ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ, ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಅವರು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಬೆಂಗಳೂರು (ಮೇ 30): ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇಂದು ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Karnataka New Chief Minister DK Shivakumar) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ, ಹೈಕಮಾಂಡ್ (Congress Highcommand) ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಧಾನಸೌಧದಲ್ಲಿ ನಡೆದ ಹೈವೋಲ್ಟೇಜ್ ಸಭೆ:

ಶನಿವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯನ್ನು ಏರ್ಪಡಿಸಲಾಗಿತ್ತು. ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್ ಶಾಸಕರು ಹಾಜರಿದ್ದರು. ಸಭೆಯ ಆರಂಭದಲ್ಲಿಯೇ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಪ್ರಸ್ತಾಪಿಸಿದರು. ಈ ಪ್ರಸ್ತಾವನೆಯನ್ನು ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದ ಶಾಸಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲಾ ಶಾಸಕರು ಡಿ.ಕೆ. ಶಿವಕುಮಾರ್ ಅವರ ಆಯ್ಕೆಯನ್ನು ಅನುಮೋದಿಸಿದರು.

ಹೈಕಮಾಂಡ್ ನಿರ್ಧಾರಕ್ಕೆ ಶಾಸಕರ ಸಹಮತ:

ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಹೈಕಮಾಂಡ್ ಈಗಾಗಲೇ ತೆರೆ ಎಳೆದಿತ್ತು. ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿ ಮತ್ತು ಪಕ್ಷಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಎಐಸಿಸಿ ನಾಯಕತ್ವ ಅವರ ಹೆಸರನ್ನು ಸೂಚಿಸಿತ್ತು. ಇಂದು ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಈ ಹೆಸರನ್ನು ಅಧಿಕೃತವಾಗಿ ಮಂಡಿಸುವ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಿದರು. ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಶಾಸಕರಿಗೆ ಮತ್ತು ಹಿರಿಯ ನಾಯಕ ಸಿದ್ದರಾಮಯ್ಯ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

ರಾಜಭವನದತ್ತ 'ಕನಕಪುರದ ಬಂಡೆ' ಪಯಣ:

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳಲಿದ್ದಾರೆ. ಶಾಸಕಾಂಗ ಪಕ್ಷದ ನಿರ್ಣಯದ ಪತ್ರದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ, ತಮಗೆ ಬಹುಮತ ಇರುವ ಬಗ್ಗೆ ಮಾಹಿತಿ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಈ ಪ್ರಕ್ರಿಯೆಯು ಮುಗಿದ ಕೂಡಲೇ ರಾಜಭವನದಿಂದ ಅಧಿಕೃತ ಆಹ್ವಾನ ಹೊರಬೀಳಲಿದೆ.

ಬುಧವಾರ ಪ್ರಮಾಣವಚನ ಸಮಾರಂಭ:

ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಈಗಾಗಲೇ ದಿನಾಂಕ ಮತ್ತು ಸಮಯ ನಿಗದಿಯಾಗಿದೆ. ಬರುವ ಬುಧವಾರ (ಜೂನ್ 3, 2026) ಸಂಜೆ 4.05 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ದೆಹಲಿಯ ಹೈಕಮಾಂಡ್ ನಾಯಕರು ಹಾಗೂ ನೆರೆಯ ರಾಜ್ಯಗಳ ಗಣ್ಯರು ಸಾಕ್ಷಿಯಾಗಲಿದ್ದಾರೆ.