ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು 'ಈಡಿಯಟ್' ಪದ ಬಳಸಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ನೀಟ್ ಪರೀಕ್ಷೆ ವಿಚಾರವಾಗಿ ಸುಳ್ಳು ಆರೋಪ ಮಾಡಿ ಭಾರಿ ಕೋಲಾಹಲ ಸೃಷ್ಟಿಸಿದರು. ಇದರಿಂದಾಗಿ ಬಿಜೆಪಿ ಸಂಸದರು ಕ್ಷಮೆಗೆ ಆಗ್ರಹಿಸಿದ್ದು, ಸ್ಪೀಕರ್ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಬೇಕಾಯಿತು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯಿಂದಾಗಿ ನಿನ್ನೆ ಭಾರಿ ಕೋಲಾಹಲವೇ ಸೃಷ್ಟಿಯಾಯಿತು. ಸಂಸತ್ತಿನಲ್ಲಿ ಕೆಲವೊಂದು ಪದಗಳ ಪ್ರಯೋಗ ಮಾಡಬಾರದು ಎನ್ನುವ ನಿಯಮ ಇದೆ. ಆದರೆ ಇದಾಗಲೇ ಹಲವಾರು ಬಾರಿ ಹಲವು ಸ್ಪೀಕರ್ ಅವರಿಂದ ರಾಹುಲ್ ಗಾಂಧಿ ಅವರು ಪಾಠ ಹೇಳಿಸಿಕೊಂಡಾಗಿದೆ. ವಿರೋಧ ಪಕ್ಷದ ನಾಯಕನಾದವರೊಬ್ಬರು ಇಷ್ಟು ಬಾರಿ ಪಾಠ ಹೇಳಿಸಿಕೊಂಡಿರುವ ಇತಿಹಾಸವೇ ಇಲ್ಲ ಎನ್ನುವ ಮಾತು ಕೂಡ ಇದಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿದೆ. ನಿನ್ನೆ ಅರ್ಥಾತ್ ಜುಲೈ 29ರ ಅಧಿವೇಶನದ ಸಮಯದಲ್ಲಿಯೂ ಈಡಿಯಟ್ ಎನ್ನುವ ಪದವನ್ನು ಪದೇ ಪದೇ ಹೇಳಿ, ಕೋಲಾಹಲ ಸೃಷ್ಟಿಸಿದರು. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದ ಟ್ರೋಲ್ ಆಗುತ್ತಿದ್ದಾರೆ ರಾಹುಲ್ ಗಾಂಧಿ. ಈಡಿಯಟ್ ಪದ ಅವರಿಗೆ ಈಗ ಮುಜುಗರ ಉಂಟುಮಾಡಿದೆ.
ನಿನ್ನೆ ಲೋಕಸಭೆಯಲ್ಲಿ ನಡೆಯುತ್ತಿದ್ದುದು ಪ್ರಶ್ನೆ ಪತ್ರಿಕೆ ಸೋರಿಕೆಯ ಸಮಯದಲ್ಲಿ ನೀಡಬಹುದಾದ ಶಿಕ್ಷೆ ಹಾಗೂ ಇತರ ಅಂಶಗಳನ್ನು ಇರುವ ಮಸೂದೆಯ ಕುರಿತ ಚರ್ಚೆ. ಇದರ ಬಗ್ಗೆ ಒಂದೇ ಒಂದು ಶಬ್ದವನ್ನೂ ಹೇಳದ ರಾಹುಲ್ ಗಾಂಧಿ, ತಮ್ಮ ಭಾಷಣವನ್ನು ಎಲ್ಲೆಲ್ಲೋ ಕೊಂಡೊಯ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಶುರು ಮಾಡಿಕೊಂಡರು. ಅದೂ ಸಾಲದು ಎನ್ನುವುದಕ್ಕೆ ತಾವು ಹೇಳುವುದನ್ನು ನಂಬುವ ಒಂದಷ್ಟು ವರ್ಗ ಇದೆ ಎನ್ನುವ ಕಾರಣಕ್ಕೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ, ಗೃಹ ಸಚಿವ ಅಮಿತ್ ಷಾ ಫೈಯರಿಂಗ್ಗೆ ಆದೇಶ ಹೊರಡಿಸಿದರು ಎಂದುಬಿಟ್ಟರು!
ಸಂಸತ್ತಿನಲ್ಲಿ ಕೋಲಾಹಲ
ಇದರಿಂದ ಸಂಸತ್ತಿನಲ್ಲಿ ಮತ್ತಷ್ಟು ಕೋಲಾಹಲ ಉಂಟಾಯಿತು. ಬಿಜೆಪಿ ಸಂಸದರು, ಸಚಿವರು ಕೆಂಡಾಮಂಡಲ ಆದರು. ಪ್ರತಿಭಟನೆಯ ಸಮಯದಲ್ಲಿ ಫೈಯರಿಂಗ್ ಆಗಿದ್ಯಾ ಎಂದು ಪ್ರಶ್ನಿಸಿದರು. ಅಲ್ಲಿ ನಡೆದದ್ದು ಅಶ್ರುವಾಯು ಪ್ರಯೋಗವಷ್ಟೇ. ಅಷ್ಟಕ್ಕೂ ಫೈಯರಿಂಗ್ ಆದೇಶ ಹೊರಡಿಸುವುದು ಗೃಹ ಸಚಿವ ಅಲ್ಲ, ಅದು ಮ್ಯಾಜಿಸ್ಟ್ರೇಟ್ ಸುಪರ್ದಿಗೆ ಬರುವಂಥದ್ದು. ಜೆನ್ ಜೀಗಳನ್ನು ಪ್ರೇರೇಪಿಸಲು, ಕೇಂದ್ರದ ವಿರುದ್ಧ ಅವರ ದಂಗೆ ಎಬ್ಬಿಸಲು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆ ಕೋರಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆಗ್ರಹಿಸಿದರು. ಬಿಜೆಪಿ ಸಚಿವರು ಕೂಡ ಇದನ್ನೇ ಆಗ್ರಹಿಸಿದರು.
ವಾತಾವರಣ ತಿಳಿಗೊಳಿಸಿದ ಸ್ಪೀಕರ್
ಕೊನೆಗೆ ಸ್ಪೀಕರ್ ವಾತಾವರಣವನ್ನು ತಿಳಿಗೊಳಿಸಿದರು. ಆದರೆ, ಈಡಿಯಟ್ ಶಬ್ದ ಮತ್ತು ಸುಳ್ಳು ಸುದ್ದಿಗಳ ಸೃಷ್ಟಿಯ ವಿರುದ್ಧ ರಾಹುಲ್ ಗಾಂಧಿ ಬಗ್ಗೆ ಜಾಲತಾಣಗಳಲ್ಲಿ ದೊಡ್ಡ ಹೋರಾಟವೇ ಶುರುವಾಗಿದೆ. ಹಿಂದೆ ಪ್ರಿಯಾಂಕಾ ಗಾಂಧಿ ಕೂಡ ಇದೇ ರೀತಿ ಸುಳ್ಳು ಹೇಳಿ ಗಲಭೆ ಸೃಷ್ಟಿಸಲು ನೋಡಿದ್ದರು. ಅದೂ ಸದನದಲ್ಲಿಯೇ ಸುಳ್ಳು ಮಾಹಿತಿ ನೀಡಿದ್ದರು. ಈಗ ರಾಹುಲ್ ಗಾಂಧಿ ಸರದಿ ಎಂದಿರುವ ಬಿಜೆಪಿ, ಇವರಿಬ್ಬರ ವಿರುದ್ಧ ಶಿಸ್ತಿನ ಕ್ರಮದ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.


