ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಗೊಂದಲ ಮುಂದುವರೆದರೆ ಪಕ್ಷಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದರು.

ಮೈಸೂರು (ಮೇ.7): ಮೈಸೂರಿನ ಟಿ.ಕೆ. ಲೇಔಟ್‌ನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಇಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಭೇಟಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ಸಿಎಂ ಜೊತೆ ಸುದೀರ್ಘ ಮಾತುಕತೆ ನಡೆಸಿದ ರಾಜಣ್ಣ, ನಂತರ ಮಾಧ್ಯಮಗಳ ಮುಂದೆ ಹೈಕಮಾಂಡ್‌ಗೆ ನೇರ ಸಂದೇಶ ರವಾನಿಸಿದ್ದಾರೆ.

Add Asianetnews Kannada as a Preferred SourcegooglePreferred

ಸಿಎಂ ಬದಲಾಗ್ತಾರೆ ಅಂತಾ ಹೇಳೋಲ್ಲ, ಬದಲಾಗೋಲ್ಲ ಅಂತಾನೂ ಹೇಳೋಲ್ಲ

ಸಿಎಂ ಭೇಟಿಯ ಬಳಿಕ ಮಾತನಾಡಿದ ರಾಜಣ್ಣ, 'ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳುವುದಿಲ್ಲ, ಇರುತ್ತಾರೆ ಎಂದು ಕೂಡ ನಾನು ಹೇಳುವುದಿಲ್ಲ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಅತಿ ಬೇಗ ಮತ್ತು ಜಾಗರೂಕವಾಗಿ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲಿ' ಎಂದು ಒತ್ತಾಯಿಸಿದರು.

ಗೊಂದಲ ಬೇಡ, ಗ್ರೀನ್ ಸಿಗ್ನಲ್ ಕೊಡಿ!

ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಿಎಂಗೆ ನೀವು ಪರಿಪೂರ್ಣ ಸ್ವತಂತ್ರರು, ಅಧಿಕಾರ ಮುಂದುವರೆಸಿ ಎಂಬ 'ಗ್ರೀನ್ ಸಿಗ್ನಲ್' ಆದರೂ ಕೊಡಲಿ ಅಥವಾ ಬದಲಾವಣೆ ಮಾಡುತ್ತೇವೆ ಎಂಬ ನಿರ್ಧಾರವನ್ನಾದರೂ ಪ್ರಕಟಿಸಲಿ. ಈ ಎರಡು ಬಿಟ್ಟು ಬರಿ ಗೊಂದಲವೇ ಮುಂದುವರಿದರೆ ಅದು ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ,' ಎಂದು ರಾಜಣ್ಣ ಎಚ್ಚರಿಸಿದರು.

ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ

ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಆಸೆಯ ಬಗ್ಗೆಯೂ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಆಸೆ ಇರುವುದು ಸಹಜ‌. ಅವರು ನಮ್ಮ ಪಕ್ಷದ ಅಧ್ಯಕ್ಷರು, ಹೀಗಾಗಿ ಅವರಿಗೆ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ. ಅದು ತಪ್ಪು ಕೂಡ ಅಲ್ಲ' ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.