದಾರೆ. ಅಲ್ಲದೆ, ಜಿಗಜಿಣಗಿ ಅವರೇ ಬಿಜೆಪಿ ಅಭ್ಯರ್ಥಿ ಎಂದು ಪಕ್ಷದವರು ಕೂಡ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಗಜಿಣಗಿ ಅವರೂ ಚುನಾವಣೆ ಅಖಾಡಕ್ಕೆ ಧುಮುಕಲು ಸಜ್ಜಾಗುತ್ತಿದ್ದಾರೆ.

ಆದರೂ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ನೇತೃತ್ವದ ಒಂದು ಬಣ ಜಿಗಜಿಣಗಿಗೆ ಟಿಕೆಟ್ ಸಿಗದಂತೆ ಬ್ರೇಕ್ ಹಾಕಲು ಶತಾಯಗತಾಯ ಪ್ರಯತ್ನ ನಡೆಸಿದೆ. ಜಿಗಜಿಣಗಿ ಅವರೊಂದಿಗಿನ ರಾಜಕೀಯ ಹಗೆತನ ದಿಂದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಬೇರೊಬ್ಬರಿಗೆ ಟಿಕೆಟ್ ಕೊಡಿಸಲು ತಂತ್ರ ಹೆಣೆಯುತ್ತಿದ್ದಾರೆ. ಅದರಲ್ಲಿ ಯಶಸ್ವಿಯಾಗುವುದು ಕಷ್ಟ ಎನ್ನಲಾಗುತ್ತಿದೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸ್ಥಾನ ಹೊಂದಾಣಿಕೆ ಪ್ರಕ್ರಿಯೆಯಲ್ಲಿ ವಿಜಯಪುರ ಕ್ಷೇತ್ರವನ್ನು ಜೆಡಿಎಸ್ ಕೇಳುವ ಸಾಧ್ಯತೆಯಿದೆ. ಆದರೆ, ಆ ಪಕ್ಷಕ್ಕೆ ಪ್ರಬಲ ಅಭ್ಯರ್ಥಿ ಕೊರತೆ ಎದ್ದು ಕಾಣುತ್ತಿದೆ. ಮೇಲಾಗಿ ಕಾಂಗ್ರೆಸ್ ಕೂಡ ಈ ಕ್ಷೇತ್ರವನ್ನು ಸುಲಭವಾಗಿ ಬಿಟ್ಟು ಕೊಡಬಹುದೇ ಎಂಬ ಅನುಮಾನವೂ ಇದೆ.

ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

ಕಾಂಗ್ರೆಸ್ಸಲ್ಲಿ ಪ್ರಬಲ ಅಭ್ಯರ್ಥಿ ಹುಡುಕಾಟ

ಉಪಚುನಾವಣೆಯಲ್ಲಿ ಮೈತ್ರಿ ಪಕ್ಷ ಹೆಚ್ಚು ಸ್ಥಾನ ಗೆದ್ದಿದ್ದರಿಂದ ಮತ್ತಷ್ಟು ಬಲಬಂದಿದೆ ಎಂದು ಬೀಗುತ್ತಿರುವ ಕಾಂಗ್ರೆಸ್ ನಾಯಕರು ದಲಿತ ಎಡಗೈ ಸಮುದಾಯಕ್ಕೆ ಸೇರಿದ ರಮೇಶ ಜಿಗಜಿಣಗಿಗೆ ಈ ಬಾರಿ ಶತಾಯಗತಾಯ ಸೋಲಿನ ರುಚಿ ತೋರಿಸಲೆಂದು ಪ್ರಬಲ ಅಭ್ಯರ್ಥಿ ಶೋಧ ನಡೆಸಿದ್ದಾರೆ.

ಬಲಗೈ ಸಮಾಜದ ಮಾಜಿ ಶಾಸಕ ರಾಜು ಆಲಗೂರ, ಬಂಜಾರ ಸಮಾಜದ ಪ್ರಕಾಶ ರಾಠೋಡ, ಅರ್ಜುನ ರಾಠೋಡ, ಸುರೇಶ ಘೋಣಸಗಿ, ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ಮನೋಹರ ಐನಾಪುರ, ಚಿತ್ರದುರ್ಗ ಜಿಲ್ಲೆಯ ಜಲಜಾ ನಾಯಕ, ಕೊಪ್ಪಳ ಜಿಲ್ಲೆಯ ಶಿವರಾಜ ತಂಗಡಗಿ, ಮಾಜಿ ಶಾಸಕ, ಡೋಹರ ಸಮಾಜದ ವಿಠಲ ಕಟಕದೊಂಡ ಹೆಸರೂ ಚಲಾವಣೆಯಲ್ಲಿದ್ದರೂ ಜಿಗಜಿಣಗಿ ವಿರುದ್ಧ ಗೆಲ್ಲುವ ಸಾಮರ್ಥ್ಯ ಅಭ್ಯರ್ಥಿಯನ್ನು ಕಣಕ್ಕಳಿಸಲು ಕೈ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ.]

ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

4 ಲಕ್ಷ ದಲಿತ ಮತದಾರರು ಇರುವ ಈ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ದಲಿತರಿಗೆ ಟಿಕೆಟ್ ನೀಡದೆ ಸತತ ಮೂರು ಬಾರಿ ಬಂಜಾರಾ ಸಮಾಜದ ಪ್ರಕಾಶ ರಾಠೋಡಗೆ ಟಿಕೆಟ್ ನೀಡುತ್ತ ಬಂದಿದೆ. ಇದರಿಂದಾಗಿ ದಲಿತರು ಅನಿವಾರ್ಯವಾಗಿ ಬಿಜೆಪಿಗೆ ವೋಟ್ ಹಾಕಿ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸುತ್ತ ಬಂದಿದ್ದಾರೆ. ಪ್ರಕಾಶ ರಾಠೋಡ ಸೋಲುತ್ತಲೇ ಬಂದಿದ್ದಾರೆ. ಈ ಸತ್ಯವನ್ನು ಅರಿತ ಕಾಂಗ್ರೆಸ್ ನಾಯಕರು ಈ ಬಾರಿ ದಲಿತರಿಗೆ ಟಿಕೆಟ್ ನೀಡಲು ಆಲೋಚನೆಯಲ್ಲಿ ತೊಡಗಿದ್ದಾರೆ. ಏಕೆಂದರೆ ಪ್ರಕಾಶ ರಾಠೋಡ ಅವರು ಈಗಾಗಲೇ ಕ್ರೀಡಾ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮಕರಣಗೊಂಡಿದ್ದಾರೆ. ಹೀಗಾಗಿ ಈ ಬಾರಿ ದಲಿತರಿಗೆ ಟಿಕೆಟ್ ಕೊಡುವ ಇರಾದೆಕಾಂಗ್ರೆಸ್ ಹೊಂದಿದೆ ಎನ್ನಲಾಗುತ್ತಿದೆ.

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ಜೆಡಿಎಸ್‌ನಿಂದಲೂ ಕಸರತ್ತು ಆರಂಭ

ಜೆಡಿಎಸ್‌ನಲ್ಲಿ ಐದಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ. ಜಿಲ್ಲೆಯಲ್ಲಿ ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಅಷ್ಟಕಷ್ಟೇ. ವಿಜಯಪುರ ಸಾಮಾನ್ಯ ಕ್ಷೇತ್ರವಾಗಿದ್ದಾಗ 1984ರಲ್ಲಿ ಜನತಾ ಪಾರ್ಟಿಯಿಂದ ಎಸ್.ಎಂ.ಗುರಡ್ಡಿ ಆಯ್ಕೆಯಾಗಿದ್ದರು. 1996ರಲ್ಲಿ ಜನತಾದಳದಿಂದ ಬಿ.ಆರ್. ಪಾಟೀಲ ಕನಮಡಿ ಸಂಸದರಾಗಿದ್ದರು. ಇನ್ನುಳಿದಂತೆ ಕಾಂಗ್ರೆಸ್ ಹೆಚ್ಚು ಬಾರಿ ಗೆದ್ದಿದ್ದರೆ, ನಂತರದ ಸ್ಥಾನದಲ್ಲಿ ಬಿಜೆಪಿ ಇದೆ.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುವ ಮೂಲಕ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಕಾರಣರಾಗಿದ್ದಾರೆ. ಅಲ್ಲದೆ, ಪ್ರಧಾನಿಯಾದಾಗಲೂ ಕೃಷ್ಣಾ ಯೋಜನೆಗೆ ಕೇಂದ್ರದಿಂದ ಅನುದಾನ ಒದಗಿಸಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆ ಅವರ ಮೇಲೆ ವಿಶೇಷ ಕಾಳಜಿ ಹೊಂದಿದೆ. ಜಿಲ್ಲೆಯಲ್ಲಿ ಸಂಘಟನೆ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿಲ್ಲದಿದ್ದರೂ ದೇವೇಗೌಡರು, ಕುಮಾರಸ್ವಾಮಿ ಮೇಲಿನ ವಿಶ್ವಾಸದಿಂದಾಗಿ ವಿಧಾನಸಭೆ ಚುನಾವಣೆಗಳಲ್ಲೂ ಜೆಡಿಎಸ್ ಕೆಲ ಸ್ಥಾನಗಳನ್ನು ಗೆಲ್ಲುತ್ತಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಎರಡು ಕ್ಷೇತ್ರಗಳನ್ನು ಗೆದ್ದಿದೆ. ಇಂಡಿ, ದೇವರಹಿಪ್ಪರಗಿ ಹಾಗೂ ಬಸವನ ಬಾಗೇವಾಡಿ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ದೇವರಹಿಪ್ಪರಗಿ ಹಾಗೂ ಬಸವನ ಬಾಗೇವಾಡಿಯಲ್ಲಿ ಪಕ್ಷದ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಒಂದು ವೇಳೆ ಇವೆರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಬಿಜೆಪಿ, ಕಾಂಗ್ರೆಸ್‌ಗಿಂತಲೂ ಜೆಡಿಎಸ್ ಹೆಚ್ಚಿನ ಸ್ಥಾನ ತನ್ನದಾಗಿಸಿಕೊಳ್ಳುತ್ತಿತ್ತು. ಈ ಅಂಶ ನೋಡಿದರೆ ಜಿಲ್ಲೆಯಲ್ಲಿ ಪಕ್ಷದ ಸ್ಥಿತಿ ಉತ್ತಮವಿದೆ. ಸಂಘಟನೆಗೆ ಆದ್ಯತೆ ನೀಡಿದರೆ ಬಿಜೆಪಿ, ಕಾಂಗ್ರೆಸ್‌ಗೆ ಟಾಂಗ್ ಕೊಡಬಹುದು ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿ

ಜೆಡಿಎಸ್‌ನಿಂದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಪತ್ನಿ ಸುನೀತಾ ಚವ್ಹಾಣ, ಶಾಸಕರ ಸಹೋದರ ರವಿಕುಮಾರ ಚವ್ಹಾಣ, ಮಾಜಿ ಶಾಸಕ ದಿ.ಆರ್.ಕೆ. ರಾಠೋಡ ಪುತ್ರ ಸುನೀಲ ರಾಠೋಡ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಸವರಾಜ ಮಾಲಗತ್ತಿ, ಬಿ.ವೈ.ಬೆಳ್ಳುಬ್ಬಿ, ಜೆಡಿಎಸ್ ಜಿಲ್ಲಾ ಎಸ್.ಸಿ. ಎಸ್‌ಟಿ ಘಟಕದ ಅಧ್ಯಕ್ಷ ಸಿದ್ದು ಕಾಮತ, ರಾಮು ರಾಠೋಡ ಆಕಾಂಕ್ಷಿಗಳಾಗಿದ್ದಾರೆ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ಕ್ಷೇತ್ರ ಪರಿಚಯ

1952ರಿಂದಲೇ ಈ ಕ್ಷೇತ್ರವಿದೆ. 1952- ಕಾಂಗ್ರೆಸ್, 1957 ಪಕ್ಷೇತರ, 1962ರಿಂದ 1980ರವರೆಗೂ ಕಾಂಗ್ರೆಸ್ ಗೆದ್ದಿತ್ತು. ನಂತರ 1984 ಜನತಾ ಪಾರ್ಟಿ, 1989, 1991ರಲ್ಲಿ ಕಾಂಗ್ರೆಸ್, 1996 ಜನತಾದಳ, 1998 ಕಾಂಗ್ರೆಸ್, 1999 ಇಲ್ಲಿಯವರೆಗೂ ಬಿಜೆಪಿಯೇ ಗೆಲುವಿನ ನಗೆ ಬೀರಿದೆ.

8ರಲ್ಲಿ ’ಕೈ’, ಬಿಜೆಪಿ 3, ಜೆಡಿಎಸ್ 2 

ವಿಜಯಪುರ ಜಿಲ್ಲೆಯ 8 ವಿಧಾನಸಭೆ ಮತ ಕ್ಷೇತ್ರಗಳಲ್ಲಿ ವಿಜಯಪುರ, ದೇವರಹಿಪ್ಪರಗಿ, ಮುದ್ದೇಬಿಹಾಳ ಬಿಜೆಪಿ-3, ಬಬಲೇಶ್ವರ, ಬಸವನ ಬಾಗೇವಾಡಿ ಹಾಗೂ ಇಂಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್-3, ನಾಗಠಾಣ ಮೀಸಲು ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಜೆಡಿಎಸ್-2 ಸ್ಥಾನಗಳನ್ನು ಪಡೆದುಕೊಂಡಿವೆ.

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

ಯಾರ‌್ಯಾರು ಪೈಪೋಟಿ?

ಬಿಜೆಪಿ: ರಮೇಶ ಜಿಗಜಿಣಗಿ

ಕಾಂಗ್ರೆಸ್: ರಾಜು ಆಲಗೂರ, ಪ್ರಕಾಶ ರಾಠೋಡ, ಅರ್ಜುನ ರಾಠೋಡ, ಸುರೇಶ ಘೋಣಸಗಿ, ಕಾಂತಾ ನಾಯಕ, ಮನೋಹರ ಐನಾಪುರ, ಜಲಜಾ ನಾಯಕ, ಶಿವರಾಜ ತಂಗಡಗಿ, ವಿಠಲ ಕಟಕದೊಂಡ.

ಜೆಡಿಎಸ್: ನಾಗಠಾಣ ಶಾಸಕ ದೇವೇಂದ್ರ ಚವ್ಹಾಣ ಪತ್ನಿ ಸುನೀತಾ, ಶಾಸಕರ ಸಹೋದರ ರವಿಕುಮಾರ ಚವ್ಹಾಣ, ಸುನೀಲ ರಾಠೋಡ, ಬಸವರಾಜ ಮಾಲಗತ್ತಿ, ಬಿ.ವೈ.ಬೆಳ್ಳುಬ್ಬಿ, ಸಿದ್ದು ಕಾಮತ, ರಾಮು ರಾಠೋಡ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

3 ಸಚಿವರಿಗೆ ಅಗ್ನಿ ಪರೀಕ್ಷೆ:

ಜಿಲ್ಲೆಯ ಮೂವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಸ್ಥಾನ ಅಲಂಕರಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಪಕ್ಷದಿಂದ ಮತ್ತು ಒಬ್ಬರು ಜೆಡಿಎಸ್‌ನಿಂದ ಸಚಿವರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವುದು ಮೂವರಿಗೂ ಮಹತ್ವದ್ದಾಗಿದೆ.

-ರುದ್ರಪ್ಪ ಅಸಂಗಿ

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?