ಮಹಾಭಾರತ ಸಂಗ್ರಾಮ: ಮಂಡ್ಯ ಕ್ಷೇತ್ರ

ಮಂಡ್ಯ[ಜ.26]: ಇಡೀ ಕ್ಷೇತ್ರದ ಜನತೆ ಒಂದೇ ನಿರ್ಧಾರ ಕೈಗೊಂಡಂತೆ ಮತ ಹಾಕುವ ರಾಜಕೀಯ ಪ್ರಜ್ಞೆ ಕರುನಾಡಿನ ಯಾವುದಾದರೂ ಒಂದು ಜಿಲ್ಲೆಗೆ ಇದ್ದರೆ ಅದು ಮಂಡ್ಯ ಮಾತ್ರ. ಕಳೆದ ವಿಧಾನಸಭಾ ಚುನಾವಣೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಮಂಡ್ಯ ಲೋಕಸಭಾ ಕ್ಷೇತ್ರದ ಎಂಟಕ್ಕೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆದ್ದಿತ್ತು. ದಳದ ಪ್ರಭುಗಳು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಒಕ್ಕಲಿಗರ ಆಸ್ಮಿತೆಯನ್ನು ಯಶಸ್ವಿಯಾಗಿ ಜಾಗೃತಿಗೊಳಿಸಿದ್ದರ ಪರಿಣಾಮವಿದು.

ವಿಧಾನಸಭಾ ಚುನಾವಣೆ ನಂತರ ರಾಜ್ಯ ರಾಜಕಾರಣ ಹಲವು ಮಜಲುಗಳನ್ನು ಕಂಡಿದೆ. ಚುನಾವಣೆ ಯಲ್ಲಿ ಶರಂಪರ ಕಿತ್ತಾಡಿದವರು ಈಗ ಜತೆಗೂಡಿ ಸರ್ಕಾರ ರಚಿಸಿದ್ದಾರೆ. ಲೋಕಸಭೆಗೂ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಪಕ್ಕಾ ಎಂಬಂತಹ ಪರಿಸ್ಥಿತಿಯಿದೆ. ಮೈತ್ರಿ ಸಂಭವಿಸಿದರೆ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡದೇ ಕಾಂಗ್ರೆಸ್‌ಗೆ ಬೇರೆ ದಾರಿಯಿಲ್ಲ. ಕಾಂಗ್ರೆಸ್ ನಾಯಕತ್ವ ಈ ಮನಸ್ಥಿತಿಯಲ್ಲಿದ್ದರೂ ಕ್ಷೇತ್ರದಲ್ಲಿ ಜೆಡಿಎಸ್ ಜತೆ ತಲೆತಲಾಂತರದಿಂದ ಹೋರಾಡಿಕೊಂಡು ಬಂದಿರುವ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಮಾತ್ರ ಪರ್ಯಾಯ ಮಾರ್ಗದ ಹುಡುಕಾಟದಲ್ಲೇ ಇದ್ದಾರೆ. ಈ ಹುಡುಕಾಟವೇ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಅತ್ಯಂತ ಕುತೂಹಲಕಾರಿ ಯನ್ನಾಗಿ ಮಾಡಿದೆ.

ಕಾಂಗ್ರೆಸ್, ಜೆಡಿಎಸ್ ಎದುರಾಳಿ

ಈ ಕ್ಷೇತ್ರದ ಇತಿಹಾಸ ನೋಡಿದರೆ ಕಾಂಗ್ರೆಸ್- ಜೆಡಿಎಸ್ಸ್‌ಇಲ್ಲಿ ಹಿಂದಿನಿಂದಲೂ ಸಮಬಲದ ಹೋರಾಟ ನಡೆಸುತ್ತಾ ಬಂದಿವೆ. ಈ ಹಿಂದೆ 1989,1999, 2014, 2013ರಲ್ಲಿ ಕಾಂಗ್ರೆಸ್ ಪಾಲಾಗಿದ್ದ ಕ್ಷೇತ್ರವನ್ನು 1996, 2009, 2017, 2018ರಲ್ಲಿ ಜೆಡಿಎಸ್ ಬಾಚಿಕೊಂಡಿತ್ತು. ಆದರೆ, 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ನಡುವೆ ನೇರ ಕಾದಾಟ ನಡೆದಿತ್ತು. ಈ ಬಾರಿಯೂ ಬಹುತೇಕ ಅದೇ ಚಿತ್ರಣ ಮೂಡಲಿದೆ. ಪ್ರಶ್ನೆಯೆಂದರೆ, ಮೈತ್ರಿಯ ಪರಿಣಾಮವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ಮೈತ್ರಿ ಸೂತ್ರಕ್ಕೆ ಬದ್ಧವಾಗಿ ಜೆಡಿಎಸ್‌ಪರ ಕೆಲಸ ಮಾಡಿ ಅಸ್ತಿತ್ವ ಕದುಕೊಳ್ಳುತ್ತಾರೋ, ಒಳಗೊಳಗೆ ಜೆಡಿಎಸ್ ಪರ ನಿಲ್ಲುತ್ತಾರೋ ಅಥವಾ ಬಂಡಾಯವಾಗಿ ಯಾರನ್ನಾದರೂ ಕಣಕ್ಕಿಳಿಸಿ ಕ್ಷೇತ್ರ ರಂಗೇರುವಂತೆ ಮಾಡುತ್ತಾರೋ ಎಂಬುದು.

ಸುಮಗೆ ದಳ ಬೆಂಬಲ ಡೌಟ್

ಇಂತಹದೊಂದು ಸೂಚನೆ ಈಗಾಗಲೇ ಆರಂಭವಾಗಿದೆ. ಸಿನಿಮಾ ರಂಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂಬರೀಶ್ ಪತ್ನಿ ಸುಮಲತಾ ಅಥವಾ ಅವರ ಪುತ್ರ ಅಭಿಷೇಕ್ ಅವರನ್ನು ಕಣಕ್ಕೆ ಇಳಿಯುವಂತೆ ಪ್ರೇರೇಪಿಸುವ ಪ್ರಯತ್ನ ನಡೆದಿದೆ. ವಾಸ್ತವವಾಗಿ ಸುಮಲತಾ ಅವರಿಗೆ ಚುನಾವಣಾ ರಾಜಕಾರಣ ಇಷ್ಟವಾದರೂ, ಮಂಡ್ಯದಲ್ಲಿ ದಳಾಧಿಪತಿಗಳ ವಿರೋಧ ಕಟ್ಟಿಕೊಂಡು ಕಾಂಗ್ರೆಸ್‌ನಿಂದಲೋ ಅಥವಾ ಬಂಡಾಯ ಕಾಂಗ್ರೆಸ್ಸಿಗರಾಗಿಯೋ ಸ್ಪರ್ಧೆ ಮಾಡುವ ಯಾವ ಮನಸ್ಥಿತಿಯಲ್ಲೂ ಅವರು ಇಲ್ಲ. ಎಲ್ಲ ಸೇರಿ ಬೆಂಬಲಿಸಿದರೆ ಕಣಕ್ಕೆ ಇಳಿಯುವ ಮನಸ್ಸು ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ ಇಂತಹ ಕೊಡುಗೆಯನ್ನು ಅಂಬರೀಶ್ ಕುಟುಂಬಕ್ಕೆ ನೀಡುವ ಮನಸ್ಥಿತಿಯಲ್ಲಿ ಇಲ್ಲ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಮಾಜಿ ಸಚಿವ ಹಾಗೂ ದೇವೇಗೌಡರ ಕುಟುಂಬದ ವಿರುದ್ಧ ಸಡ್ಡು ಹೊಡೆಯುವ ಸಾಮರ್ಥ್ಯ ಹೊಂದಿರುವ ಚೆಲುವರಾಯ ಸ್ವಾಮಿ ಅವರನ್ನು ಬಂಡಾಯವಾಗಿ ನಿಲ್ಲಿಸುವ ಲೆಕ್ಕಾಚಾರವೂ ಇದೆ. ಆ ರೀತಿಯೇ ನಾದರೂ ಆದರೆ, ಆಗ ಜೆಡಿಎಸ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತುಸು ಪೈಪೋಟಿ ದೊರೆಯುವ ಸಾಧ್ಯತೆಯಿದೆ.

ದೇವೇಗೌಡ ಬದಲು ನಿಖಿಲ್?

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ 8 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂಬ ಚರ್ಚೆ ಗಹನವಾಗಿ ಆರಂಭವಾಗಿದೆ. ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ, ದಳಪತಿ ಮಂಡ್ಯ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಗೌಡರೇ ಮಂಡ್ಯದ ಅಖಾಡಕ್ಕೆ ಇಳಿದರೆ ಎಲ್ಲರೂ ಹಿಂದೆ ಸರಿಯುತ್ತಾರೆ. ಈ ಸುಲಭದ ತುತ್ತು ಗೌಡರಿಗೆ ಬೇಕಾದಂತೆ ಕಾಣುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಗೌಡ ಹೆಸರು ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ಮೂಲಕ ನಿಖಿಲ್ ಈ ಬಾರಿ ರಾಜಕೀಯ ಪ್ರವೇಶ ಮಾಡುವ ಲಕ್ಷಣ ತೋರತೊಡಗಿದ್ದಾರೆ.

ಶಿವರಾಮೇಗೌಡ ಕತೆ ಏನು?

ದೇವೇಗೌಡ ಅಥವಾ ನಿಖಿಲ್ ಅವರನ್ನು ಕಣಕ್ಕೆ ಇಳಿಸಲು ಒಲವು ಹೊಂದಿರುವ ಜೆಡಿಎಸ್ ನಾಯಕರುಗಳು ಹಾಲಿ ಸಂಸದ ಎಲ್.ಆರ್. ಶಿವರಾಮೇಗೌಡರ ರಾಜಕೀಯ ಭವಿಷ್ಯದ ಬಗ್ಗೆ ಆಲೋಚನೆ ಮಾಡಿದಂತಿಲ್ಲ. ಎರಡು ಬಾರಿ ನಾಗಮಂಗಲ ಕ್ಷೇತ್ರದಿಂದ ಶಾಸಕರಾಗಿದ್ದರು. ಬಿಡಿಎ ಅಧ್ಯಕ್ಷರೂ ಆಗಿದ್ದರು. ಈ ಹಿಂದೆ ಬಿಜೆಪಿಯಿಂದಲೂ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಿ ಸೋತಿದ್ದರು. 20 ವರ್ಷಗಳ ಕಾಲ ಯಾವುದೇ ಅಧಿಕಾರವಿಲ್ಲದೇ ಮನೆ ಸೇರಿದ್ದರು. ಕಳೆದ ನವೆಂಬರ್‌ನಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಅವಧಿಗೂ ಟಿಕೆಟ್ ಬೇಕು. 6 ತಿಂಗಳು ಮಾತ್ರ ನಂಗೆ ಅಧಿಕಾರ ಸಿಕ್ಕಿದೆ. ಸಾಕಷ್ಟು ಹಣ ವ್ಯಯ ಮಾಡಿದ್ದೇನೆ. ನನಗೆ ಟಿಕೆಟ್ ಬೇಕು ಎಂಬುದು ಅವರ ವಾದ. ಇದು ದಳಾಧಿಪತಿಗಳ ಕಿವಿಗೆ ಬೀಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಚೆಲುವರಾಯ ಬಂಡಾಯ?

ನಾಗಮಂಗಲದ ಮಾಜಿ ಶಾಸಕರೂ ಆಗಿರುವ ಮಾಜಿ ಮಂತ್ರಿ ಚೆಲುವರಾಯಸ್ವಾಮಿ ಬಿಟ್ಟರೆ ಜೆಡಿಎಸ್‌ಗೆ ಸಡ್ಡು ಹೊಡೆಯುವ ಸಾಮರ್ಥ್ಯ ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರಿಗೂ ಇಲ್ಲ. ಆದರೆ, ಕಾಂಗ್ರೆಸ್ ಮೈತ್ರಿಗೆ ಕ್ಷೇತ್ರ ಬಿಟ್ಟುಕೊಟ್ಟರೆ ಆಗ ಬಂಡಾಯ ಅಭ್ಯರ್ಥಿಯಾಗಿ ಚೆಲುವರಾಯ ಸ್ವಾಮಿ ಸ್ಪರ್ಧಿಸಬೇಕಾಗುತ್ತದೆ. ಹೈಕಮಾಂಡೇ ಮೈತ್ರಿ ಪರವಾಗಿರುವಾಗ ಬಂಡಾಯ ಅಭ್ಯರ್ಥಿಯಾದರೆ ಅದು ರಾಜಕೀಯ ಭವಿಷ್ಯಕ್ಕೂ ಹೊಡೆತ ನೀಡಬಹುದು ಎಂಬ ಭಯ ಅವರಿಗೆ ಇದೆ. ಇನ್ನೊಂದು ಕಡೆ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳು ನಡೆದಿವೆ. ಇಂತಹ ಅತಂತ್ರ ಸ್ಥಿತಿಯಲ್ಲಿರುವ ಚೆಲುವರಾಯ ಸ್ವಾಮಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲಕರ.

ಬಿಜೆಪಿಯಲ್ಲೂ ಪೈಪೋಟಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ 2 ಲಕ್ಷ 30 ಮತಗಳನ್ನು ಪಡೆದು ವೈರಿ ಪಕ್ಷಗಳೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಷ್ಟು ಸಾಧನೆ ಮಾಡಿದ್ದು ಬಿಜೆಪಿಗೆ ಹೊಸ ಕನಸು ಮೂಡಲು ಕಾರಣವಾಗಿದೆ. ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿದ್ದ ಸಿದ್ದರಾಮಯ್ಯಗೆ ಜಿಲ್ಲೆಯ ತುಂಬಾ ನೆಂಟಸ್ತಿಕೆ, ಗೆಳೆಯರ ಬಳಗವಿದೆ. ಜನ ಮತ್ತು ಹಣ ಬಲ ಇರುವ ಸದ್ಯದ ಬಿಜೆಪಿ ನಾಯಕರ ಸಾಲಿಗೆ ಸೇರುತ್ತಾರೆ.

ಈ ಬಾರಿ ಅವರು ಟಿಕೆಟ್ ಪಡೆವ ಪ್ರಯತ್ನದಲ್ಲಿದ್ದಾರೆ. ಇವರಿಗೆ, ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಶಾಸಕ ಡಾ. ಅಶ್ವತ್ಥನಾರಾ ಯಣ ಹತ್ತಿರದ ನೆಂಟ, ‘ರಾಜಕುಮಾರ’, ‘ಕೆಜಿಎಫ್’ ಚಿತ್ರಗಳ ನಿರ್ಮಾಪಕ ಮಂಡ್ಯದವರೇ ಆಗಿರುವ ಕಿರಗಂದೂರು ವಿಜಯ್ ಕುಮಾರ್ ಅವರು ಟಿಕೆಟ್‌ಗಾಗಿ ಪೈಪೋಟಿ ನೀಡುತ್ತಿದ್ದಾರೆ. ಬಿಜೆಪಿಗೆ ಇಲ್ಲಿ ತನ್ನ ಸಾಮರ್ಥ್ಯಕ್ಕಿಂತ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಸ್ಥಳೀಯ ಕಾಂಗ್ರೆಸ್ಸಿಗರು ಒಳಗೊಳಗೆ ನೀಡುವ ಬೆಂಬಲವನ್ನು ನೆಚ್ಚಿದೆ. ಜೆಡಿಎಸ್‌ನ ಏಕಮುಖ ಆರ್ಭಟ ಸ್ಥಳೀಯ ಕಾಂಗ್ರೆಸ್ಸಿಗರನ್ನು ಕಂಗೆಡಿಸಿದೆ. ಹೀಗಾಗಿ ಈ ಬಾರಿ ಸ್ಥಳೀಯ ಕಾಂಗ್ರೆಸ್ಸಿಗರು ಯಾವ ಪ್ರಮಾಣದಲ್ಲಿ ಬಿಜೆಪಿ ಪರ ನಿಲ್ಲುವರು ಎಂಬುದರ ಮೇಲೆ ಈ ಕ್ಷೇತ್ರ ಜೆಡಿಎಸ್‌ಗೆ ಸುಲಭದ ತುತ್ತೋ ಅಥವಾ ಹೋರಾಡಿ ಪಡೆಯುವ ಟ್ರೋಫಿಯೋ ಎಂಬುದು ನಿರ್ಧಾರವಾಗುತ್ತದೆ.

ನಟ ಅಂಬರೀಷ್ ‘ಹ್ಯಾಟ್ರಿಕ್ ಜಯಿಸಿದ್ದ ಕ್ಷೇತ್ರವಿದು

ಮಂಡ್ಯಲೋಕ ಸಭಾ ಕ್ಷೇತ್ರದಲ್ಲಿ ಇದುವರೆಗೂ ಮೂರು ಉಪ ಚುನಾವಣೆ ಸೇರಿ 15 ಬಾರಿ ಚುನಾವಣೆ ನಡೆದಿದೆ. ಎಂ.ಕೆ. ಶಿವನಂಜಪ್ಪ ಸತತ ೪ ಬಾರಿ, ಅಂಬರೀಷ್ ಸತತ 3 ಬಾರಿ, ಎಸ್. ಎಂ. ಕೃಷ್ಣ, ಜಿ. ಮಾದೇಗೌಡ ತಲಾ 2 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2009ರಲ್ಲಿ ಅಂಬರೀಷ್ ಅವರನ್ನು ಚೆಲುವರಾಯ ಸ್ವಾಮಿ ಮಣಿಸಿದ್ದರು. 2013ರ ಉಪಚುನಾವಣೆಯಲ್ಲಿ ರಮ್ಯಾ ಆಯ್ಕೆಯಾಗಿ, 2014ರಲ್ಲಿ ಪರಾಭವಗೊಂಡಿದ್ದರು.

8ಕ್ಕೆ ಎಂಟೂ ಕ್ಷೇತ್ರದಲ್ಲಿ  ಜೆಡಿಎಸ್ ಶಾಸಕರು

ಮಂಡ್ಯ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲ 7 ವಿಧಾನ ಸಭಾ ಕ್ಷೇತ್ರಗಳು (ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ಮೇಲುಕೋಟೆ) ಹಾಗೂ ನೆರೆಯ ಮೈಸೂರು ಜಿಲ್ಲೆಯ ಕೆ.ಆರ್. ನಗರ ವಿಧಾನ ಸಭಾ ಕ್ಷೇತ್ರಗಳಿವೆ. ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದಾರೆ.

ರೇಸ್‌ನಲ್ಲಿ ಯಾರು?

ಜೆಡಿಎಸ್: ಎಚ್.ಡಿ. ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಎಲ್.ಆರ್. ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್ ಗೌಡ

ಕಾಂಗ್ರೆಸ್: ಎನ್. ಚೆಲುವರಾಯಸ್ವಾಮಿ

ಬಿಜೆಪಿ: ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾಗಿದ್ದ ಸಿದ್ದರಾಮಯ್ಯ, ಕಿರಗಂದೂರು ವಿಜಯ್

-ಕೆ.ಎನ್. ರವಿ