Asianet Suvarna News Asianet Suvarna News

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಅರೆಮಲೆನಾಡು ಪ್ರದೇಶ ಹಾಸನ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ರಾಜಕೀಯ ಅಖಾಡ ಹಾಗೂ ಜೆಡಿಎಸ್ ಭದ್ರಕೋಟೆ. 2014ರಿಂದ ಗೆಲ್ಲುತ್ತಲೇ ಬಂದಿರುವ ದೇವೇಗೌಡರು ಈ ಬಾರಿಯೂ ಸ್ಪರ್ಧೆ ಮಾಡಿದರೆ ಅವರನ್ನು ಮಣಿಸುವುದು ಕಷ್ಟ ಎನ್ನುವ ವಾತಾವರಣವಿದೆ. ಆದರೆ ಮೊಮ್ಮಗ ಪ್ರಜ್ವಲ್ ರೇವಣ್ಣಗಾಗಿ ಅವರು ತಮ್ಮ ಕ್ಷೇತ್ರ ತ್ಯಾಗ ಮಾಡಿ ಬೇರೆ ಕ್ಷೇತ್ರದ ತಲಾಶ್ ನಲ್ಲಿದ್ದಾರೆ. 

Loksabha Elections 2019 Ticket fight BJP CT Ravi Or Shobha May contest Against Prajwal Revanna in Hassan
Author
Bengaluru, First Published Feb 1, 2019, 1:43 PM IST

ಹಾಸನ :   ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಚುನಾವಣಾ ರಾಜಕೀಯ ಪ್ರವೇಶಕ್ಕೆ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರ ವೇದಿಕೆಯಾಗುತ್ತಿದೆ.

ಹಾಲಿ ಈ ಕ್ಷೇತ್ರದ ಸದಸ್ಯರಾಗಿರುವ ದೇವೇಗೌಡರು ಹೊಸ ಪಿಚ್‌ಗೆ ಹೋಗದಿದ್ದರೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯಂತೂ ಏಕಮುಖವಾಗಿ ಚುನಾವಣೆ ನಡೆದು, ಗೌಡರು ಯಾವುದೇ ಪರಿಶ್ರಮವಿಲ್ಲದೇ ಲೀಲಾಜಾಲವಾಗಿ 7ನೇ ಬಾರಿ (ಹಾಸನದಿಂದ 6ನೇ ಬಾರಿ) ಲೋಕಸಭೆಗೆ ಪ್ರವೇಶ ಮಾಡುತ್ತಿದ್ದರು. ಆದರೆ ಗೌಡರು ಈಗ ತಮ್ಮ ಹೋಂ ಪಿಚ್‌ ಅನ್ನು ಮೊಮ್ಮಗ ಪ್ರಜ್ವಲ್‌ ರೇವಣ್ಣನವರಿಗೆ ಬಿಟ್ಟು ಕೊಟ್ಟಿರುವುದರಿಂದ ಜಿಲ್ಲೆಯ ರಾಜಕಾರಣದಲ್ಲಿ ಹೊಸ ಬಗೆಯ ವಾತಾವರಣ ನಿರ್ಮಾಣವಾಗುತ್ತಿದೆ.

ತಾತನ ಪಿಚ್‌ನಲ್ಲಿ ಪ್ರಜ್ವಲ್‌ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಣಜಿಯಂತಹ ಪಂದ್ಯಗಳನ್ನು ಆಡದಿದ್ದರೂ, ವಿವಿಧ ಪಂದ್ಯಗಳಲ್ಲಿ ತಮ್ಮ ತಂದೆ ರೇವಣ್ಣ, ತಾತ ದೇವೇಗೌಡ ಮತ್ತು ತಾಯಿ ಭವಾನಿ ರೇವಣ್ಣ ಅವರನ್ನು ಗೆಲ್ಲಿಸುವಲ್ಲಿ ಶ್ರಮ ಹಾಕುವ ಮೂಲಕ ಅನುಭವ ಪಡೆದಿದ್ದಾರೆ. ಭವಾನಿ ರೇವಣ್ಣನವರನ್ನು ಹೊಳೆನರಸೀಪುರ ತಾಲೂಕು ಹಳೇಕೋಟೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ನಿಲ್ಲಿಸದೆ ಪ್ರಜ್ವಲ್‌ರನ್ನು ಕಣಕ್ಕಿಳಿಸಿದ್ದಿದ್ದರೆ ರಣಜಿಯನ್ನಾದರೂ ಸ್ವತಃ ಪಿಚ್‌ನಲ್ಲಿ ಆಡುವ ಅವಕಾಶ ಲಭ್ಯವಾಗುತ್ತಿತ್ತು.

ಪ್ರಜ್ವಲ್‌ ಗೆಲುವು ಸುಲಭವೇ?

ಹಾಗೆ ನೋಡಿದರೆ ಹಾಸನ ಲೋಕಸಭಾ ಕ್ಷೇತ್ರ ಹಿಂದಿನಿಂದಲೂ ಜೆಡಿಎಸ್‌ನ ಭದ್ರಕೋಟೆ. ಇಲ್ಲಿ ಯಾವಾಗಲೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆಯೇ ಹಣಾಹಣಿ ನಡೆದಿದ್ದಿದೆ. ಇಲ್ಲಿ ಬಿಜೆಪಿ ಒಂದು ಬಾರಿಯೂ ಗೆದ್ದಿಲ್ಲ. ಆದರೆ ಬದಲಾದ ರಾಜಕೀಯ ಸ್ಥಿತಿಗತಿಗಳಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟರೆ ಜಿಲ್ಲೆಯ ಕಾಂಗ್ರೆಸ್‌ ನಾಯಕರಲ್ಲಿ ಅಪಸ್ವರ ಕೇಳಿ ಬರುವುದುಂಟು. ಆದರೆ ಜೆಡಿಎಸ್‌ನಲ್ಲಿ ಅದಕ್ಕೆ ಅವಕಾಶ ಇಲ್ಲವೇ ಇಲ್ಲ. ಪಕ್ಷದ ವರಿಷ್ಠ ನಾಯಕ ದೇವೇಗೌಡರು ಈಗಾಗಲೇ ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣನವರೇ ಈ ಕ್ಷೇತ್ರದಿಂದ ಸ್ಪರ್ಧಿ ಎಂದು ಘೋಷಿಸಿ ಆಗಿದೆ. ಇದನ್ನು ಜಿಲ್ಲೆಯ ಜೆಡಿಎಸ್‌ ನಾಯಕರು ಮರುಮಾತಿಲ್ಲದೇ ಒಪ್ಪಿ ಕೆಲಸ ಮಾಡತೊಡಗಿದ್ದಾರೆ.

ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿದಲ್ಲಿ ಮಾತ್ರ ಹೋರಾಟ ರೋಚಕವಾಗಿರಲಿದೆ. ಇಲ್ಲದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವ ಪ್ರಜ್ವಲ್‌ ರೇವಣ್ಣ ಅವರ ಲೋಕಸಭಾ ಪ್ರವೇಶದ ಹಾದಿ ಸುಗಮವಾಗಲಿದೆ. ತಮ್ಮ ವಾರಸುದಾರನನ್ನಾಗಿ ಮೊಮ್ಮಗನನ್ನು ಚುನಾವಣಾ ರಾಜಕಾರಣಕ್ಕೆ ತರುತ್ತಿರುವುದರಿಂದ ದೇವೇಗೌಡರಿಗೂ ಈ ಬಾರಿಯ ಚುನಾವಣೆ ಸಹಜವಾಗಿಯೇ ಪ್ರತಿಷ್ಠೆಯ ಕಣವಾಗಿ ಮಾರ್ಪಡಲಿದೆ.

ಕ್ಷೇತ್ರಕ್ಕಾಗಿ ಕಾಂಗ್ರೆಸ್‌ ನಾಯಕರ ಪಟ್ಟು

ಕಾಂಗ್ರೆಸ್‌ ಬಣದಲ್ಲಿ ಉತ್ಸಾಹದ ವಾತಾವರಣವೇ ಕಾಣುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್‌ ಮುಖಂಡರಾದ ಮಾಜಿ ಸಚಿವರೂ ಆದ ಎ.ಮಂಜು ಮತ್ತು ಬಿ.ಶಿವರಾಂ ಅವರು ಮೈತ್ರಿ ಏರ್ಪಟ್ಟಲ್ಲಿ ಹಾಸನ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲೇಬೇಕೆಂದು ಬಹಿರಂಗವಾಗಿ ಹಲವಾರು ಬಾರಿ ಹೇಳಿದ್ದಾರೆ. ಇವರ ಮಾತನ್ನು ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪದಿದ್ದರೆ ಮಂಜು ಅವರು ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಇದೇ ಮಂಜು ಕಾಂಗ್ರೆಸ್‌ ಅಭ್ಯರ್ಥಿಯಾಗಿ ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಯಾರು?

ಬಿಜೆಪಿಯಲ್ಲಿ ಅಭ್ಯರ್ಥಿ ಹುಡುಕಾಟ, ತಡಕಾಟ ಆರಂಭವಾಗಿದೆ. ಕುರುಬ ಸಮಾಜಕ್ಕೆ ಸೇರಿದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಅವರು ಟಿಕೆಚ್‌ ಆಕಾಂಕ್ಷಿಗಳಾಗಿದ್ದಾರೆ. ಏತನ್ಮಧ್ಯೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸಿ.ಟಿ.ರವಿ ಮತ್ತು ಚಿಕ್ಕಮಗಳೂರು ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಕೂಡ ಹಾಸನದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಸ್ಥಳೀಯ ಬಿಜೆಪಿ ವಲಯದಲ್ಲಿ ಪ್ರಸ್ತಾಪವಾಗುತ್ತಿದೆ. ಆದರೆ, ಅದರಲ್ಲಿ ಹುರುಳಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ತಮ್ಮ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆ ಇರುವುದರಿಂದ ಜೆಡಿಎಸ್‌ ಜೊತೆಗಿನ ಸ್ಥಾನ ಹೊಂದಾಣಿಕೆ ನಂತರ ಕಾಂಗ್ರೆಸ್ಸಿನ ಅತೃಪ್ತ ಮುಖಂಡರು ವಲಸೆ ಬರಬಹುದು ಎಂಬ ನಿರೀಕ್ಷೆ ಬಿಜೆಪಿ ಪಾಳೆಯದಲ್ಲಿದೆ. ಮಾಜಿ ಸಚಿವ ಮಂಜು ಅವರು ಹಿಂದೆ ಬಿಜೆಪಿಯಲ್ಲೇ ಇದ್ದುದರಿಂದ ಮತ್ತು ಸದ್ಯ ಜೆಡಿಎಸ್‌ ವಿರುದ್ಧ ಹರಿಹಾಯುತ್ತಿರುವುದರಿಂದ ಪಕ್ಷ ತೊರೆದು ಬಿಜೆಪಿಗೆ ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಸಿಟ್ಟು ಬಿಜೆಪಿಗೆ ಲಾಭ

ಮೈತ್ರಿ ಏರ್ಪಟ್ಟು ಕಾಂಗ್ರೆಸ್‌ ಅಭ್ಯರ್ಥಿ ಹೂಡದಿದ್ದರೆ ಬಿಜೆಪಿ ಅಭ್ಯರ್ಥಿ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಗಳಿವೆ. ದೇವೇಗೌಡರೇ ಸ್ಪರ್ಧಿಸಿದ್ದರೆ ಈ ಮಾತನ್ನು ಹೇಳಲಾಗುತ್ತಿರಲಿಲ್ಲ. ಗೌಡರ ಮೊಮ್ಮಗ ಪ್ರಜ್ವಲ್‌ ನಿಲ್ಲುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಒಡ್ಡುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ, ಗೌಡರ ಸ್ಪರ್ಧೆ ಸೃಷ್ಟಿಸುತ್ತಿದ್ದ ವಾತಾವರಣವೇ ಬೇರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಹೊಂದಾಣಿಕೆ ಆಗಿರಬಹುದು. ಆದರೆ ಹಾಸನ ಜಿಲ್ಲೆಯಲ್ಲಿ ಚುನಾವಣೆ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ಒಂದಾಗುವುದು ಕಷ್ಟಕರವೇ. ಇದು ಬಿಜೆಪಿ ಅಭ್ಯರ್ಥಿಗೆ ಪರೋಕ್ಷವಾಗಿ ಸಹಕಾರವಾಗುತ್ತದೆ ಎಂಬ ಮಾತುಗಳನ್ನು ತಳ್ಳಿ ಹಾಕುವಂತಿಲ್ಲ.

2009ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಹಾಸನ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಹಾಕಿರಲಿಲ್ಲ. ಜೆಡಿಎಸ್‌ನಿಂದ ಪಟೇಲ್‌ ಶಿವರಾಂ ಸ್ಪರ್ಧಿಸಿ ಗೆದ್ದಿದ್ದರು. ಬಿಜೆಪಿಯ ನಾರಾಯಣ ನಿರೀಕ್ಷೆಗಿಂತ ಹೆಚ್ಚು ಮತ ಪಡೆದಿದ್ದರು.

ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್‌ ಶಾಸಕರಿಲ್ಲ

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಇವೆ. ಹಾಸನ, ಹೊಳೆನರಸೀಪುರ, ಸಕಲೇಶಪುರ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಅರಕಲಗೂಡು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಈ ಪೈಕಿ ಹಾಸನ, ಕಡೂರಿನಲ್ಲಿ ಬಿಜೆಪಿ ಶಾಸಕರಿದ್ದರೆ, ಉಳಿದ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರು ಚುನಾಯಿತರಾಗಿದ್ದಾರೆ. ಕಾಂಗ್ರೆಸ್ಸಿನ ಒಬ್ಬರೇ ಒಬ್ಬ ಶಾಸಕರೂ ಇಲ್ಲ.

ದೇವೇಗೌಡ ಭದ್ರಕೋಟೆ

ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಹಾಸನ ಜಿಲ್ಲೆಯಾದ್ಯಂತ ಇದೆ. ಬೆಂಗಳೂರು ಉತ್ತರದಿಂದ ನಿಲ್ಲುತ್ತಾರೆ ಎಂದು ಹೇಳುತ್ತಿದ್ದರೂ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ದೇಶಕ್ಕೆ ಪ್ರಧಾನಿ ಮತ್ತು ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಹಾಸನ. ಜೆಡಿಎಸ್‌ನ ಶಕ್ತಿ ಕೇಂದ್ರ. 1991ರಲ್ಲಿ ಮೊದಲ ಬಾರಿಗೆ ಇಲ್ಲಿಂದ ಲೋಕಸಭೆಗೆ ಆಯ್ಕೆಯಾದ ದೇವೇಗೌಡರು, 1998ರಲ್ಲಿ ವಿಜೇತರಾಗಿದ್ದರು. 2002ರ ಉಪಚುನಾವಣೆಯಲ್ಲಿ ಕನಕಪುರದಿಂದ ಗೆದ್ದಿದ್ದರು. 2004, 2009, 2014ರಲ್ಲಿ ಹಾಸನದಿಂದ ಜಯಶಾಲಿಯಾಗಿದ್ದಾರೆ.

ವರದಿ :  ದಯಾಶಂಕರ ಮೈಲಿ

Follow Us:
Download App:
  • android
  • ios