ಮಹಾಭಾರತ ಸಂಗ್ರಾಮ: ಚಿಕ್ಕೋಡಿ ಕ್ಷೇತ್ರ

ಬೆಳಗಾವಿ[ಫೆ.13]: ಬೆಳಗಾವಿ ಜಿಲ್ಲೆ ವಿಭಜನೆಯಾದರೆ ಕರ್ನಾಟಕದ ಭೂಪಟದಲ್ಲಿ ಸೃಷ್ಟಿ​ಯಾ​ಗ​ಲಿ​ರುವ ಮತ್ತೊಂದು ಜಿಲ್ಲಾ ಕೇಂದ್ರ ಚಿಕ್ಕೋಡಿ. ಈ ಲೋಕ​ಸಭಾ ಕ್ಷೇತ್ರದ ಹುಟ್ಟಿ​ದಾ​ರಭ್ಯ ಇಲ್ಲಿನ ರಾ​ಜ​ಕಾ​ರ​ಣದ ಮೇಲೆ ಸಕ್ಕರೆ ಲಾಬಿ​ಯ​ದ್ದೇ ಅಧಿ​ಪತ್ಯ. ಹೀಗಾ​ಗಿಯೇ ಈ ಲೋಕ​ಸಭಾ ಕ್ಷೇತ್ರದ ವ್ಯಾಪ್ತಿ​ಯಲ್ಲಿ ಬರುವ ಎಂಟು ಮಂದಿ ವಿಧಾ​ನ​ಸಭಾ ಸದ​ಸ್ಯರ ಪೈಕಿ ಮೂವರು (ಹು​ಕ್ಕೇರಿ ವಿಧಾ​ನ​ಸಭಾ ಕ್ಷೇತ್ರದ ಶಾಸಕ ಉಮೇಶ್‌ ಕತ್ತಿ, ಯಮ​ಕ​ನ​ಮ​ರ​ಡಿ ಶಾಸಕ ಸತೀಶ್‌ ಜಾರ​ಕಿ​ಹೊಳಿ, ಕಾಗ​ವಾ​ಡ ಶಾಸ​ಕ ಶ್ರೀಮಂತ ಪಾಟೀ​ಲ) ಸಕ್ಕರೆ ಕಾರ್ಖಾ​ನೆ​ಗಳ ಮಾಲೀ​ಕ​ರಾ​ಗಿ​ದ್ದಾರೆ. ಉಳಿ​ದ​ವರು ಕೂಡ ಒಂದಲ್ಲ ಒಂದು ರೀತಿ ಸಕ್ಕರೆ ಕಾರ್ಖಾ​ನೆ​ಗ​ಳೊಂದಿಗೆ ಸಂಬಂಧ​ವೊಂದಿ​ದ್ದಾರೆ. ಸಕ್ಕರೆ ಕಾರ್ಖಾನೆ ಎಂಬುದು ಈ ಭಾಗ​ದಲ್ಲಿ ಪಕ್ಕಾ ವೋಟ್‌ ಬ್ಯಾಂಕ್‌ ಇದ್ದಂತೆ.

ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

ಇಂತಹ ಸಕ್ಕರೆಯ ಕ್ಷೇತ್ರ ಚಿಕ್ಕೋಡಿಗೆ ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಇತಿ​ಹಾಸ ನೋಡಿ​ದರೆ ಚಿಕ್ಕೋಡಿ ಕಾಂಗ್ರೆ​ಸ್‌ನ ಪಕ್ಕಾ ಪಾಳ​ಯ​ಪಟ್ಟು. ಬಿ.ಶಂಕ​ರಾ​ನಂದ ಅವರು ಸತ​ತ​ವಾಗಿ ಏಳು ಬಾರಿ ಗೆದ್ದು ಸೋಲಿ​ಲ್ಲದ ಸರ​ದಾರ ಎನಿಸಿದ ಕ್ಷೇತ್ರ​ವಿದು. ಇಂತಹ ಕಾಂಗ್ರೆಸ್‌ ನೆಲ​ವೀ​ಡಿ​ನಲ್ಲಿ ಕಳೆದ ಬಾರಿ ಪ್ರಕಾಶ್‌ ಹುಕ್ಕೇರಿ ಒಲ್ಲದ ಮನ​ಸ್ಸಿ​ನಿಂದಲೇ ಚುನಾ​ವ​ಣೆಗೆ ಸ್ಪರ್ಧಿಸಿ ಲೋಕ​ಸಭಾ ಸದಸ್ಯರಾದರು.

ಬಿಜೆಪಿ ಟಿಕೆಟ್‌ಗೆ ಪ್ರಭಾವಿಗಳ ಪೈಪೋಟಿ

ಈ ಬಾರಿ ಕಾಂಗ್ರೆ​ಸ್‌​ನಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೆ ಹೇಳಿಕೊಳ್ಳುವಂತಹ ಪ್ರಬಲ, ಸೂಕ್ತ ಆಕಾಂಕ್ಷಿಗಳೇ ಇಲ್ಲ. ಹಾಗಾಗಿ, ಮತ್ತೊಮ್ಮೆ ಪ್ರಕಾಶ ಹುಕ್ಕೇರಿ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸುವ ಸಾಧ್ಯತೆಯೇ ಹೆಚ್ಚು. ಆದರೆ, ಬಿಜೆ​ಪಿ​ಯಲ್ಲಿ ಪರಿ​ಸ್ಥಿತಿ ಉಲ್ಟಾ. ಇಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು. ಹೀಗಾಗಿ ಪ್ರಭಾವಿ ನಾಯಕರ ನಡುವೆಯೇ ಭಾರೀ ಪೈಪೋಟಿ ನಡೆಯುತ್ತಿದೆ. ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ , ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ಅಮರಸಿಂಹ ಪಾಟೀಲ, ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಮತ್ತಿತರ ಪ್ರಭಾವಿ ನಾಯಕರ ದಂಡೇ ಟಿಕೆಟ್‌ಗೆ ಪೈಪೋಟಿ ನಡೆ​ಸಿದೆ. ಇದರ ನಡು​ವೆಯೇ ಕಾಂಗ್ರೆಸ್‌ ಸಂಸದ ಪ್ರಕಾಶ್‌ ಹುಕ್ಕೇರಿ ಅವ​ರನ್ನು ಬಿಜೆ​ಪಿಗೆ ಸೆಳೆದು ಅವರಿಗೆ ಟಿಕೆಟ್‌ ನಡೆ​ಯುವ ಪ್ರಯತ್ನ ನಡೆ​ದಿದೆ ಎಂಬ ವದಂತಿಯೂ ಹಬ್ಬಿತ್ತು. ಆದರೆ, ಅದು ಈಗ ತಣ್ಣ​ಗಾ​ಗಿದೆ.

ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

ಆದರೆ, ಅಸಲಿ ಪೈಪೋಟಿ ಇರು​ವುದು ಮಾಜಿ ಶಾಸಕ ಲಕ್ಷ್ಮಣ ಸವದಿ ಹಾಗೂ ಪ್ರಭಾವಿ ಶಾಸಕ ಉಮೇಶ್‌ ಕತ್ತಿ ಅವರ ಸಹೋ​ದರರೂ ಆದ ಮಾಜಿ ಸಂಸದ ರಮೇಶ್‌ ಕತ್ತಿ ಅವರ ನಡುವೆ. ಬಿಜೆ​ಪಿಯ ಪ್ರಭಾವಿ ನಾಯ​ಕರು ಲಕ್ಷ್ಮಣ್‌ ಸವದಿ ಅವ​ರನ್ನೇ ಚಿಕ್ಕೋಡಿ ಲೋಕ​ಸಭಾ ಕ್ಷೇತ್ರ​ದಿಂದ ಕಣಕ್ಕೆ ಇಳಿ​ಸಲು ಮನಸ್ಸು ಮಾಡಿ​ದ್ದಾರೆ ಎನ್ನ​ಲಾ​ಗು​ತ್ತಿದೆ. ಹೀಗಾಗಿ ಕತ್ತಿ ಸಹೋ​ದ​ರರು ಕಂಗೆ​ಟ್ಟಿದ್ದು, ಅವರೂ ತೀವ್ರ ಲಾಬಿ ನಡೆ​ಸಿ​ದ್ದಾರೆ. ಈ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ ಲಕ್ಷ್ಮಣ್‌ ಸವ​ದಿಗೆ ಟಿಕೆಟ್‌ ದೊರೆ​ಯುವ ಸಾಧ್ಯತೆ ಹೆಚ್ಚು ಎಂಬ ಗುಲ್ಲು ಇರುವ ಕಾರ​ಣ​ದಿಂದಾಗಿ ಕಾಂಗ್ರೆಸ್‌ ಪಕ್ಷವು ಕತ್ತಿ ಸಹೋ​ದ​ರ​ರನ್ನು ಕಾಂಗ್ರೆ​ಸ್‌ಗೆ ಸೆಳೆ​ಯಲು ಯತ್ನಿ​ಸಿತ್ತು ಎಂದು ಹೇಳ​ಲಾ​ಗು​ತ್ತಿದೆ. ಈ ಕಾರ​ಣ​ಕ್ಕಾ​ಗಿಯೇ ರಾಜ್ಯದ ಸಮ್ಮಿಶ್ರ ಸರ್ಕಾರ ಕೆಡ​ವಲು ಬಿಜೆಪಿ ಆಪ​ರೇ​ಷನ್‌ ಕಮಲ ನಡೆ​ಸಿ​ದರೆ, ಅದಕ್ಕೆ ಪರ್ಯಾ​ಯ​ವಾಗಿ ಕಾಂಗ್ರೆ​ಸ್‌-ಜೆಡಿ​ಎಸ್‌ ನಡೆ​ಸುವ ರಿವ​ರ್ಸ್‌ ಆಪ​ರೇ​ಷನ್‌ನಲ್ಲಿ ಕೇಳಿ ಬಂದ ಹೆಸ​ರು​ಗಳ ಪೈಕಿ ಈ ಕತ್ತಿ ಸಹೋ​ದ​ರರು ಇದ್ದರು ಎಂಬುದು ವಿಶೇ​ಷ.

ಇನ್ನು ಮತ್ತೊಂದು ಆಯಾ​ಮ​ದಲ್ಲಿ ರಾಜ್ಯಸಭಾ ಸದಸ್ಯ ಪ್ರಭಾ​ಕರ ಕೋರೆ ಸಹ ತೀವ್ರ ಪೈಪೋಟಿ ನಡೆ​ಸಿ​ದ್ದಾರೆ. ಹೀಗಾಗಿ ತಮ್ಮ ನಾಯಕರ ಮೂಲಕ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೆಟ್‌ ದೊರೆಯುತ್ತದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ನೆಲೆ ಇಲ್ಲದ ಜೆಡಿಎಸ್‌

ಚಿಕ್ಕೋಡಿ ಲೋಕ​ಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವಿದ್ದರೆ, ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಿದೆ. ರಾಯಬಾಗ, ಕುಡಚಿ ವಿಧಾನಸಭೆ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದರೆ, ಯಮಕನಮರಡಿ ವಿಧಾನಸಭೆ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಕಾಂಗ್ರೆಸ್‌- ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವುದು ನಿಶ್ಚಿತ. ಜೆಡಿಎಸ್‌ ಅಂತೂ ಇಲ್ಲಿ ಸ್ಪರ್ಧಿಸುವುದು ಅನು​ಮಾ​ನ. ಏಕೆಂದರೆ, ಜೆಡಿಎಸ್‌ ಪಕ್ಷಕ್ಕೆ ಇಲ್ಲಿ ನೆಲೆಯೇ ಇಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಬೆಂಬಲ ನೀಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಚುನಾವಣೆಯಲ್ಲಿಯೂ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಸ್ಪರ್ಧಿಸುತ್ತಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಹಾಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರು ಕಾಂಗ್ರೆಸ್‌ಗೆ ವಲಸೆ ಹೋಗಿರುವುದು ಜೆಡಿಎಸ್‌ಗೆ ಇದೀಗ ಆಕಾಂಕ್ಷಿಗಳೇ ಇಲ್ಲವಾಗಿದೆ.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಈ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಪ್ರಕಾಶ ಹುಕ್ಕೇರಿ ಪ್ರಬಲ ಲಿಂಗಾಯತ ನಾಯಕರಾಗಿದ್ದು, ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಹುಕ್ಕೇರಿ ಅವರು ಚಿಕ್ಕೋಡಿ-ಸದಲಗಾ, ನಿಪ್ಪಾಣಿ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಸೀಮಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿಯ ಪ್ರಮುಖ ಆಕಾಂಕ್ಷಿ. ಕತ್ತಿ ಸಹೋದರರು ಕೂಡ ಇಲ್ಲಿ ಸಹಕಾರ ಸಂಘ ಹಾಗೂ ಸಕ್ಕರೆ ಲಾಬಿ ಮೂಲಕ ಪ್ರಬಲ ಹಿಡಿತ ಹೊಂದಿದ್ದಾರೆ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ರೇಸ್‌ನಲ್ಲಿ ಯಾರು?

ಕಾಂಗ್ರೆಸ್‌: ಹಾಲಿ ಸಂಸದ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ಎ.ಬಿ. ಪಾಟೀಲ, ಲಕ್ಷ್ಮಣರಾವ್‌ ಚಿಂಗಳೆ, ಶ್ಯಾಮ ಘಾಟಗೆ

ಬಿಜೆಪಿ: ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ, ಮಹಾಂತೇಶ ಕವಟಗಿಮಠ, ಅಮರಸಿಂಹ ಪಾಟೀಲ

ಜೆಡಿಎಸ್‌: ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

8 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಸಮಬಲ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ನಾಲ್ಕು ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿವೆ. ಚಿಕ್ಕೋಡಿ- ಸದಲಗಾ, ಅಥಣಿ, ಯಮಕನಮರಡಿ, ಕಾಗವಾಡದಲ್ಲಿ ಕಾಂಗ್ರೆಸ್‌ ಶಾಸಕರು ಇದ್ದರೆ, ನಿಪ್ಪಾಣಿ, ಕುಡಚಿ, ಹುಕ್ಕೇರಿ ಹಾಗೂ ರಾಯಬಾಗದಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದಾರೆ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಜಿಗಜಿಣಗಿ 3 ಬಾರಿ 3 ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರವಿದು

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪರಮಾಪ್ತರಾಗಿದ್ದ ಕೇಂದ್ರ ಸಚಿವ ದಿ.ಬಿ.ಶಂಕರಾನಂದ ಅವರು ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು 7 ಬಾರಿ ಪ್ರತಿನಿಧಿಸಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ನಾಯಕರೂ ಆಗಿದ್ದರು. ಚಿಕ್ಕೋಡಿ ಎಂದರೆ ಬಿ. ಶಂಕರಾನಂದ ಎಂದೇ ಕರೆಯುವಂತಾಗಿತ್ತು. 1967ರಿಂದ 1991ರವರೆಗೆ ಸತತವಾಗಿ ಶಂಕರಾನಂದ ಅವರು ಕಾಂಗ್ರೆಸ್‌ನಿಂದ ಲೋಕಸಭೆ ಪ್ರವೇಶಿಸುವ ಮೂಲಕ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದರು. ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, 1996ರಲ್ಲಿ ಜನತಾದಳದಿಂದ ರತ್ನಮಾಲಾ ಸವಣೂರು ಅವರನ್ನು ಕಣಕ್ಕಿಳಿಸುವ ಮೂಲಕ ‘ಸೋಲಿಲ್ಲದ ಸರದಾರ’ ಬಿ.ಶಂಕರಾನಂದ ಅವರನ್ನು ಸೋಲಿಸಲಾಯಿತು. ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ಶಂಕರಾನಂದ ಅವರು ದೂರವೇ ಉಳಿದರು. ರಮೇಶ ಜಿಗಜಿಣಗಿ ಅವರು 1998 (ಲೋಕಶಕ್ತಿ), 1999(ಜೆಡಿಯು) ಮತ್ತು 2004 (ಬಿಜೆಪಿ) ಸತತವಾಗಿ ಆಯ್ಕೆಯಾಗಿದ್ದರು. ಮೀಸಲು ಕ್ಷೇತ್ರ ಸಾಮಾನ್ಯವಾದ ಬಳಿಕ ರಮೇಶ ಜಿಗಜಿಣಗಿ ಅವರು ತವರು ಜಿಲ್ಲೆ ವಿಜಯಪುರದತ್ತ ಮುಖ ಮಾಡಿದರು.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ರಾಯಬಾಗ ಹುಲಿ ಎಂದೇ ಖ್ಯಾತರಾಗಿದ್ದ ವಿ.ಎಲ್‌.ಪಾಟೀಲ ಅವರು 1962ರಲ್ಲಿ ಕಾಂಗ್ರೆಸ್‌ನಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದರು. 1967ರಲ್ಲಿ ಈ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದರಿಂದ ವಿ.ಎಲ್‌.ಪಾಟೀಲ ಅವರ ರಾಜಕೀಯ ಓಟಕ್ಕೆ ಬ್ರೇಕ್‌ ಬಿತ್ತು.ಆ ಬಳಿಕ ಬಿ.ಶಂಕರಾನಂದ ಅವರೇ ಸತತವಾಗಿ ಏಳು ಬಾರಿ ಆಯ್ಕೆಯಾದರು. ರಮೇಶ ಜಿಗಜಿಣಗಿ ಅವರು 1998 (ಲೋಕಶಕ್ತಿ), 1999(ಜೆಡಿಯು) ಮತ್ತು 2004 (ಬಿಜೆಪಿ) ಸತತವಾಗಿ ಆಯ್ಕೆಯಾಗಿದ್ದರು. ಮೀಸಲು ಕ್ಷೇತ್ರ ಸಾಮಾನ್ಯವಾದ ಬಳಿಕ ರಮೇಶ ಜಿಗಜಿಣಗಿ ಅವರು ತವರು ಜಿಲ್ಲೆ ವಿಜಯಪುರದತ್ತ ಮುಖ ಮಾಡಿದರು.

-ಶ್ರೀಶೈಲ ಮಠದ

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?